Fact Check | ಮುಂಬೈನಲ್ಲಿ AIMIMನ ರ್ಯಾಲಿ ಎಂದು ಟಿಮೋರ್‌ ಲೆಸ್ಟ್ ದೇಶದ ವಿಡಿಯೋ ಹಂಚಿಕೆ

ಮುಂಬೈನ ಜನತೆ ಎಚ್ಚೆತ್ತುಕೊಳ್ಳಿ ಇಂದು AIMIMನ ರ್ಯಾಲಿಯಿಂದ ಮುಂಬೈನಲ್ಲಿ ಸಾಕಷ್ಟು ಟ್ರಾಫಿಕ್‌ ಜಾಮ್‌ ಆಗಿದೆ. ಇಷ್ಟು ದೊಡ್ಡ ಮಟ್ಟದ ರ್ಯಾಲಿಯ ಅವಶ್ಯಕತೆ ಇವರಿಗೇನಿತ್ತು? ಇವರಿಂದ ಯಾವಾಗಲು ಬಹುಸಂಖ್ಯಾತರು ತೊಂದರೆಗೆ ಒಳಗಾಗಬೇಕೆ?. ಈಗಾಲಾದರೂ ಮುಂಬೈನ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದ್ದಲ್ಲ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಲವರು ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರಿದ್ದಾರೆ. ಸಾಕಷ್ಟು ಮಂದಿ AIMIM ಅನ್ನು ನಿಷೇಧಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಹಲವು ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಹಲವು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ Tín thác – lòng Chúa thương xót ಎಂಬ ಖಾತೆಯಿಂದ ಅಪ್‌ಲೋಡ್‌ ಮಾಡಲಾದ ವಿಡಿಯೋವೊಂದು ಕಂಡು ಬಂದಿದ್ದು ಈ ವಿಡಿಯೋಗೂ ವೈರಲ್‌ ವಿಡಿಯೋ ಹಲವು ಸಾಮ್ಯತೆಗಳಿರುವುದನ್ನು ನಾವು ಕಂಡು ಕೊಂಡಿದ್ದೇವೆ.

ಈ ವೈರಲ್‌ ವಿಡಿಯೋವನ್ನು ಸೆಪ್ಟೆಂಬರ್‌ 13 ರಂದು  ಹಂಚಿಕೊಳ್ಳಲಾಗಿದ್ದು, ಇದರಲ್ಲಿ ” ಸೆಪ್ಟೆಂಬರ್ 10, 2024 ರ ಮಧ್ಯಾಹ್ನ ಟಿಮೋರ್-ಲೆಸ್ಟೆಯ ಟ್ಯಾಸಿ ಟೋಲುದಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ 600,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಜನರ ಸ್ಟ್ರೀಮ್ ಪವಿತ್ರ ತಂದೆಯತ್ತ ಕೈಬೀಸಿತು ಕ್ಯಾಥೋಲಿಕ್ ನ್ಯೂಸ್” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಇದರ ಆಧಾರ ಮೇಲೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಸೆಪ್ಟೆಂಬರ್‌ 23 ರಂದು SAP News ತನ್ನ ಯುಟ್ಯೂಬ್‌ ಚಾನಲ್‌ನಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ಪೋಪ್ ಫ್ರಾನ್ಸಿಸ್ ಅವರು ಟಿಮೋರ್-ಲೆಸ್ಟ್‌ ದೇಶದ ಟ್ಯಾಸಿ ಟೋಲುಗೆ ಆಗಮಿಸಿದ್ದಾರೆ. ಈ ವೇಳೆ ಲಕ್ಷಾಂತರ ಜನ ಸೇರಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಇದೇ ರೀತಿಯಾದ ಹಲವು ವರದಿಗಳು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿನ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಮುಂಬೈನಲ್ಲಿ AIMIMನ ರ್ಯಾಲಿಯಲ್ಲಿ ಲಕ್ಷಾಂತರ ಜನ ಸೇರಿದ್ದರು, ಇದರಿಂದ ಮುಂಬೈನಾದ್ಯಂತ ಟ್ರಾಫಿಕ್‌ ಜಾಮ್‌ ಉಂಟಾಗಿದೆ ಎಂಬುದು ಸುಳ್ಳಾಗಿದೆ. ವೈರಲ್‌ ವಿಡಿಯೋ ಟಿಮೋರ್-ಲೆಸ್ಟ್‌ ದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಯಾವುದೇ ವೈರಲ್‌ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ :  ಲೆಬನಾನ್ ಪೇಜರ್ ಸ್ಫೋಟದ ನಂತರ ಹಸನ್ ನಸ್ರಲ್ಲಾ ಅತ್ತಿದ್ದಾರೆ ಎಂದು ಹಳೆಯ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *