Fact Check | ಇತ್ತೀಚೆಗೆ ಕೊಲ್ಲಲ್ಪಟ್ಟ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಉಂಗುರ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಮುರಿದಿರುವ ಉಂಗುರ ಮತ್ತು ಕೆಲವು ವಸ್ತುಗಳನ್ನು ಅವಶೇಷಗಳ ಅಡಿಯಲ್ಲಿ ಹೂತು ಹಾಕಿರುವುದನ್ನು ಕಾಣಬಹುದು. ಫೋಟೋವನ್ನು ಹಂಚಿಕೊಳ್ಳುವಾಗ, ಬಳಕೆದಾರರು ಈ ಉಂಗುರವು ಇತ್ತೀಚೆಗೆ ಕೊಲ್ಲಲ್ಪಟ್ಟ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನದ್ದು ಎಂದು ಹಂಚಿಕೊಂಡು ಆತನ ಶವವನ್ನು ಪತ್ತೆ ಹಚ್ಚಲಾಗಿದೆ ಎಂಬ ಬರಹದೊಂದಿಗೆ ವೈರಲ್‌ ಫೋಟೋವನ್ನು ಪೋಸ್ಟ್‌ ಮಾಡುತ್ತಿದ್ದಾರೆ.

ಈ ಪೋಸ್ಟ್‌ ಗಮನಿಸಿದ ಹಲವರು ಹಿಜ್ಬುಲ್ಲಾ ಮುಖ್ಯಸ್ಥ ಹಾಗೂ ಉಗ್ರಗಾಮಿ ಹಸನ್ ನಸ್ರಲ್ಲಾನ ಉಂಗುರ ಪತ್ತೆಯಾಗಿದೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ವಿವಿಧ ರೀತಿಯಲ್ಲಿ ಪ್ರಚಾರವನ್ನು ಕೂಡ ಪಡೆಯುತ್ತಿದೆ. ಇನ್ನು ಹಲವರು ಈತನ ಸಾವನ್ನು ದೃಢ ಪಡಿಸಿಕೊಳ್ಳುವ ಸಂಕೇತ ಇದು ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಈ ಉಂಗುರ ನಸ್ರಲ್ಲಾನದಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಗೊಂದಲ ಮೂಡಿಸಿರುವ ವೈರಲ್‌ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ 5 ಜನವರಿ 2024 ರಂದು ಇರಾಕಿನ ಪತ್ರಕರ್ತ ಮುಂತಜಿರ್ ಅಲ್ ಶರಾಯ್ ಎಕ್ಸ್‌ ಹ್ಯಾಂಡಲ್‌ನಲ್ಲಿ ವೈರಲ್‌ ಫೋಟೋ ಕಂಡು ಬಂದಿದ್ದು, ಇಲ್ಲಿನ ಚಿತ್ರ ಸಹಿತ ನೀಡಿರುವ ಮಾಹಿತಿ ಪ್ರಕಾರ ಈ ಉಂಗುರ ಅಬು ಅಲ್ ತಕ್ವಾನದ್ದು ಎಂಬುದು ತಿಳಿದು ಬಂದಿದೆ.

ಈ ಮಾಹಿತಿ ಆಧಾರಿಸಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಈ ಫೋಟೋವನ್ನು ಜನವರಿ 2024 ರಲ್ಲಿ ಬಾಗ್ದಾದ್ ಪೋಸ್ಟ್ ಮುಖ್ಯಸ್ಥ ‘ಸುಫ್ಯಾನ್ ಅಲ್-ಸಮರಾಯ್‘ ಎಕ್ಸ್-ಹ್ಯಾಂಡಲ್‌ನಲ್ಲಿ ಇದೇ ಮಾಹಿತಿಯೊಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿರುವುದು ಕೂಡ ಕಂಡು ಬಂದಿದೆ.

ಈ ಬಗೆಗಿನ ಸುದ್ದಿಯನ್ನು ಹುಡುಕುತ್ತಿರುವಾಗ, Fararu.com ಹೆಸರಿನ ಸುದ್ದಿ ವೆಬ್‌ಸೈಟ್‌ನಲ್ಲಿ ಅನೇಕ ಇತರ ಚಿತ್ರಗಳೊಂದಿಗೆ ಲೇಖನದಲ್ಲಿ ಅಪ್‌ಲೋಡ್ ಮಾಡಿದ ವೈರಲ್ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ . ಈ ಉಂಗುರಕ್ಕೆ ಸಂಬಂಧಿಸಿದಂತೆ, ಈ ಉಂಗುರವು ಗುರುವಾರ ಬಾಗ್ದಾದ್ ಬಳಿ ಯುಎಸ್ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾಕಿ ಮಿಲಿಟರಿ ಮುಖ್ಯಸ್ಥ “ಅಬು ತಕ್ವಾ” ಅವರಿಗೆ ಸೇರಿದೆ ಎಂದು ಸುದ್ದಿಯಲ್ಲಿ ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್ ಫೋಟೋ ಜನವರಿ 2024 ರ ಮತ್ತೊಂದು ದಾಳಿಗೆ ಸಂಬಂಧಿಸಿದೆ . ಇತ್ತೀಚಿನ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಾವಿನೊಂದಿಗೆ ಹಳೆಯ ಫೋಟೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಜಮೀನಿನಲ್ಲಿರುವ ಸನ್ನಿ ಡಿಯೋಲ್,ಎಂಎಸ್ ಧೋನಿಯ ಫೋಟೊ ಎಡಿಟೆಡ್‌ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *