Fact Check | ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ಎಂಬುದು ಸುಳ್ಳು

ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಯುವಕನೊಬ್ಬನನ್ನು ಅಮಾನುಷವಾಗಿ ಥಳಿಸಲಾಗುತ್ತಿದ್ದು, ಹಿಂದುಗಳ ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸಿ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ವಿಡಿಯೋದೊಂದಿಗೆ ಲಘು ಟಿಪ್ಪಣಿಯನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಹಲವರು ಈ ವಿಡಿಯೋಗೆ ರಾಜಕೀಯದ ಆಯಾಮವನ್ನು ಕೂಡ ನೀಡಿದ್ದು, ವಿಡಿಯೋ ಕುರಿತು ವಿವಿಧ ಚರ್ಚೆಗಳನ್ನು ಕೂಡ ಹುಟ್ಟುಹಾಕಿದೆ.

ಸಾಕಷ್ಟು ಮಂದಿ ವಿಡಿಯೋದ ಹಿನ್ನೆಲೆಯ ಕುರಿತು ಪರಿಶೀಲನೆ ನಡೆಸದೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡು, ಕೋಮು ದ್ವೇಷ ಹರಡಲು ಕಾರಣವಾಗುತ್ತಿದ್ದಾರೆ. ವಿಡಿಯೋದಲ್ಲಿ ಹಲ್ಲೆಗೊಳಗಾದವನ ಮತ್ತು ಹಲ್ಲೆ ನಡೆಸಿದವರ ಸಮುದಾಯದ ಬಗ್ಗೆ ಹಲವರು ವಿವಿಧ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಗೊಂದಲವನ್ನು ಕೂಡ ಸೃಷ್ಟಿಸಿದೆ. ಹೀಗಾಗಿ ಈ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಉತ್ತರಪ್ರದೇಶದ ಬುಧೌನ್ ಪೊಲೀಸರು ಎಕ್ಸ್ ನಲ್ಲಿ ಸ್ಪಷ್ಟನೆಯನ್ನು ನೀಡಿರುವ ಪೋಸ್ಟ್‌ವೊಂದು ಕಂಡುಬಂದಿದೆ. ಇದರಲ್ಲಿ ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ, ಈ ದಾಳಿಯಲ್ಲಿ ಒಬ್ಬ ಯುವಕನನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಿದಾಗ ಹಲವು ವರದಿಗಳು ಕಂಡು ಬಂದಿವೆ. ಈ ವರದಿಗಳ ಪ್ರಕಾರ ಅರೇಲಾ ನಿವಾಸಿ ಅರ್ಷದ್ ಹುಸೇನ್ ಸಹೋದರ ಅಮೀರ್ ಅದೇ ಊರಿನ ಮಹಿಳೆಯೊಂದಿಗೆ ಊರುಬಿಟ್ಟು ಹೋಗಿ ಮದುವೆಯಾದ ಕಾರಣ, ಅಸಮಾಧಾನಗೊಂಡ ಮಹಿಳೆಯ ಮನೆಯವರು 24 ಸಪ್ಟೆಂಬರ್ 2024 ರಂದು ಮನೆಗೆ ತೆರಳುತ್ತಿದ್ದ ಅರ್ಷದ್‌ನನ್ನು ಸುತ್ತುವರೆದು, ಆತನನ್ನು ಒತ್ತೆಯಾಳಾಗಿಟ್ಟುಕೊಂಡು ವಿವಿಧ ಆಯುಧಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿವಿಧ ವರದಿಗಳಲ್ಲಿ ಉಲ್ಲೇಖವಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ FIR ಪ್ರತಿ ಲಭ್ಯವಾಗಿದ್ದು, ಇದರಲ್ಲಿನ ಎಲ್ಲಾ ಆರೋಪಿಗಳು ಮುಸಲ್ಮಾನರು ಎಂಬುದು ತಿಳಿದುಬಂದಿದೆ ಹಾಗಾಗಿ ಹಲ್ಲೆಗೊಳಗಾದ ವ್ಯಕ್ತಿ ಮತ್ತು ಹಲ್ಲೆ ನಡೆಸಿದ ಆರೋಪಿಗಳೆಲ್ಲರೂ ಕೂಡ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಇದರಲ್ಲಿ ಯಾವುದೇ ಕೋಮು ದ್ವೇಷದ ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಟಿಪ್ಪಣಿಯಂತೆ ಹಿಂದೂಗಳು ಮುಸಲ್ಮಾನ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂಬುದು ಸುಳ್ಳು. ಇಲ್ಲಿ ಆರೋಪಿ ಮತ್ತು ಹಲ್ಲೆಗೊಳಗಾದ ಸಂತ್ರಸ್ತ ಇಬ್ಬರೂ ಕೂಡ ಮುಸಲ್ಮಾನರಾಗಿದ್ದು ಇಲ್ಲಿ ಯಾವುದೇ ಕೋಮ ಸಂಘರ್ಷದ ಆಯಾಮವಿಲ್ಲ


ಇದನ್ನೂ ಓದಿ : Fact Check I ಫೇಲಸ್ತೀನ್ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಕರೆದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *