Fact Check | ಮುಸ್ಲಿಂ ಅಪ್ರಾಪ್ತರು ಹಿಂದೂ ಮಹಿಳೆಗೆ ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿಯ ಸುಲ್ತಾನಪುರಿ ಪ್ರದೇಶಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಕೆಲ ಹದಿಹರೆಯದವರು ಮಹಿಳೆಗೆ ಚಾಕು ತೋರಿಸಿ ಬೆದರಿಸುತ್ತಿರುವುದನ್ನು ಕಾಣಬಹುದು. ಈ ಅಪ್ರಾಪ್ತರನ್ನು ಜೊತೆ ಒಬ್ಬ ವಯಸ್ಕನಿದ್ದು ಇವರೆಲ್ಲ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರು ಹಿಂದೂ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ವಿಡಿಯೋ ಚರ್ಚೆಯನ್ನು ಹುಟ್ಟು ಹಾಕಿದೆ.

ಈ ವಿಡಿಯೋ ನೋಡಿದ ಬಹುತೇಕ ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು, ಬಹುಸಂಖ್ಯಾತರಾದ ಹಿಂದೂಗಳಿಗೆ ರಕ್ಷಣೆಯೇ ಇಲ್ಲ ಎಂದು ಹಲವರು ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕಾನೂನಿನ ಪ್ರಕಾರ ಅಪ್ರಾಪ್ತರ ಹೆಸರು ಬಹಿರಂಗ ಪಡಿಸಬಾರದು ಎಂಬ ನಿಯಮವಿರುವ ಕಾರಣ ಹಲವರು ಆ ಅಪ್ರಾಪ್ತ ಬಾಲಕರು ಮುಸಲ್ಮಾನರು ಎಂದು ಭಾವಿಸಿದ್ದಾರೆ. ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿರುವುದರಿಂದ ಸಾಕಷ್ಟು ವೈರಲ್‌ ಕೂಡ ಆಗುತ್ತಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕೋಮು ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಇಂಡಿಯಾ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಟೋಬರ್ 3 ರಂದು ಅಪ್‌ಲೋಡ್ ಮಾಡಿದ ವೀಡಿಯೊ ಸುದ್ದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ, ದೆಹಲಿಯ ಸುಲ್ತಾನ್‌ಪುರಿಯಲ್ಲಿ ಕೆಲ ಹದಿಹರೆಯದವರು ಕಿಕ್ಕಿರಿದ ಮಾರುಕಟ್ಟೆಯಲ್ಲಿ ಮಹಿಳೆಗೆ ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ. ರಾಜ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿಹರೆಯದವರು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. 

 

ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಮಿಲೇನಿಯಮ್ ಪೋಸ್ಟ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯೊಂದು ಕಂಡು ಬಂದಿದ್ದು, ಅದರ ಪ್ರಕಾರ ಮಹಿಳೆಯ ಹೆಸರು ಮಮತಾ ದೇವಿ. ಅವರು ಅಕ್ಟೋಬರ್ 1 ರಂದು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿಯು ವಯಸ್ಕನಾಗಿದ್ದು ಆತನ ಹೆಸರು ರಾಕೇಶ್, ಮತ್ತೊಬ್ಬ ಆರೋಪಿಯ ವಯಸ್ಸು 17 ವರ್ಷ ( ಕಾನೂನಿನ ಪ್ರಕಾರ ಅಪ್ರಾಪ್ತ ಬಾಲಕ/ಕಿ ಯರ ಹೆಸರುಗಳನ್ನು ಬಹಿರಂಗ ಪಡಿಸುವಂತಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅಪ್ರಾಪ್ತರ ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ)

ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ , ಈ ಘಟನೆ ಸೆಪ್ಟೆಂಬರ್ 22 ರಂದು ನಡೆದಿದೆ. ರಾಕೇಶ್ ಹಾಗೂ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.ಈ ಬಗ್ಗೆ ರಾಜ್ ಪಾರ್ಕ್ ಪೊಲೀಸ್ ಠಾಣೆಯ ಪ್ರಭಾರಿ ವೀರೇಂದ್ರ ಸಿಂಗ್ ಅವರು, ಈ ವಿಷಯದಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ಹೇಳುತ್ತಾರೆ. ಆರೋಪಿ ಮತ್ತು ಸಂತ್ರಸ್ತೆ ಒಂದೇ ಸಮುದಾಯಕ್ಕೆ ಸೇರಿದವರು. ಕೋಮು ಬಣ್ಣದೊಂದಿಗೆ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರ ಪ್ರೊಫೈಲ್ ಅನ್ನು ನಾವು ಸ್ಕ್ಯಾನ್ ಮಾಡಿದ್ದೇವೆ  ಎಂದು ಪೊಲೀಸರು ಕೂಡ ಮಾಹಿತಿಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ದೆಹಲಿಯ ಸುಲ್ತಾನಪುರಿ ಪ್ರದೇಶದ ರಾಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಬೆದರಿಕೆ ಮತ್ತು ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿರುವುದು ನಿಜ. ಆದರೆ  ಈ ಪ್ರಕರಣದಲ್ಲಿ ಆರೋಪಿ ಮತ್ತು ಸಂತ್ರಸ್ತೆ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ವೈರಲ್‌ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : Fact Check | ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಕುರ್‌ಆನ್‌ ಓದಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *