Fact Check : ಫ್ಲಿಪ್‌ಕಾರ್ಟ್‌ನಲ್ಲಿ 99% ರಿಯಾಯತಿ ಎಂಬ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಹಾವಳಿ, ಗ್ರಾಹಕರು ವಂಚನೆಗೊಳಗಾಗದಿರಿ

ಬಿಗ್‌ ಬಿಲಿಯನ್‌ ಸೇಲ್‌ ಹೆಸರಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿದಂತೆ ಹಲವು ಅಪ್ಲಿಕೇಷನ್ಗಳು ಆಗಾಗ ಗ್ರಾಹಕರನ್ನು ಆಕರ್ಷಿಸುತ್ತವೆ. ಆದರೆ, ” ಫ್ಲಿಪ್‌ಕಾರ್ಟ್‌ ಶೇಕಡಾ 99ಕ್ಕಿಂತ ಹೆಚ್ಚು ರಿಯಾಯಿತಿ ನೀಡುತ್ತಿದೆ. ಇದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ ಆಫರ್‌!!!” ಎಂದು ರೂ 80,000 ಆಪಲ್ ವಾಚ್ ರೂ 500 ಕ್ಕಿಂತ ಕಡಿಮೆ; ದುಬಾರಿ ಕ್ಯಾನನ್ ಡಿಎಸ್ಎಲ್ಆರ್ಗಳು, ಎಲ್ಜಿ ವಾಷಿಂಗ್ ಮೆಷಿನ್ಗಳು ಮತ್ತು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಇತರೆ ದುಬಾರಿ ವಸ್ತುಗಳನ್ನು ಉಲ್ಲೇಖಿಸಿ ವೆಬ್‌ಸೈಟ್‌ ಲಿಂಕನ್ನು ಹಂಚಿಕೊಳ್ಳಲಾಗುತ್ತಿದೆ.

 

ಅಕ್ಷರಶಃ ನಂಬಲಾಗದ ರಿಯಾಯಿತಿ ಭರವಸೆಗಳನ್ನು ನೀಡುವ ಪೋಸ್ಟ್‌ಗಳಲ್ಲಿ ಲಿಂಕ್ ಮಾಡಲಾದ ವೆಬ್‌ಸೈಟ್ ಕೂಡ ಫ್ಲಿಪ್‌ಕಾರ್ಟ್‌ನಂತೆಯೇ ಗೋಚರಿಸುತ್ತದೆ.  ಬಿಗ್ ಬಿಲಿಯನ್ ಡೇಸ್ ಸೇಲ್ ಸ್ಟ್ಯಾಂಪ್ ಅನ್ನು ಸಹ ಹೊಂದಿದ್ದು ಒಂದು ಕ್ಷಣ ಗ್ರಾಹಕರು ಇದನ್ನು ನಿಜವೆಂದು ಭಾವಿಸಬಹುದು.

 

ಫ್ಯಾಕ್ಟ್‌ ಚೆಕ್‌

ಈ ವೆಬ್‌ಸೈಟ್‌ನಲ್ಲಿ ನೀವು ಇಷ್ಟವಿರುವ ಉತ್ಪನ್ನವನ್ನು ಆಯ್ಕೆಮಾಡಿ ” ಖರೀದಿಸು” ಬಟನ್‌ಗೆ ಕ್ಲಿಕ್ ಮಾಡಿದಾಗ, ಇದು ನಿಮ್ಮನ್ನು ಹೊಸ ವೆಬ್ ಪುಟಕ್ಕೆ ಕರೆದೊಯ್ಯುತ್ತದೆ ಮತ್ತು ನಿಮ್ಮ ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆಯಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಕೇಳುತ್ತದೆ. ಈ ರೀತಿಯ ವೆಬ್‌ಸೈಟ್‌ಗಳು ನಿಮ್ಮ ಮಾಹಿತಿಯನ್ನು ಇತರರಿಗೆ ಮಾರಾಟ ಮಾಡಲು ಅಥವಾ ಹಣಕಾಸಿನ ವಂಚನೆ ಮಾಡಲು ನಿಮ್ಮ ವಿವರಗಳನ್ನು ಬಳಸಿಕೊಳ್ಳುತ್ತವೆ ಎಂಬುದರ ಬಗ್ಗೆ ನಿಮಗೆ ಅರಿವಿರಬೇಕು.

ನೀವು ವೈಯಕ್ತಿಕ ಮಾಹಿತಿ ಹಾಗೂ ವಿಳಾಸ ಹಾಕಿದ ಕೂಡಲೇ ಈ ಪೇಜ್‌ಗಳು ಮತ್ತೊಂದು ಪುಟಕ್ಕೆ ತೆರೆದುಕೊಳ್ಳುತ್ತದೆ. ಮತ್ತು “ಆರ್ಡರ್ ಸಾರಾಂಶ” ಸೇರಿದಂತೆ “ಇಲ್ಲಿ ಹಣ ಪಾವತಿಸಿ” ಎಂದು ಕೇಳುತ್ತದೆ. ಕೆಲವೊಮ್ಮೆ ಇಷ್ಟೇ ಸಮಯದೊಳಗೆ ನೀವು ಹಣ ಪಾವತಿಸಬೇಕೆಂದೂ ಪಾವತಿಸದೇ ಇದ್ದರೇ ನಿಮಗೆ ರಿಯಾಯತಿ ದರದಲ್ಲಿ ಉತ್ಪನ್ನಗಳು ಲಭಿಸುವುದಿಲ್ಲ ಎಂದೂ ಸಂದೇಶ ಬರಲಾರಂಭಿಸುತ್ತದೆ.

ನೈಜ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಅಥವಾ ಇತರೆ ಅಪ್ಲಿಕೇಶನ್‌ಗಿಂತ ಭಿನ್ನವಾಗಿ, ಹಣ ಪಾವತಿಗಳ ಪುಟವು PayTM, PhonePe ಮತ್ತು BHIM UPIನಂತಹ ಮೂರು ಆಯ್ಕೆಗಳನ್ನು ಮಾತ್ರ ಹೊಂದಿರುತ್ತದೆ. ಇಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಅಥವಾ ಕ್ಯಾಶ್ ಆನ್ ಡೆಲಿವರಿ ಮೂಲಕ ಪಾವತಿಗಳನ್ನು ಅನುಮತಿಸುವುದಿಲ್ಲ. ನೀವು ಮೂರು ಆಯ್ಕೆಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿ ಮತ್ತು “ಈಗ ಖರೀದಿಸಿ” ಕ್ಲಿಕ್ ಮಾಡಿದರೆ, ಅದು ಕೆಲಸ ಮಾಡುವುದಿಲ್ಲ. ಇಲ್ಲಿಗೆ ಈ ವೆಬ್‌ಸೈಟ್‌ ಕಾರ್ಯನಿರ್ವಹಿಸದೇ ನಿಂತು ಬಿಡುತ್ತದೆ.

ಹಾಗಾಗಿ, ಈ ವೆಬ್‌ಸೈಟ್‌ನ ಏಕೈಕ ಉದ್ದೇಶವು ಕೇವಲ ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇನ್ನು DomainTools ಅನ್ನು ಬಳಸಿ “exclisivese.live” ಬಗ್ಗೆ ಹುಡುಕಾಟ ನಡೆಸಿದಾಗ ಈ ವೆಬ್‌ಸೈಟ್ ಸುಲಿಗೆ, ಮಾಲ್‌ವೇರ್ ಮತ್ತು ಸುಳ್ಳು ಹರಡುತ್ತಿರುವುದಾಗಿ ವರದಿಯಾಗಿದೆ.

“ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 27ರಂದು ಪ್ರಾರಂಭವಾಗಿತ್ತು ಮತ್ತು ಅಕ್ಟೋಬರ್ 6ರಂದು ಕೊನೆಗೊಂಡಿದೆ. ಹಾಗಾಗಿ, ಈ ರೀತಿಯ ಪೋಸ್ಟ್‌ಗಳು ನಿಮಗೆ ಬರುತ್ತಿದ್ದರೆ ಇದು ವಂಚನೆ ಎಂದು ನಿಮಗೆ ತಿಳಿದಿರಲಿ. exclisivese.live ವೆಬ್‌ಸೈಟ್ ಇ-ಕಾಮರ್ಸ್ ಬ್ರಾಂಡ್‌ಗೆ ಯಾವುದೇ ರೀತಿಯಲ್ಲಿ ಸಂಯೋಜಿತವಾಗಿಲ್ಲ” ಎಂದು ಫ್ಲಿಪ್‌ಕಾರ್ಟ್‌ನಲ್ಲಿ ಕಾರ್ಪೊರೇಟ್ ವ್ಯವಹಾರಗಳು ಮತ್ತು ಬಾಹ್ಯ ಸಂವಹನಗಳ ಸಹಾಯಕ ನಿರ್ದೇಶಕಿ ಪ್ರಿಯಾಂಕಾ ಸೆರಾವೊ ಮಾಹಿತಿ ನೀಡಿದ್ದಾರೆ.

ಇಂತಹ ಮೋಸದ ಸೈಟ್‌ಗಳನ್ನು ವರದಿ ಮಾಡಲು ಮತ್ತು ತೆಗೆದುಹಾಕಲು ಫ್ಲಿಪ್‌ಕಾರ್ಟ್ ಪ್ರಕ್ರಿಯೆಗಳನ್ನು ಸಂಗ್ರಹಿಸುತ್ತಿದೆ ಮತ್ತು ಜನರು ವಂಚನೆಗೊಳಗಾಗುವುದನ್ನು ತಪ್ಪಿಸಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳನ್ನು ಹೈಲೈಟ್ ಮಾಡಲು ಕಂಪನಿಯ ಇತ್ತೀಚಿನ ಬ್ಲಾಗ್ ಪೋಸ್ಟ್ ಅನ್ನು ಹಂಚಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಒಟ್ಟಠರೆಯಾಗಿ 99 ಪ್ರತಿಶತ ರಿಯಾಯಿತಿಗಳು ಎಂಬುದು ಸುಳ್ಳಾಗಿದ್ದು, ವೈಯಕ್ತಿಕ ಮಾಹಿತಿಯನ್ನು ಕದಿಯಲು ಈ ರೀತಿ ವೆಬ್‌ಸೈಟುಗಳನ್ನು ಸಂಯೋಜಿಸಲಾಗಿದೆ.


 

ಇದನ್ನು ಓದಿದ್ದೀರಾ? : Fact Check : ಲೆಬನಾನ್‌ ನಟಿ ಮೌಲವಿಗೆ ಕಪಾಳಮೋಕ್ಷ ಮಾಡಿದ್ದಾಳೆ ಎಂದು ಟಿವಿ ಶೋ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ

 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *