Fact Check: ಮೊಬೈಲ್ ನೀಡಲಿಲ್ಲ ಎಂದು ಬಾಲಕನೊಬ್ಬ ಬ್ಯಾಟಿನಿಂದ ತನ್ನ ತಾಯಿಗೆ ಹೊಡೆದಿರುವ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆಯು ಅತಿಯಾಗುತ್ತಿದ್ದು, ನಿಯಂತ್ರಣವಿಲ್ಲದಂತೆ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ತಂದೆ-ತಾಯಿಗಳು ಅಷ್ಟೆ, ಮಕ್ಕಳ ಈ ವರ್ತನೆಯ ಮೇಲೆ ಗಮನ ಹರಿಸದೆ ಮಕ್ಕಳಿಗೆ ಮೊಬೈಲ್ ನೀಡುತ್ತಿರುತ್ತಾರೆ.

ಸಧ್ಯ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಬಾಲಕನೊಬ್ಬ ಶಾಲೆಯಿಂದ ಮನೆಗೆ ಬಂದು ಹೋಮ್‌ವರ್ಕ್‌ ಮಾಡದೇ ಮೊಬೈಲ್‌ ನೋಡುತ್ತಾ ಕುಳಿತಿರುತ್ತಾನೆ, ಇದನ್ನು ಗಮನಿಸಿದ ತಾಯಿ ಆತನ ಕೈಯಿಂದ ಮೊಬೈಲ್‌ ಕಸಿದುಕೊಳ್ಳುತ್ತಾರೆ. ಇದರಿಂದ ಕೋಪಕೊಂಡ ಆ ಬಾಲಕ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದು ಆಕೆ ಪ್ರಜ್ಞೆ ತಪ್ಪಿದ ಬಳಿಕ ಮೊಬೈಲ್‌ ತೆಗೆದುಕೊಳ್ಳುತ್ತಾನೆ.

ಈ ವೀಡಿಯೋವನ್ನು ನೋಡಿ ಮಕ್ಕಳ ಕೈಗೆ ಗೇಮ್ ಆಡಲು ಮೊಬೈಲ್ ಕೊಡುವುದರಿಂದ ಆಗುವ ದುಷ್ಪರಿಣಾಮ ಎಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ನಲ್ಲಿಯೂ ಸಹ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು. ಅನೇಕರು ಈ ವೀಡಿಯೋ ಹಂಚಿಕೊಂಡು ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿದ್ದಾರೆ.

ಫ್ಯಾಕ್ಟ್‌ ಚೆಕ್:

ವೈರಲ್‌ ವೀಡಿಯೋ ನಿಜವಲ್ಲ ಬದಲಿಗೆ ಮಕ್ಕಳು ಮೊಬೈಲ್‌ ಬಳಸದಂತೆ ಜಾಗೃತಿ ಮೂಡಿಸಲು ಮಾಡಿದ ವಿಡಿಯೋ ಆಗಿದೆ.

ನಾವು ವೈರಲ್ ವೀಡಿಯೋ ಹಂಚಿಕೊಂಡಿರುವ ಖಾತೆಗಳನ್ನು ಗಮನಿಸಿದಾಗ ಅನೇಕ ಜನರು ಈ ವೀಡಿಯೋಗೆ ಇದು ಸ್ಕ್ಟಿಪ್ಟೆಡ್‌ ಎಂದು ಕಮೆಂಟ್‌ ಮಾಡಿರುವುದನ್ನು ಗಮನಿಸಿದ್ದೇವೆ.  ಇದರ ಸುಳಿವು ಪಡೆದು ನಾವು ಗೂಗಲ್ ರಿವರ್ಸ್‌ ಇಮೇಜ್‌ ಮೂಲಕ ಹುಡುಕಾಟ ನಡೆಸಿದಾಗ ಈ ವೀಡಿಯೋ ಕುರಿತು ಹತ್ತಾರು ಮಾಧ್ಯಮಗಳು ವರದಿ ಮಾಡಿರುವುದು ಲಭ್ಯವಾಗಿದ್ದು, ಈ ವರದಿಗಳಲ್ಲಿ ಈ ವೀಡಿಯೋ ಜಾಗೃತಿಗಾಗಿ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ನಾವು ಫೇಸ್‌ಬುಕ್‌ನಲ್ಲಿ ಸಂಪೂರ್ಣ ವೀಡಿಯೊವನ್ನು ಕಂಡುಕೊಂಡಿದ್ದೇವೆ, ವೀಡಿಯೊವನ್ನು ಶೈಕ್ಷಣಿಕ ಮತ್ತು ಮನರಂಜನೆಯ ಉದ್ದೇಶಗಳಿಗಾಗಿ ಮಾತ್ರ ರಚಿಸಲಾಗಿದೆ ಎಂದು ಹಕ್ಕು ನಿರಾಕರಣೆ(Disclaimer) ಹೊಂದಿದೆ.

ಆದ್ದರಿಂದ ಈ ವೀಡಿಯೋವನ್ನು ಜಾಗೃತಿಗಾಗಿ ಮಾಡಲಾಗಿದೆಯೇ ಹೊರತು ನೈಜ ಘಟನೆಯಲ್ಲ. ಆದರೆ ಮೊಬೈಲ್ ಚಟದಿಂದ ಮಕ್ಕಳು ಪೋಷಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳು ದೇಶದಲ್ಲಿ ನಡೆದಿವೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವು ಬದಲು ಅಥವಾ ಮಕ್ಕಳ ಜೊತೆಯಿದ್ದಾಗ ತಾವು ಸಹ ಮೊಬೈಲ್ ಬಳಸದೇ ಇರುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳಿಗೆ ಕಥೆ ಪುಸ್ತಕಗಳು ನೀಡುವುದರ ಮೂಲಕ ಮತ್ತು ಅವರ ಜೊತೆಗೆ ಪೋಷಕರು ಹೆಚ್ಚು ಸಮಯ ಕಳೆಯುವ ಮೂಲಕ, ಅವರೊಂದಿಗೆ ಸೇರಿ ಆಟವಾಡುವುದರ ಮೂಲಕ ಮಕ್ಕಳು ಗುಣಾತ್ಮಕವಾಗಿ ಬೆಳೆಯಲು ಪೋಷಕರು ಹೆಚ್ಚು ಪ್ರೋತ್ಸಾಯಿಸಬೇಕು.


ಇದನ್ನು ಓದಿ: ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *