Fact Check: ಭಾರತ-ಪಾಕಿಸ್ತಾನ ವಿಭಜನೆ ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದ ಅನೇಕ ಪೋಟೋಗಳು ತಪ್ಪು ಮಾಹಿತಿಗಳೊಂದಿಗೆ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪುಬಿಳುಪಿನ ಅನೇಕ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು ಇವುಗಳಲ್ಲಿ ಅನೇಕರು ಸತ್ತು ಮಲಗಿದ್ದರೆ, ಇನ್ನೂ ಕೆಲವು ಚಿತ್ರಗಳಲ್ಲಿ ಜನರು ವಲಸೆ ಹೋಗುತ್ತಿದ್ದಾರೆ,  ಮತ್ತೊಂದು ಪೋಟೋದಲ್ಲಿ ಮಹಿಳೆಯ ಕೈಗಳನ್ನು ಕಟ್ಟಿಹಾಕಲಾಗಿದೆ, ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿದೆ ಮತ್ತು ಅರೆನಗ್ನಾವಸ್ಥೆಯಲ್ಲಿ ಮಹಿಳೆ ಇರುವುದನ್ನು ಕಾಣಬಹುದು.

ಈ ಪೋಟೋವನ್ನು “ಇಸ್ಲಾಮಿಕ್ ಜಿಹಾದಿಗಳು ತಮ್ಮ ಹೆಣ್ಣುಮಕ್ಕಳನ್ನು ಕಟ್ಟಿಹಾಕಿ ಬೀದಿಗಳಲ್ಲಿ ಬಲಾತ್ಕಾರ ಮಾಡಿದ್ದು ಹೀಗೆ.” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ.

ಹಾಗೂ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ ಹಲವು ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

 

ಫ್ಯಾಕ್ಟ್‌ ಚೆಕ್:

ಚಿತ್ರ -೧

ಮಹಿಳೆಯ ವೈರಲ್ ಪೋಟೋವನ್ನು ಗೂಗಲ್ ರಿವರ್ಸ್‌ ಇಮೇಜ್ ಮೂಲಕ ಹೆಚ್ಚಿನ ಹುಡುಕಾಟ ನಡೆಸಿದಾಗ ಇದು ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದ್ದು ಎಂದು ತಿಳಿದು ಬಂದಿದೆ. ಈ ಪೋಟೋವಿಗೆ ಸಂಬಂಧಿಸಿದಂತೆ ಅನೇಕ ವರದಿಗಳು ಸಹ ಲಭ್ಯವಾಗಿವೆ.

ಸ್ಕ್ರೈಬ್ಡ್ ಎಂಬ ಜಾಲತಾಣದಲ್ಲಿ ಇದೇ ಪೋಟೋ ನಮಗೆ ಲಭ್ಯವಾಗಿದ್ದು, ಇದರಲ್ಲಿ “1971 ರಲ್ಲಿ, ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ, ಪಾಕಿಸ್ತಾನಿ ಸೈನಿಕರು ಮತ್ತು ಅವರ ಸ್ಥಳೀಯ ಸಹಯೋಗಿಗಳು ಬಂಗಾಳಿ ಜನಸಂಖ್ಯೆಯ ವಿರುದ್ಧ ಭಯೋತ್ಪಾದನೆ ಮತ್ತು ಹಿಂಸಾಚಾರದ ಅಭಿಯಾನವನ್ನು ಪ್ರಾರಂಭಿಸಿದರು. ಅವರು 200,000 ದಿಂದ 400,000 ಬಂಗಾಳಿ ಮಹಿಳೆಯರನ್ನು ಅತ್ಯಾಚಾರ ಮಾಡಿದರು. ಸೈನಿಕರು ಹೆಂಗಸರನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ಮಾನವ ಗುರಾಣಿಯಾಗಿ ಮುನ್ನೆಲೆಗೆ ತರುತ್ತಿದ್ದರು. ನಾವು ಶವಗಳಂತೆ ಮಲಗಿದ್ದೇವೆ. ಬಾಂಗ್ಲಾದೇಶದ 1970 ರ ಅತ್ಯಾಚಾರ ಶಿಬಿರದಲ್ಲಿ ಬದುಕುಳಿದವರು” ಎಂಬ ಶೀರ್ಷಿಕೆ ನೀಡಲಾಗಿದೆ.

ಇದೇ ಚಿತ್ರ ಬಾಂಗ್ಲಾದೇಶದ ವಿಮೋಚನಾ ಯುದ್ಧ ಎಂಬ ಪುಟದಲ್ಲಿ ಇರುವುದನ್ನು ಸಹ ನೋಡಬಹುದು.

ಚಿತ್ರ -೨

ಅನೇಕ ಜನರು ಸತ್ತು ಬಿದ್ದಿರುವ ಮತ್ತು ರಣಹದ್ದುಗಳು ಕಾಯುತ್ತಿರುವ ಚಿತ್ರವನ್ನು ಅನೇಕರು ಎಕ್ಸ್ ಖಾತೆಯಲ್ಲಿ ಇದು “ಗ್ರೇಟ್ ಕಲ್ಕತ್ತಾ ಹತ್ಯೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ’- 1946 ಆಗಸ್ಟ್ 16 ರಂದು ಮುಸ್ಲಿಂ ಲೀಗ್‌ನಿಂದ ಹಿಂದೂಗಳ ಹತ್ಯಾಕಾಂಡ. ಹುಸೇನ್ ಶಹೀದ್ ಸ್ವರಭ್ವೋಟಿ ಅಡಿಯಲ್ಲಿ” ಎಂದು ಅನೇಕರು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಈ ಚಿತ್ರವು ಬಂಗಾಳದ ಬರಗಾಲದ ಸಂದರ್ಭದ ಚಿತ್ರವಾಗಿದ್ದು. ಹಸಿವಿನಿಂದ ಸತ್ತ ಜನರನ್ನು ಈ ಪೋಟೋ ತೋರಿಸುತ್ತದೆ.

ಈ ಚಿತ್ರವನ್ನು ಡೈಲಿಓ “ವಸಾಹತುಶಾಹಿ ಒಂದು ವಿಪತ್ತು ಮತ್ತು ಸತ್ಯಗಳು ಅದನ್ನು ಸಾಬೀತುಪಡಿಸುತ್ತವೆ(Colonialism was a disaster and the facts prove it)” ಎಂಬ ಶೀರ್ಷಿಕೆಯಡಿಯಲ್ಲಿ ಬ್ರಿಟೀಷ್‌ ವಸಹಾತುಶಾಹಿಗಳ ಕಾಲದಲ್ಲಿ ನಡೆದ ದಾರುಣ ಘಟನೆಗಳನ್ನು ವಿವರಿಸುತ್ತದೆ.

ಚಿತ್ರ -೩

ಜನರು ವಲಸೆ ಹೋಗುತ್ತಿರುವ ಮೂರನೇ ಚಿತ್ರವು 1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದ ನಿರಾಶ್ರಿತರ ಚಿತ್ರವಾಗಿದೆ. ಆದರೆ ಈ ಚಿತ್ರವನ್ನು ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ್ದು ಎಂದು ಅನೇಕರು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದ ವಿಮೋಚನಾ ಯುದ್ಧದ ಸಂದರ್ಭದ ಅನೇಕ ವರದಿಗಳಲ್ಲಿ ಈ ಚಿತ್ರವನ್ನು ಬಳಸಿರುವುದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಬಾಂಗ್ಲಾ ಪರಿವರ್ತಕ ಪತ್ರಿಕೆಯಲ್ಲಿ ಸುಭ್ರೇಂದು ಭಟ್ಟಾಚಾರ್ಯ ಅವರು ಬರೆದ ‘ಸ್ವಾತಂತ್ರ್ಯ ಪಡೆಯುವಲ್ಲಿ ನಿರಾಶ್ರಿತರ ಪಾತ್ರ‘ ಎಂಬ ಲೇಖನದಲ್ಲಿ “30 ಲಕ್ಷ ಹುತಾತ್ಮರ ತ್ಯಾಗ ಮತ್ತು 2 ಲಕ್ಷ ತಾಯಂದಿರು ಮತ್ತು ಸಹೋದರಿಯರ ಪರಿಶುದ್ಧತೆಗೆ ಪ್ರತಿಯಾಗಿ ಬಾಂಗ್ಲಾದೇಶವು 9 ತಿಂಗಳ ರಕ್ತಸಿಕ್ತ ಯುದ್ಧದಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು. ನಮ್ಮ ವಿಮೋಚನಾ ಯುದ್ಧದಲ್ಲಿ ನೆರೆಯ ಭಾರತದ ಸುಮಾರು 8,000 ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಬಲವಾದ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಸ್ನೇಹಪರ ರಾಷ್ಟ್ರಗಳಾದ ಭಾರತ ಮತ್ತು ರಷ್ಯಾದ ಸಕ್ರಿಯ ಸಹಕಾರದೊಂದಿಗೆ ಒಂಬತ್ತು ತಿಂಗಳಲ್ಲಿ ದೇಶವನ್ನು ಆಕ್ರಮಣಕಾರರಿಂದ ಮುಕ್ತಗೊಳಿಸಲಾಯಿತು.” ಎಂದು ಬರೆಯಲಾಗಿದೆ.

ಚಿತ್ರ -೪

ನಾಲ್ಕನೇ ಚಿತ್ರದಲ್ಲಿ ಮುದುಕರೊಬ್ಬರು ಸಾಯುವ ಸ್ಥಿತಿಯಲ್ಲಿ ಇರುವುದನ್ನು ಮತ್ತು ಮಕ್ಕಳು ಆತನ ಸುತ್ತ ಕುಳಿತಿರುವುದನ್ನು ಕಾಣಬಹುದು. ಈ ಚಿತ್ರಕ್ಕೆ “ಸ್ವಾತಂತ್ರ್ಯ ಗಳಿಸಿದ್ದು ಚರಕದಿಂದ ಅಲ್ಲ, ಕೋಟ್ಯಾಂತರ ಹಿಂದೂಗಳ ಶವದ ಮೇಲೆ” ಎಂಬ ಶೀರ್ಷಿಕೆಯನ್ನು ಬರೆದು ಹಂಚಿಕೊಳ್ಳಲಾಗಿದೆ. ಈ ಮೂಲಕ ಮಹಾತ್ಮ ಗಾಂಧೀಜಿಯವರ ಚರಕ ಚಳುವಳಿಯನ್ನು ಟೀಕಿಸಲಾಗಿದೆ.

ಈ ಚಿತ್ರವು ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದ್ದಾಗಿದ್ದು. ಪ್ರಖ್ಯಾತ “ಲೈಫ್” ಮ್ಯಾಗಜೀನ್‌ಗೆ ವಿಭಜನೆಯ ಪೋಟೋಗಳನ್ನು ತೆಗೆಯಲು ಬಂದ ಅಮೇರಿಕಾದ ಪೋಟೋ-ಪತ್ರಕರ್ತೆ(photojournalist) ಮಾರ್ಗರೆಟ್ ಬೌರ್ಕ್-ವೈಟ್ “ಮಹಾ ವಲಸೆ” ಎಂಬ ಶೀರ್ಷಿಕೆಯಲ್ಲಿ ದಾಖಲಿಸಿರುವ ಭಾರತ-ಪಾಕಿಸ್ತಾನದ ವಿಭಜನೆಯ ವಲಸೆಯ ಸಂದರ್ಭದ ಚಿತ್ರವಾಗಿದೆ. ಈ ಚಿತ್ರಗಳಲ್ಲಿ ವಲಸೆಯಿಂದ ಸತ್ತ, ಕಾಯಿಲೆಗೆ ತುತ್ತಾದ ಹಿಂದೂ, ಮುಸ್ಲಿಂ, ಸಿಖ್ಖರನ್ನು ನೋಡಬಹುದು.

ಮಾರ್ಗರೆಟ್ ಬೌರ್ಕ್-ವೈಟ್ ಅವರು “Halfway to Freedom” ಎಂಬ ಕೃತಿಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿ, ವಿಭಜನೆ, ಗಾಂಧೀಜಿಯವರ ವ್ಯಕ್ತಿತ್ವ ಎಲ್ಲವನ್ನೂ ನೇರ ಮತ್ತು ನಿಷ್ಠೂರವಾಗಿ ಬರೆದಿದ್ದಾರೆ. ಈ ಪುಸ್ತಕ ಕನ್ನಡಕ್ಕೆ ಸಹ ಅನುವಾದಗೊಂಡಿದ್ದು, “ಬರ್ಕ್‌-ವೈಟ್‌  ಕಂಡ ಭಾರತ” ಎಂಬ ಹೆಸರಿನಲ್ಲಿ ಕೆ. ಆರ್‌. ಸಂಧ್ಯಾರೆಡ್ಡಿ ಅವರು ಅನುವಾದಿಸಿದ್ದಾರೆ. ಭಾರತದ ವಿಭಜನೆಯ ಕುರಿತು ತಿಳಿಯಬಯಸುವವರು ಈ ಕೃತಿಯನ್ನು ಓದುವುದು ಬಹಳ ಮುಖ್ಯವಾಗಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನದ ವಿಭಜನೆಯನ್ನು ಗಾಂಧೀಜಿಯವರು ವಿರೋಧಿಸಿದ್ದರು ಎಂದು ತಿಳಿಯಬಹುದು. 

ಚಿತ್ರ – ೫

ಐದನೇ ಚಿತ್ರದಲ್ಲಿ ಗುಂಪೊಂದು ವ್ಯಕ್ತಿಯೊಬ್ಬನನ್ನು ತಳಿಸುತ್ತಿರುವುದನ್ನು ತೋರಿಸುತ್ತದೆ, ಇದಕ್ಕೆ ” ಆಗಸ್ಟ್ 14, 1947 ರಂದು, ಮುಸ್ಲಿಮರು ಏಕಪಕ್ಷೀಯವಾಗಿ ಹಿಂದೂಗಳ ಹತ್ಯಾಕಾಂಡವನ್ನು ನಡೆಸಿದರು” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಅನೇಕ ಹುಡುಕಾಟಗಳ ನಂತರವೂ ಈ ಪೋಟೋ ಯಾವ ಸಂದರ್ಭದ್ದು ಎಂದು ನಮ್ಮ ತಂಡಕ್ಕೆ ನಿರ್ಧಿಷ್ಟವಾಗಿ ಹುಡುಕಲು ಸಾಧ್ಯವಾಗಿಲ್ಲ. ಇನ್ನಷ್ಟು ಮಾಹಿತಿಗಳು ದೊರಕಿದ ಬಳಿಕ ಈ ಚಿತ್ರದ ವಿವರಣೆಯನ್ನು ನೀಡಲಾಗುವುದು.

ಆದ್ದರಿಂದ ಸಧ್ಯ ಭಾರತ ಮತ್ತು ಪಾಕಿಸ್ತಾನದ ವಿಭಜನೆ ಮತ್ತು ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿದ ಅನೇಕ ಪೋಟೋಗಳನ್ನು ತಪ್ಪು ಮಾಹಿತಿಗಳೊಡನೆ ಹಂಚಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳ ಮೇಲೆ ಮುಸ್ಲಿಂ ನಡೆಸಿದ ದಾಳಿಯ ಚಿತ್ರಗಳು ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಪಾಕಿಸ್ತಾನದ ಟಿವಿಯಲ್ಲಿ ರಾಹುಲ್ ಗಾಂಧಿಯನ್ನು ಪರಿಚಯಿಸುವ ವೀಡಿಯೊ ಎಂದು ಶಾಮ್‌ ಶರ್ಮ ಎಂಬ ಯೂಟೂಬರ್‌ನ ವೀಡಿಯೋ ವೈರಲ್‌


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *