Fact Check: ಪೆರಿಯಾರ್ ತನ್ನ ಅನುಯಾಯಿಯನ್ನು ಮದುವೆಯಾದರೆ ಹೊರತು ಮಗಳನ್ನಲ್ಲ

ಇತ್ತೀಚೆಗೆ ದ್ರಾವಿಡ ಚಳುವಳಿಯ ಹರಿಕಾರ ಮತ್ತು “ತಮಿಳು ಸ್ವಾಭಿಮಾನ ಚಳುವಳಿ”ಯ ನಾಯಕರಾದ ಈರೋಡ್ ವೆಂಕಟಪ್ಪ ರಾಮಸ್ವಾಮಿ ಅಥವಾ ತಂದೆ ಪೆರಿಯಾರ್ ಅವರ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಮತ್ತು ದ್ವೇಷವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ. ಪೆರಿಯಾರ್ ಅವರು ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದರು ಎಂಬ ಸುದ್ದಿಯನ್ನು ಸಾಕಷ್ಟು ಜನರು ಹಂಚಿಕೊಂಡು ವ್ಯವಸ್ಥಿತವಾಗಿ ಪೆರಿಯಾರ್ ಅವರ ಹೆಸರಿಗೆ ಕಳಂಕ ತರಲು ಪ್ರಯತ್ನಿಸಲಾಗುತ್ತಿದೆ.

ಈ ಅಪಪ್ರಚಾರ ದೇಶದಾದ್ಯಂತ ಸಾಕಷ್ಟು ನಡೆಯುತ್ತಿದ್ದು, ಪೆರಿಯಾರ್ ರವರನ್ನು ತಪ್ಪಾಗಿ ವ್ಯಾಖ್ಯಾನಿಸಿ ಅವರ ವಿಚಾರಧಾರೆಗಳನ್ನು ಅಪ್ರಸ್ತುತಗೊಳಿಸುವ ಹುನ್ನಾರಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಈ ಲೇಖನದ ಮೂಲಕ ಪೆರಿಯಾರ್ ಅವರ ವೈವಾಹಿಕ ಜೀವನದ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಪ್ರಯತ್ನ ಇದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಲಪಂಥೀಯ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿಗರು ಪೆರಿಯಾರ್ ಅವರ ಕುರಿತು ಆಕ್ಷೇಪರ್ಹ ಹೇಳಿಕೆಗಳಿಂದ ಅವರನ್ನು ತುಚ್ಛವಾಗಿ ಚಿತ್ರಿಸಿರುವ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅಪ್ರಮೇಯ ಅಸ್ತಿತ್ವ ಎಂಬ ನಕಲಿ ಖಾತೆಯಿಂದ ಈ ಸಂದೇಶವನ್ನು ಹರಿಬಿಡಲಾಗಿದ್ದು ಇದನ್ನು 400 ಹೆಚ್ಚು ಜನ ಇಷ್ಟಪಟ್ಟಿದ್ದು 250ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.

ಫ್ಯಾಕ್ಟ್‌ ಚೆಕ್:

ಪೆರಿಯಾರ್ ರಾಮಸ್ವಾಮಿಯವರು ತಮ್ಮ ದತ್ತು ಮಗಳಾದ ಮಣಿಯಮ್ಮೈ ಅವರನ್ನು ಎರಡನೇ ಮದುವೆಯಾದರು ಎಂಬುದು ಸುಳ್ಳು. ಪೆರಿಯಾರ್ ರಾಮಸಾಮಿ ಅವರು 19 ವರ್ಷದವರಾಗಿದ್ದಾಗ ನಾಗಮ್ಮಾಯಿ ಅವರನ್ನು ಮದುವೆಯಾದರು. ನಾಗಮ್ಮಾಯಿ ಅವರು ಸಾಮಾಜಿಕ ಕಾರ್ಯಕರ್ತೆ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿದ್ದರು. ಇವರು ಸ್ವಾಭಿಮಾನಿ ಚಳುವಳಿ ಮತ್ತು ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಪೆರಿಯಾರ್ ಮತ್ತು ನಾಗಮ್ಮಾಯಿ ಅವರಿಗೆ ಹುಟ್ಟಿದ ಮಗು ಕೇವಲ ಐದು ತಿಂಗಳ ನಂತರ ಅಸುನೀಗಿತು. ನಾಗಮ್ಮಾಯಿ ಮತ್ತು ಅವರ ಅತ್ತಿಗೆ ಕನ್ನಮಾಲ್ ಸೇರಿ ಮಹಿಳೆಯರನ್ನು ಸಂಘಟಿಸಿ ತಮಿಳುನಾಡಿನಲ್ಲಿ ಸಾರಾಯಿ ನಿ‍ಷೇಧ ಚಳುವಳಿಯನ್ನು ದೊಡ್ಡಮಟ್ಟದಲ್ಲಿ ಆರಂಭಿಸಿದರು. ನಂತರ ತಿರುವನಂತಪುರಂ ಪ್ರಾಂತ್ಯದಲ್ಲಿ ದೇವಾಲಯಗಳಿಗೆ ದಲಿತರ ಪ್ರವೇಶದ ನಿಷೇಧವನ್ನು ವಿರೋಧಿಸಿ ಚಳುವಳಿ ಆರಂಭಿಸಿದರು. ಪೆರಿಯಾರ್ ಅವರು ಆರಂಭಿಸಿದ ಸ್ವಾಭಿಮಾನಿ ಚಳುವಳಿಗೆ ಮಹಿಳೆಯರು ಸೇರಲು ಬೆಂಬಲಿಸಿದರು ಮತ್ತು ಅನೇಕ ವಿಧವಾ ಮರುವಿವಾಹ ಮಾಡಿಸಿದರು. 1933ರಲ್ಲಿ ನಾಗಮ್ಮಾಯಿ ಅವರು ನಿಧನರಾದರು. 

ಮಣಿಯಮ್ಮೈ ಯಾರು?

ಜಸ್ಟಿಸ್ ಪಾರ್ಟಿಯ ಸದಸ್ಯರಾಗಿದ್ದ ವೆಲ್ಲೂರಿನ ಕನಗಸಾಬಾಯಿ ಮುದಲಿಯಾರ್ ಅವರಿಗೆ ಗಾಂಧಿಮತಿ ಜನಿಸಿದರು. ತನ್ನ ತಂದೆಯ ಮರಣದ ನಂತರ, ಗಾಂಧಿಮತಿ 1942-43 ರಲ್ಲಿ ಪೆರಿಯಾರ್ ಸ್ಥಾಪಿಸಿದ ದ್ರಾವಿಡರ್ ಕಳಗಂ ಸೇರಿದರು. ಅವರು ತನ್ನನ್ನು ಅರಸಿಯಲ್ಮಣಿ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದಳು. ನಂತರ ಅವರು ಪೆರಿಯಾರ್ ಅವರ ಆಪ್ತ ಸಹಾಯಕರಾದರು, ಪೆರಿಯಾರ್ ಅವರು ಅನಾರೋಗ್ಯದಲ್ಲಿದ್ದ ಸಂದರ್ಭದಲ್ಲಿ ಕೊನೆಯವರೆಗೂ ನೋಡಿಕೊಂಡರು. ಪೆರಿಯಾರ್ ಅವರನ್ನು “ಮಣಿಯಮ್ಮೈ” ಎಂದು ಕರೆಯಲಾರಂಭಿಸಿದರು. ಮಣಿಯಮ್ಮೈ ಮದುವೆಯಲ್ಲಿ ಆಸಕ್ತಿ ಹೊಂದಿರಲಿಲ್ಲ ಮತ್ತು ಸಮಾಜವು ಮಹಿಳೆಯರಿಗೆ ಸೂಚಿಸಿದ ಜೀವನವನ್ನು ನಡೆಸಲು ನಿರಾಕರಿಸಿದಳು. ಅವರು ಸಂಸ್ಥೆಗೆ ಬದ್ಧರಾಗಿದ್ದರು ಮತ್ತು ಪೆರಿಯಾರ್ ಅವರ ಅತ್ಯಂತ ವಿಶ್ವಾಸಾರ್ಹ ಅನುಯಾಯಿಯಾದರು.

ಪೆರಿಯಾರ್ ರಾಮಸ್ವಾಮಿ ಅವರು ಮಣಿಯಮ್ಮೈ ಅವರನ್ನು ಮದುವೆಯಾದ ಪ್ರಸಂಗ:

1949ರ ಮೇ 14ರಂದು ತಿರುವಣ್ಣಾಮಲೈನಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆಯಿತು. ಆಗಿನ ಭಾರತದ ಗವರ್ನರ್ ಜನರಲ್ ರಾಜಾಜಿ ದೇವಾಲಯ ಪಟ್ಟಣಕ್ಕೆ ಭೇಟಿ ನೀಡಿದ್ದರು. ದ್ರಾವಿಡರ್ ಕಳಗಂ ಸಂಸ್ಥಾಪಕ ಪೆರಿಯಾರ್ (ಇ.ವಿ.ರಾಮಸಾಮಿ ನಾಯ್ಕರ್) ಮತ್ತು ಅವರ ಆಪ್ತ ಸಹಾಯಕ ಮಣಿಯಮ್ಮೈ ಅವರನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.  ದ್ರಾ.ಕ ಪ್ರಧಾನ ಕಾರ್ಯದರ್ಶಿ ಮತ್ತು ಪೆರಿಯಾರ್ ಅವರ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟ ಸಿ.ಎನ್.ಅಣ್ಣಾದೊರೈ(ಅಣ್ಣಾ) ಅವರು ಪೆರಿಯಾರ್ ಮತ್ತು ರಾಜಾಜಿಯವರ ನಡುವೆ ನಡೆದ ಚರ್ಚೆಯ ಕುರಿತು ಅನೇಕ ಸಂದರ್ಭದಲ್ಲಿ ಹೇಳುವಂತೆ ಪೆರಿಯಾರ್ ಅವರನ್ನು ಪ್ರಚೋದಿಸಿದರು. ಆದರೆ ಪೆರಿಯಾರ್ ಅವರು ತಿಳಿಸಲು ನಿರಾಕರಿಸಿದರು.

ಜೂನ್ 19, 1949 ರಂದು, ಪೆರಿಯಾರ್ ವಿದುತಲೈನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು, “ನನ್ನ ಅನಾರೋಗ್ಯದ ದೃಷ್ಟಿಯಿಂದ, ನಾನು ಸಂಸ್ಥೆಯನ್ನು ಸಮರ್ಥ ವ್ಯಕ್ತಿಗೆ ಹಸ್ತಾಂತರಿಸಲು ಬಯಸಿದ್ದೆ ಆದರೆ ಅಂತಹ ಒಬ್ಬ ವ್ಯಕ್ತಿಯನ್ನು ಸಹ ನಾನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದ್ದರಿಂದ, ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸುವ ಉತ್ತರಾಧಿಕಾರಿಯನ್ನು ನೇಮಿಸಲು ನಾನು ನಿರ್ಧರಿಸಿದ್ದೇನೆ. ಈ ಪರಿಸ್ಥಿತಿಯನ್ನು ಚರ್ಚಿಸಲು ನಾನು ರಾಜಾಜಿಯವರನ್ನು ಭೇಟಿಯಾದೆ.” ಎಂದರು. ಇದು ದ್ರಾವಿಡರ್ ಕಳಗಂನಲ್ಲಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿತು, ಏಕೆಂದರೆ ಕೆಲವೇ ತಿಂಗಳುಗಳ ಹಿಂದೆ ಅವರು ದ್ರಾ.ಕ ಅನ್ನು ಅಣ್ಣಾಗೆ ಹಸ್ತಾಂತರಿಸಲು ಬಯಸಿದ್ದರು, ಮತ್ತು ನಂತರ ಅವರ ನಿರ್ಧಾರವನ್ನು ಬದಲಾಯಿಸಿದ್ದರು.

ಪೆರಿಯಾರ್ ಅವರು ಮಣಿಯಮ್ಮೈ ಅವರ ಅಧ್ಯಕ್ಷತೆಯಲ್ಲಿ ತಮ್ಮ ವೈಯಕ್ತಿಕ ಆಸ್ತಿ ಮತ್ತು ದ್ರಾವಿಡರ್ ಕಳಗಂ ವೈಯಕ್ತಿಕ ಆಸ್ತಿಗಾಗಿ ಟ್ರಸ್ಟ್ ಸ್ಥಾಪಿಸಲು ಬಯಸಿದ್ದರು. ತಮ್ಮನ್ನು ಐದು ವರ್ಷಗಳಿಂದ ನೋಡಿಕೊಂಡಿದ್ದ ಮತ್ತು ದ್ರಾವಿಡರ್ ಕಳಗಂ ತತ್ವ-ಸಿದ್ದಾಂತಗಳಿಗೆ ನಿಷ್ಠರಾಗಿದ್ದ ಮಣಿಯಮ್ಮಾಯಿ ಅವರನ್ನು ತಮ್ಮ ರಾಜಕೀಯ ಮತ್ತು ವೈಯಕ್ತಿಕ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಘೋಷಿಸಿದರು. ಮಣಿಯಮ್ಮಾಯಿ ಮಹಿಳೆಯಾಗಿರುವುದರಿಂದ ಅವರನ್ನು ಉತ್ತರಾಧಿಕಾರಿ ಎಂದು ಹೆಸರಿಸಲು ಸಾಧ್ಯವಿಲ್ಲ ಎಂದು ಪೆರಿಯಾರ್ ಅವರ ಆಪ್ತ ಮೂಲಗಳು ಸೂಚಿಸಿದ್ದವು, ಆದ್ದರಿಂದ ಅವರು ಆಕೆಯನ್ನು ಮದುವೆಯಾಗಲು ಕಾನೂನು ಮಾರ್ಗವನ್ನು ತೆಗೆದುಕೊಂಡರು, ಇದರಿಂದಾಗಿ ಅವರು ಅವರ ಕಾನೂನುಬದ್ಧ ಉತ್ತರಾಧಿಕಾರಿಯಾಗಬಹುದು ಎಂದು ಪೆರಿಯಾರ್ ಭಾವಿಸಿ ಅದರಂತೆ ತಮ್ಮ 72ನೇ ವಯಸ್ಸಿನಲ್ಲಿ ಮಣಿಯಮ್ಮಾಯಿ ಅವರನ್ನು ಮದುವೆಯಾದರು. 

ಇದರಿಂದ ದ್ರಾವಿಡರ್ ಕಳಗಂನಲ್ಲಿ ಸಾಕಷ್ಟು ಗೊಂದಲಗಳೆದ್ದವು. ಪೆರಿಯಾರ್ ಅವರು ಮದುವೆ ಪ್ರಸ್ತಾಪ ಮಾಡಿದಾಗ ಅನೇಕ ಜನ ದ್ರಾ.ಕ ಮುಖಂಡರು ಪೆರಿಯಾರ್ ಅವರ ಮನವೊಲಿಸಲು ನೋಡಿದರು. ಆದರೆ ಸಾದ್ಯವಾಗಲಿಲ್ಲ. ನಂತರ ಇದು ಅಣ್ಣಾದೊರೈ ಮತ್ತು ಪೆರಿಯಾರ್ ಅವರ ನಡುವಿನ ಮನಸ್ಥಾಪಕ್ಕೂ ಕಾರಣವಾಯಿತು. ಮುಂದೆ ಅಣ್ಣಾದೊರೈ ಅವರು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸ್ಥಾಪನೆಗೂ ಕಾರಣವಾಯಿತು. ಆದರೆ ಪೆರಿಯಾರ್ ಅವರ ತತ್ವ-ಸಿದ್ದಾಂತದಲ್ಲಿಯೇ ಮುಂದುವರೆಯುವುದಾಗಿ ಅಣ್ಣಾ ಹೇಳಿದರು. ಈ ಕುರಿತು “ದ್ರಾವಿಡರನ್ನು ವಿಭಜಿಸಿದ ಸೆಪ್ಟೆಂಬರ್: ಪೆರಿಯಾರ್ ಮಣಿಯಮ್ಮೈ ಅವರನ್ನು ವಿವಾಹವಾದರು, ಡಿಎಂಕೆ ಹುಟ್ಟಿಕೊಂಡಿತು” ಎಂಬ ದ ನ್ಯೂಸ್‌ ಮಿನಟ್ ಅವರ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಮಣಿಯಮ್ಮೈ ಅವರು 1973ರಲ್ಲಿ ಪೆರಿಯಾರ್ ಮರಣದ ನಂತರ ಅವರ ರಾಜಕೀಯ ಚಳುವಳಿಯ (ದ್ರಾವಿಡರ್ ಕಳಗಂ) ವಾರಸುದಾರರಾದರು. ಪೆರಿಯಾರ್ ಅವರು ಮಣಿಯಮ್ಮೈ ಅವರನ್ನು ತಮ್ಮ ನಂತರದ ಉತ್ತರಾಧಿಕಾರಿಯಾಗಿ ಘೋಷಿಸುವುದರ ಹಿಂದೆ, ಅವರು ಬದುಕಿನ ಪೂರ್ತಿ ಹೋರಾಡಿ, ಕಟ್ಟಲು ಪ್ರಯತ್ನಿಸಿದ ಸ್ತ್ರೀವಾದಿ ಮಹಿಳಾ ಚಳುವಳಿಯನ್ನು ಮಣಿಯಮ್ಮೈ ಮುನ್ನಲೆಗೆ ತರಬೇಕು ಎಂಬ ಉದ್ದೇಶದಿಂದ ಮತ್ತು ದ್ರಾವಿಡರ್ ಕಳಗಂ ವಾರಸುದಾರರಾಗಿ ತನ್ನ ಕಟ್ಟರ್ ಅನುಯಾಯಿಯಾದ ಮಣಿಯಮ್ಮೈ ಮುಂದುವರೆಯಲಿ ಎಂದು ಅನಿವಾರ್ಯವಾಗಿ ಅವರನ್ನು ಮದುವೆಯಾದರು. 

“ಅವರು ಪೆರಿಯಾರ್ ಅವರ ವೃದ್ಧಾಪ್ಯದಲ್ಲಿ ಅವರ ಆರೈಕೆದಾರರಾಗಿದ್ದರು ಮತ್ತು ನಂತರ ಅವರ ರಾಜಕೀಯ ಉತ್ತರಾಧಿಕಾರಿಯಾದರು. ಪೆರಿಯಾರ್ ಅವರು ತಮ್ಮ ವೈಯಕ್ತಿಕ ಆಸ್ತಿಗಾಗಿ ಸ್ಥಾಪಿಸಲಾದ ಟ್ರಸ್ಟ್‌ನ ಕೆಲಸವನ್ನು ಮುಂದುವರಿಸಲು ಮತ್ತು ರಾಜಕೀಯದಿಂದ ದಾರಿತಪ್ಪದೆ ಕಲ್ಯಾಣ ಕ್ರಮಗಳನ್ನು ಮುಂದುವರಿಸಲು ಅವರನ್ನು ಅತ್ಯುತ್ತಮ ವ್ಯಕ್ತಿ ಎಂದು ಪರಿಗಣಿಸಿದರು ಮತ್ತು ಇತರರಿಗಿಂತ ಅವರನ್ನು ಆಯ್ಕೆ ಮಾಡಿದರು. 1949 ರಲ್ಲಿ ಅವರ ವಿವಾಹವು ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿಯನ್ನಾಗಿ ಮಾಡಿತು ಮತ್ತು 1973 ರಲ್ಲಿ ಪೆರಿಯಾರ್ ಅವರ ಮರಣದ ನಂತರ, ಅವರು ಅಧಿಕಾರ ವಹಿಸಿಕೊಂಡರು ಮತ್ತು ಅವರು ಸಾಯುವವರೆಗೂ ದ್ರಾವಿಡರ್ ಕಳಗಂನ ನಾಯಕಿಯಾಗಿ ಉಳಿದರು. ಪೆರಿಯಾರ್ ಸ್ವತಃ ಈ ವಿವಾಹವು “ಕಾನೂನನ್ನು ತೃಪ್ತಿಪಡಿಸುವಾಗ ತನ್ನ ಆಸ್ತಿಯನ್ನು ಭದ್ರಪಡಿಸಿಕೊಳ್ಳುವ ವ್ಯವಸ್ಥೆಯಾಗಿದೆ” ಎಂದು ವಿವರಿಸಿದರೂ ಸಹ ಈ ವಿವಾಹವು ವಿವಾದಾತ್ಮಕವಾಗಿತ್ತು. 

ಮಣಿಯಮ್ಮೈ ಅವರು ಸಾಮಾಜಿಕ ಕಾರ್ಯಕರ್ತೆ ಮತ್ತು ತಮ್ಮದೇ ಆದ ರೀತಿಯಲ್ಲಿ ನಾಯಕಿಯಾಗಿದ್ದರು. ದ್ರಾವಿಡರ್ ಕಳಗಂನ ಅಧ್ಯಕ್ಷರಾದ ನಂತರ, ಪೆರಿಯಾರ್ ಅವರ ಮರಣದ ನಂತರ ಕುಸಿಯುತ್ತಿದ್ದ ಸಂಘಟನೆಯನ್ನು ಅವರು ಒಟ್ಟಿಗೆ ಹಿಡಿದರು. ಅವರು ಮಹಿಳಾ ಕಲ್ಯಾಣಕ್ಕೆ ಬದ್ಧರಾಗಿದ್ದರು ಮತ್ತು ನಿರ್ಗತಿಕ ಮಹಿಳೆಯರ ಮನೆಗಳನ್ನು ಮತ್ತು ಬಾಲಕಿಯರ ಅನಾಥಾಶ್ರಮಗಳನ್ನು ನೋಡಿಕೊಂಡರು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸೆನ್ಸಾರ್ಶಿಪ್ ವಿರುದ್ಧ ಪ್ರತಿಭಟನೆಗಳು ಮತ್ತು ರಾಮ್ ಲೀಲಾ ಆಚರಣೆಗೆ ಪ್ರತಿಕ್ರಿಯೆಯಾಗಿ 1974 ರಲ್ಲಿ ರಾವಣ ಲೀಲಾ ಪ್ರತಿಭಟನೆಯನ್ನು ಅವರು ಆಯೋಜಿಸಿದ್ದರು, ಇದಕ್ಕಾಗಿ ಅವರನ್ನು ಬಂಧಿಸಲಾಯಿತು.

ಪೆರಿಯಾರ್ ಅವರೊಂದಿಗಿನ ಮದುವೆಯ ಸಂದರ್ಭದಲ್ಲಿ ಮಾತ್ರ ಮಣಿಯಮ್ಮೈ ಬಗ್ಗೆ ಮಾತನಾಡುವುದು ದುಃಖಕರವಾಗಿದೆ. ಮಣಿಯಮ್ಮೈ ಅವರ ಜೀವನ ಮತ್ತು ಆಲೋಚನೆಗಳ ಬಗ್ಗೆ ತಿಳಿಯಲು, ಎನ್.ಕೆ.ಮಂಗಳಮುತ್ತು ಅವರ “ಮಣಿಯಮ್ಮೈ, ತೊಂಡಿಲ್ ಉಯ್ರಂಧ ತುಯಾವರ್ ಅನ್ನೈ ಇ.ವಿ.ಆರ್.ಮಣಿಯಮ್ಮಯ್ಯರ್ ” ಮತ್ತು ಕೆ.ವೀರಮಣಿ ಅವರ “ಅನ್ನೈ ಮಣಿಯಮ್ಮಯ್ಯರಿನ್ ಸಿಂಧನೈ ಮುತ್ತುಕ್ಕಲ್” ಅವರ ಜೀವನಚರಿತ್ರೆಯನ್ನು ಯಾವಾಗಲೂ ಉಲ್ಲೇಖಿಸಬಹುದು.ಆದಾಗ್ಯೂ, ಇವು ತಮಿಳಿನಲ್ಲಿವೆ ಮತ್ತು ದುರದೃಷ್ಟವಶಾತ್, ಇವುಗಳ ಅನುವಾದಗಳು ಇನ್ನೂ ಇಂಗ್ಲಿಷ್‌ನಲ್ಲಿ ಲಭ್ಯವಿಲ್ಲ.“ಎಂದು ಫೆಮಿನಿಸಂ ಇನ್ ಇಂಡಿಯಾ ತನ್ನ ಲೇಖನದಲ್ಲಿ ತಿಳಿಸಿದೆ.

ಇನ್ನೂ, ಮಣಿಯಮ್ಮೈ ಪೆರಿಯಾರ್ ಅವರ ದತ್ತು ಪುತ್ರಿ ಅಲ್ಲ. ಅಂದಿನ ಕಾನೂನು ವ್ಯವಸ್ಥೆಯು ಮಹಿಳೆಯರನ್ನು ದತ್ತು ತೆಗೆದುಕೊಳ್ಳುವ ಅವಕಾಶ ನೀಡಿರಲಿಲ್ಲ. ಯಾರಾದರೂ ತಮ್ಮ ಮಗಳ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವುದಕ್ಕೂ ತಮ್ಮ ಸ್ವಂತ ಮಗಳನ್ನು ಮದುವೆಯಾಗುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇಲ್ಲಿ ಮಣಿಯಮ್ಮೈ ಅವರನ್ನು “ಮಗಳು” ಎಂದು ಆಧಾರರಹಿತವಾಗಿ ಕರೆಯುತ್ತಿರುವುದರ ಹಿಂದೆ ಹುನ್ನಾರವಿದೆ. ಮಣಿಯಮ್ಮೈ ಅವರು ಪೆರಿಯಾರ್ ಅವರನ್ನು ಕಾನೂನಾತ್ಮಕವಾಗಿ(ಸಂಪ್ರದಾಯಿಕವಾಗಿ ಅಲ್ಲ) ಮದುವೆ ಆಗಿದ್ದು 32ನೇ ವಯಸ್ಸಿನಲ್ಲಿ. ಅಷ್ಟರಲ್ಲಾಗಲೇ ಮಣಿಯಮ್ಮೈ ಅವರು ಸಾಕಷ್ಟು ಪ್ರಬುಧ್ಧರಾಗಿ ದ್ರಾವಿಡರ್ ಕಳಗಂ ನಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಈ ಮದುವೆಯ ಸರಿ-ತಪ್ಪುಗಳ ನಿರ್ಧರಿಸುವ ಸರ್ವ ಸ್ವತಂತ್ರ್ಯವೂ ಕೂಡ ಇತ್ತು.

ಆದ್ದರಿಂದ, ಪೆರಿಯಾರ್ ರಾಮಸ್ವಾಮಿಯವರ ಚಿಂತನೆಗಳು ಮುನ್ನಲೆಗೆ ಬಾರದಂತೆ ಅವರ ವಿವಾದಿತ ಮದುವೆಯ ವಿಷಯಕ್ಕೆ ಅವರನ್ನು ಸೀಮಿತಗೊಳಿಸುವ ಸಲುವಾಗಿ ಮಣಿಯಮ್ಮೈ ಪೆರಿಯಾರ್ ಅವರ ದತ್ತುಪುತ್ರಿ ಎಂಬ ಕಟ್ಟುಕಥೆಯನ್ನು ಜನರ ನಡುವೆ ಹರಿಬಿಡಲಾಗಿದೆ. ಇನ್ನೂ ಪೆರಿಯಾರ್ ಮತ್ತು ಮಣಿಯಮ್ಮೈ ಅವರ ಮದುವೆಯ ಪೋಟೋ ಎಂದು ಪೆರಿಯಾರ್ ಮತ್ತು ಅಣ್ಣಾದೊರೈ ಅವರ ನೇತೃತ್ವದಲ್ಲಿ ನಡೆದ ಅಂತರ್ಜಾತಿಯ ವಿವಾಹದ ಪೋಟೋವೊಂದನ್ನು ಹಂಚಿಕೊಂಡು ಸುಳ್ಳು ಹರಡಲಾಗುತ್ತಿದೆ.

ತಮ್ಮ ಬಾಲ್ಯದಲ್ಲಿ ದೈವಭಕ್ತರಾಗಿದ್ದ ಪೆರಿಯಾರ್ ಅವರು 1904ರಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮಗಾದ ಅವಮಾನ ಮತ್ತು ಹಸಿವಿನಿಂದ ಅರಿವಾಗಿ ಅಂದಿನಿಂದ ನಾಸ್ತಿಕರಾದರು. ದೇವರು ಧರ್ಮಗಳ ಹೆಸರಿಂದ ಜನಗಳನ್ನು ಸುಲಿಗೆ ಮಾಡುವ ಪೂಜಾರಿ ವರ್ಗವನ್ನು ಕಟುವಾಗಿ ಟೀಕಿಸುತ್ತಾ, ಕಾಂಗ್ರೆಸ್‌ ಸೇರಿ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಭಾಗವಹಿಸಿದರು. ನಂತರ ಕಾಂಗ್ರೆಸ್‌ನಿಂದ ಹೊರಬಂದು ಅಸ್ಪಶ್ಯತೆ ವಿರುದ್ಧ ಹೋರಾಟ ಪ್ರಾರಂಭಿಸಿದರು ಮತ್ತು ಜೊತೆ ಜೊತೆಗೆ ಮಹಿಳಾ ಚಳುವಳಿಗಳನ್ನು ಕಟ್ಟಿದರು. ನಂತರ ಜಸ್ಟಿಸ್ಟ್‌ ಪಾರ್ಟಿ, ದ್ರಾವಿಡರ್ ಕಳಗಂ ಕಟ್ಟಿದರು. ಹೀಗೆ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು. ಸಧ್ಯ ಹೆಚ್ಚೆಚ್ಚು ಪೆರಿಯಾರ್ ಅವರ ಕುರಿತು, ಅವರ ಚಿಂತನೆಗಳ ಕುರಿತು ಓದುವುದೇ ಅವರ ಕುರಿತ ಪೂರ್ವಗ್ರಹಗಳಿಗೆ ಪರಿಹಾರವಾಗಿದೆ.


ಇದನ್ನು ಓದಿ: ಮಹಾತ್ಮ ಗಾಂಧಿಯವರು ಮಹಿಳಾ ಶಿಕ್ಷಣ ಮತ್ತು ಮತದಾನದ ಹಕ್ಕನ್ನು ನಿರಾಕರಿಸಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *