Fact Check : ಇದು ರಷ್ಯಾದ ಮೇಲಾದ ದಾಳಿಯ ವಿಡಿಯೋ ಹೊರತು, ಇರಾಕ್‌ ಟೆಲ್ ಅವಿವ್‌ ಮೇಲೆ ನಡೆಸಿದ ದಾಳಿಯದ್ದಲ್ಲ

ಇತ್ತೀಚೆಗೆ ಇಸ್ರೇಲ್​ನ ಟೆಲ್ ಅವಿವ್ ಮೇಲೆ ಇರಾಕ್​ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂಬ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅಕ್ಟೋಬರ್ 1 ರಂದು ಇರಾನ್ ಸುಮಾರು 180 ಕ್ಷಿಪಣಿಗಳಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಿದಾಗ, ಇಸ್ರೇಲ್‌ನ ಅಧಿಕಾರಿಗಳು ಯಾವುದೇ ಗಂಭೀರವಾದ ಗಾಯಗಳ ಕುರಿತು ವರದಿ ಬಿಡುಗಡೆ ಮಾಡಿಲ್ಲ. ಕ್ಷಿಪಣಿಗಳನ್ನು ಇಸ್ರೇಲಿನ ರಕ್ಷಣಾ ವ್ಯವಸ್ಥೆಗಳು ಹಿಮ್ಮೆಟ್ಟಿಸಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಈ ನಡುವೆ, ರಸ್ತೆಯ ಮಧ್ಯದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ, ಕಟ್ಟಡದ ಮೇಲೆ ದಾಳಿ ನಡೆದಾಗ ಮಹಿಳೆಯೊಬ್ಬರು ಕಿರುಚುತ್ತಿರುವುದನ್ನು ಕೇಳಬಹುದು ಮತ್ತು ಈ ಪ್ರದೇಶದಲ್ಲಿ ವಾಯುದಾಳಿ ಸೈರನ್ ಸದ್ದು ಮಾಡುತ್ತಿದೆ. ಟೆಲ್ ಅವಿವ್ ಮೇಲೆ ಇರಾಕ್‌ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

“ಟೆಲ್ ಅವೀವ್‌ನ ಹೃದಯಭಾಗದಲ್ಲಿ ಹೈಪರ್‌ಸಾನಿಕ್ ಕ್ಷಿಪಣಿಗಳು ದಾಳಿಯನ್ನು ಮಾಡಿದ್ದು, ಐರನ್ ಡೋಮ್ ವಿಫಲವಾಗಿದೆ” ಎಂದು ಬರೆದು ಫೇಸ್‌ಬುಕ್‌ನ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್‌ :

ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಿದಾಗ, ರಷ್ಯಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ VK ಪೋಸ್ಟರ್‌ ಲಭಿಸಿದೆ. 2023 ರ ಜುಲೈನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮಾಸ್ಕೋದ ಕಟ್ಟಡದ ಮೇಲೆ ಡ್ರೋನ್‌ಗಳು ಇಳಿಯುವುದನ್ನು ತೋರಿಸುತ್ತದೆ.

ಈ ಕುರಿತು ಮತ್ತಷ್ಟು ಹುಡುಕಿದಾಗ, 2023ರ ಜುಲೈ 30ರಂದು ಪ್ರಕಟವಾದ BBC ಸುದ್ದಿ ವರದಿ ಲಭಿಸಿದೆ. ಈ ವರದಿಯ ಪ್ರಕಾರ, 2023ರ ಜುಲೈ 30ರಂದು ಮೂರು ಉಕ್ರೇನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಲಾಯಿತು, ಆದರೆ ಎರಡು ಡ್ರೋನ್‌ಗಳು ಕಚೇರಿ ಕಟ್ಟಡಗಳಲ್ಲಿ ಬಿದ್ದವು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಮಾಸ್ಕೋ ಕೀವ್ ಡ್ರೋನ್ ಸ್ಟ್ರೈಕ್ ನಡೆಸಿ ಎರಡು ಕಚೇರಿ ಕಟ್ಟಡಗಳ ಮುಂಭಾಗವನ್ನು ಹಾನಿಗೊಳಿಸಿದೆ ಎಂದು ಆರೋಪಿಸಿದರು. ವೈಮಾನಿಕ ದಾಳಿಯ ನಂತರ ವ್ನುಕೊವೊ ವಿಮಾನ ನಿಲ್ದಾಣವನ್ನು ಸ್ವಲ್ಪ ಸಮಯದವರೆಗೆ ಮುಚ್ಚಲಾಯಿತು. ಯಾರಿಗೂ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ.


ಡ್ರೋನ್ ದಾಳಿಯ ನಂತರ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ “ರಷ್ಯಾದ ಪ್ರದೇಶದ ಮೇಲಿನ ದಾಳಿ ಅನಿವಾರ್ಯ, ನೈಸರ್ಗಿಕವಾಗಿ ಮತ್ತು ಸಂಪೂರ್ಣವಾಗಿ ಸಮರ್ಥಯುತವಾಗಿದೆ” ಮತ್ತು ಯುದ್ಧವು ಮರಳಿ ರಷ್ಯಾಕ್ಕೆ ಪಾಠ ಕಲಿಸಲು ನಡೆಸುತ್ತಿರುವುದಾಗಿದೆ ಎಂದು ಭಾಷಣದಲ್ಲಿ ಮಾತನಾಡಿದ್ದಾರೆ. ದಾಳಿಯಲ್ಲಿ ಹಾನಿಗೊಳಗಾದ ಗಗನಚುಂಬಿ ಕಟ್ಟಡದ ಫೋಟೋ ಕೂಡ ವರದಿಯಲ್ಲಿದೆ. ವರದಿಗಳ ಪ್ರಕಾರ, 50-ಅಂತಸ್ತಿನ ಐಕ್ಯೂ-ಕ್ವಾರ್ಟರ್ ಕಟ್ಟಡದಲ್ಲಿ ಒಂದು ಸ್ಫೋಟವು ಉಂಟಾಗಿದೆ, ಆದರೆ ಇನ್ನೊಂದು ಸ್ಫೋಟವು 2023ರ ಜುಲೈ 30ರಂದು ಮಾಸ್ಕೋ ಇಂಟರ್ನ್ಯಾಷನಲ್ ಬಿಸಿನೆಸ್ ಸೆಂಟರ್‌ನಲ್ಲಿರುವ OKO ಟವರ್‌ನ ಬಳಿ ಸಂಭವಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ಉಕ್ರೇನ್‌ ರಷ್ಯಾದ ಮೇಲೆ ನಡೆಸಿದ ದಾಳಿಯ ವೀಡಿಯೊವನ್ನು, ಇತ್ತೀಚೆಗೆ ಇರಾಕ್‌ ಟೆಲ್ ಅವಿವ್‌ನ ಮೇಲೆ ದಾಳಿ ನಡೆಸಿದೆ ಎಂದು ತಪ್ಪಾಗಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನು ಓದಿ :

Fact Check : ಇರಾನ್‌ ದಾಳಿಗೆ ಹೆದರಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಬಂಕರ್‌ಗೆ ಓಡಿಹೋಗಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *