Fact Check | ವ್ಯಕ್ತಿಯೊಬ್ಬ ಹಿಂದೂಗಳಿಗೆ ಬಾಂಗ್ಲಾದೇಶ ತೊರೆಯಲು ಹೇಳಿದ್ದಾನೆ ಎಂಬುದು ಎಡಿಟೆಡ್‌ ವಿಡಿಯೋ

“ಈ ವಿಡಿಯೋವನ್ನು ಗಮನವಿಟ್ಟು ನೋಡಿ. ಇದರಲ್ಲಿ ವ್ಯಕ್ತಿಯೊಬ್ಬ ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ದೇಶ ತೊರೆಯುವಂತೆ ಹೇಳಿದ್ದಾನೆ. ಬಾಂಗ್ಲಾದೇಶದಲ್ಲಿ ಇನ್ನು ಹಿಂದೂಗಳಿಗೆ ಜಾಗವಿಲ್ಲ ಎಂಬುದು ಆ ಮಾತಿನ ಅರ್ಥ. ಅಲ್ಲಿನವರು ಅಲ್ಪ ಸಂಖ್ಯಾತರಿಗೆ ನೇರ ಎಚ್ಚರಿಕೆಯನ್ನು ನೀಡಿದರೆ ಯಾರೂ ಕೂಡ ಆ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಆದರೆ ಭಾರತದಲ್ಲಿ ಹಾಗಲ್ಲ ಇಲ್ಲಿ ಅಲ್ಪ ಸಂಖ್ಯಾತರ ರಕ್ಷಣೆಗಾಗಿಗೆಯೇ ಕಾನೂನು ನಿರ್ಮಾಣಗೊಂಡಿದೆ ಎಂಬಂತೆ ಸರ್ಕಾರಗಳು ವರ್ತಿಸುತ್ತಿವೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಶೇರ್‌ ಮಾಡಲಾಗುತ್ತಿರುವ ವಿಡಿಯೋ ನೋಡಿದ ಹಲವು  ಮಂದಿ ಅದರಲ್ಲಿ ಭಾಷಣ ಮಾಡಿದ ವ್ಯಕ್ತಿಯ ಮಾತುಗಳನ್ನು ಕೇಳಿಸಿಕೊಂಡು ವೈರಲ್‌ ವಿಡಿಯೊದೊಂದಿಗೆ ಹಂಚಿಕೊಳ್ಳಲಾದ ಟಿಪ್ಪಣಿಗಳಿಗೆ ವಿವಿಧ ರೀತಿಯ ಮಾರ್ಪಾಡುಗಳನ್ನು ಮಾಡಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಬಾಂಗ್ಲಾದೇಶದ ಎಲ್ಲಾ ಮುಸ್ಲಿಂ ಸಮುದಾಯದವರ ವಿರುದ್ಧ ಜನ ಸಾಮಾನ್ಯರಿಗೆ ಆಕ್ರೋಶ ಮೂಡಿಸುವಂತೆ ಮಾಡಿದೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ನಿಜಕ್ಕೂ ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ಬಾಂಗ್ಲಾದೇಶ ತೊರೆಯಲು ಹೇಳಲಾಗಿದೆಯೇ ಎಂದು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆಗ ವೈರಲ್‌ ವಿಡಿಯೋದಲ್ಲಿನ ವ್ಯಕ್ತಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ. ಅವುಗಳ ಪ್ರಕಾರ ಆತನ ಹೆಸರು ಸೈಫುದ್ದೀನ್ ಮೊಹಮ್ಮದ್ ಅಮ್ದಾದ್ ಎಂಬುದು ತಿಳಿದು ಬಂದಿದೆ. ಇವರು ಬಾಂಗ್ಲಾದೇಶದಲ್ಲಿ ಕೋಟಾ ಸುಧಾರಣೆ ಪ್ರತಿಭಟನೆಯ ಸಮಯದಲ್ಲಿ ದೃಷ್ಟಿಹೀನರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ವೈರಲ್‌ ವಿಡಿಯೋ 28 ಸೆಪ್ಟೆಂಬರ್ 2024 ರಂದು ಅಪ್‌ಲೋಡ್ ಮಾಡಿದ ವಿಡಿಯೋ ಎಂಬುದು ಕೂಡ ತಿಳಿದು ಬಂದಿದೆ. 

ಈ ವಿಡಿಯೋವಿನ ಶೀರ್ಷಿಕೆಯ ಪ್ರಕಾರ ಜುಲೈನಲ್ಲಿ ಕೋಟಾ ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟವರಿಗೆ ಗೌರವಾರ್ಥವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕೂಟದಲ್ಲಿ ಅಮ್ದಾದ್ ಅವರು ತಮ್ಮ ಭಾಷಣವನ್ನು ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಅಮ್ದಾದ್ ತಮ್ಮ ಭಾಷಣದ ಆರಂಭದಿಂದಲೂ ಶೇಖ್ ಹಸೀನಾ ಮತ್ತು ಅವಾಮಿ ಲೀಗ್‌ ಬೆಂಬಲಿಗರ ಬಗ್ಗೆ ಮಾತನಾಡಿದ್ದು,  ತಮ್ಮ ಭಾಷಣದಲ್ಲಿ “ಶೇಖ್‌ ಹಸಿನಾ ಬೆಂಬಲಿಗರು ಮತ್ತು ಅವಾಮಿ ಲೀಗ್‌ನ ಸದಸ್ಯರು ಹಿಂದೂಗಳು, ಅಲ್ಪಸಂಖ್ಯಾತರು, ಪತ್ರಕರ್ತರ ಸೋಗಿನಲ್ಲಿ ಅಡಗಿಕೊಂಡು ದೇಶದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ” ಎಂದು ಹೇಳಿಕೆಯನ್ನು ನೀಡಿದ್ದು, ಅವಾಮಿ ಲೀಗ್‌ನ ಸದಸ್ಯರನ್ನು ದೇಶ ತೊರೆಯಲು ಹೇಳಿದ್ದಾರೆ. ಆದರೆ ಇದನ್ನು ಬಳಸಿಕೊಂಡು ವಿಡಿಯೋವನ್ನ ಎಡಿಟ್‌ ಮಾಡಿ ಹಂಚಿಕೊಳ್ಳಲಾಗಿದೆ. ಈ ಕುರಿತು ಅಮ್ದಾದ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಕೂಡ ಸ್ಪಷ್ಟನೆಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಬಾಂಗ್ಲಾದೇಶದಲ್ಲಿ ಸೈಫುದ್ದೀನ್ ಮೊಹಮ್ಮದ್ ಅಮ್ದಾದ್ ಹಿಂದೂಗಳನ್ನು ದೇಶ ತೊರೆಯಲು ಹೇಳಿದ್ದಾರೆ ಎಂಬುದು ಸುಳ್ಳಾಗಿದೆ. ಅವರು ಶೇಖ್‌ ಹಸೀನ ಬೆಂಬಲಿಗರು ಮತ್ತು ಅವಾಮಿ ಲೀಗ್‌ನ ಕಾರ್ಯಕರ್ತರನ್ನು ದೇಶ ತೊರೆಯಲು ಹೇಳಿದ್ದಾರೆ. ಈ ವಿಡಿಯೋವನ್ನು ಎಡಿಟ್‌ ಮಾಡಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಇಂತಹ ಸುಳ್ಳು ನಿರೂಪಣೆಯ ವಿಡಿಯೋಗಳನ್ನು ಹಂಚಿಕೊಳ್ಳ ಬೇಡಿ.


ಇದನ್ನೂ ಓದಿ : Fact Check | ಮುಸ್ಲಿಂ ಅಪ್ರಾಪ್ತರು ಹಿಂದೂ ಮಹಿಳೆಗೆ ಚಾಕು ತೋರಿಸಿ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *