Fact Check | ಯೋಗಿ ಆದಿತ್ಯನಾಥ್‌ ಮೊಣಕಾಲು ನೋವಿನ ಶಾಶ್ವತ ಪರಿಹಾರದ ಬಗ್ಗೆ ಮಾತನಾಡಿಲ್ಲ

” ಈ ವಿಡಿಯೋ ನೋಡಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರಿನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಅವರು ಮೊಣಕಾಲು ನೋವಿನ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಶಾಶ್ವತ ಪರಿಹಾರದ ಕುರಿತು ಆರ್ಯುವೇದ ಔಷಧಿಯ ಕುರಿತು ಅರಿತ ವೈದ್ಯರೊಬ್ಬರ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಯಾಗಿದ್ದರೂ ಜನ ಸಾಮನ್ಯರ ಬಗ್ಗೆ ಅವರಿಗಿರುವ ಕಾಳಜಿ ಅಪಾರ. ಈ ರೀತಿಯ ಯೋಗಿಗಳು ರಾಜ್ಯ ಆಳುತ್ತಿರುವುದರಿಂದಲೇ ಇಂದು ದೇಶ ಪ್ರಗತಿಯತ್ತ ಹೆಜ್ಜೆ ಹಾಕಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಲವರು ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್‌ ಅವರು ಕಂಡುಬಂದಿರುವ ಹಿನ್ನೆಲೆ ಮತ್ತು ಅವರ ಧ್ವನಿಯಲ್ಲಿಯೇ ಸಲಹೆ ಸೂಚನೆಗಳು ಇರುವ ಹಿನ್ನೆಲೆಯಲ್ಲಿ ಈ ವಿಡಿಯೋ ನಿಜವೆಂದು ಭಾವಿಸಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರು ಸೇರಿದಂತೆ ಹಲವು ಮಂದಿ ವೈರಲ್ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇಲ್ಲ ಈ ರೀತಿಯ ಹೇಳಿಕೆಯನ್ನು ಯೋಗಿ ಆದಿತ್ಯನಾಥ್‌ ನೀಡಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ಮೊಣಕಾಲು ನೋವು ನಿವಾರಣೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಮಾತನಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ಹಲವಾರು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ‌ನಡೆಸಿದೆವು. ಈ ವೇಳೆ ನಮಗೆ 27 ಸೆಪ್ಟೆಂಬರ್ 2024ರಂದು ಹಂಚಿಕೊಳ್ಳಲಾದ ಯುಟ್ಯೂಬ್‌ ವಿಡಿಯೋವೊಂದು ಕಂಡುಬಂದಿದೆ.

ಪೋಸ್ಟ್‌ನ ಜೊತೆಗೆ ಹಲವು ವರದಿಗಳನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಆ ವರದಿಗಳ ಪ್ರಕಾರ ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಪ್ರವಾಸೋದ್ಯಮದ ಕುರಿತು ಮಾತನಾಡುತ್ತಾ ಉತ್ತರ ಪ್ರದೇಶವು ಇಂದು ಇಡೀ ದೇಶವನ್ನು ಮಾತ್ರವಲ್ಲದೆ ಇಡೀ ವಿಶ್ವವನ್ನು ಪ್ರವಾಸೋದ್ಯಮದಿಂದ ಆಕರ್ಷಿಸುತ್ತದೆ ಎಂದು ಹೇಳಿಕೆಯನ್ನು ನೀಡಿರುವ ಕುರಿತು ಉಲ್ಲೇಖಿಸಿರುವುದು ಕಂಡುಬಂದಿದೆ. ಈ ವೇಳೆ ಅವರು ಕೇಂದ್ರವನ್ನು ಹೊಗಳಿದ್ದು, ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯ ನಾಯಕತ್ವದಲ್ಲಿ ಕಳೆದ ವರ್ಷ 46 ಕೋಟಿಗೂ ಹೆಚ್ಚು ಪ್ರವಾಸಿಗರು ಉತ್ತರ ಪ್ರದೇಶದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಆಗಮಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಅಂಶವು ಕಂಡುಬಂದಿದೆ. ಆದರೆ ಇಲ್ಲಿ ಎಲ್ಲಿಯೂ ಕೂಡ ಅವರು ಮೊಣಕಾಲು ನೋವು ನಿವಾರಣೆಯ ಬಗ್ಗೆ ಮಾತನಾಡದೆ ಇರುವುದು ಕಂಡುಬಂದಿದೆ

ಇನ್ನು ಯೋಗಿ ಆದಿತ್ಯನಾಥ್ ಅವರು ಮಾತನಾಡಿರುವ ವಿಡಿಯೋದ ಆಡಿಯೋವನ್ನು ಪರಿಶೀಲನೆ ನಡೆಸಲಾಗಿದ್ದು ವಿವಿಧ ಎಐ ಟೂಲ್ ಗಳನ್ನು ಬಳಸಿಕೊಂಡು ಯೋಗಿ ಆದಿತ್ಯನಾಥ್ ಅವರ ಧ್ವನಿಯನ್ನು ನಕಲು ಮಾಡಿ ವಿಡಿಯೋದೊಂದಿಗೆ ಜೋಡಿಸಿ ವೈರಲ್ ವಿಡಿಯೋವನ್ನು ಸೃಷ್ಟಿಸಲಾಗಿದೆ ಎಂಬ ಅಂಶ ಪತ್ತೆಯಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊಣಕಾಲು ನೋವು ನಿವಾರಣೆಯ ಬಗ್ಗೆ ಮಾತನಾಡಿದ್ದಾರೆ ಮತ್ತು ಆ ಬಗ್ಗೆ ಪರಿಹಾರವನ್ನು ಕೂಡ ಅವರೇ ಸೂಚಿಸಿದ್ದಾರೆ ಎಂಬ ವಿಡಿಯೋ ನಕಲಿಯಾಗಿದೆ ಯೋಗಿ ಆದಿತ್ಯನಾಥ್‌ ಅವರ ಧ್ವನಿಯನ್ನು ಎಐ ಮೂಲಕ ಎಡಿಟ್ ಮಾಡಲಾಗಿದ್ದು, ಈ ಹಿಂದೆ ಅವರು ಪ್ರವಾಸೋದ್ಯಮದ ಬಗ್ಗೆ ಮಾತನಾಡುವ ವಿಡಿಯೋದಲ್ಲಿ ಸೇರಿಸಲಾಗಿದೆ ಎಂಬುದು ತನಿಖೆಯಿಂದ ಬಾಯಲಾಗಿದೆ ಹಾಗಾಗಿ ಇಂತಹ ಸುಳ್ಳು ಸುದ್ದಿಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಿ ಮತ್ತು ಹಂಚಿಕೊಳ್ಳಬೇಡಿ


ಇದನ್ನೂ ಓದಿ : Fact Check | ರಾಮಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *