Fact Check | ಮಹಾಲಕ್ಷ್ಮಿ ಕೊಲೆ ಆರೋಪಿಯನ್ನು ಮುಸ್ಲಿಂ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೆ

“ಅಂದು ಶ್ರದ್ಧಾಳ ಗೆಳೆಯ ಅಫ್ತಾ಼ಬ್‌ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಇಂದು ಬೆಂಗಳೂರಿನ ಮಹಾಲಕ್ಷ್ಮಿಯನ್ನು ಆಕೆಯ ಗೆಳೆಯ ಅಶ್ರಫ್‌ 32 ತುಂಡುಗಳಾಗಿ ಕತ್ತರಿಸಿದ್ದಾನೆ. ಹಿಂದೂಗಳೆ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ನಿಮ್ಮ ಹೆಣ್ಣು ಮಕ್ಕಳಿಗೂ ಇದೆ ರೀತಿಯ ಅನಾಹುತ ಸಂಭವಿಸಬಹುದು” ಎಂದು ಫೋಟೋವಿನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಬಹುತೇಕರ ವಾದ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್‌ ಎಂಬುದು. ಹೀಗಾಗಿ ಪೋಸ್ಟ್‌ ವೈರಲ್‌ ಆಗಿದೆ.

ಈ ಪೋಸ್ಟ್‌ ಅನ್ನು ನೋಡಿದ ಹಲವು ಮಂದಿ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್‌  ಎಂದು ನಂಬಿಕೊಂಡಿದ್ದಾರೆ. ಇನ್ನೂ ಕೆಲವರು “ಮಹಾಲಕ್ಷ್ಮಿ ಕನ್ನಡವನ್ನು ಬಹಳ ಸ್ಪಷ್ಟವಾಗಿ ಮಾತನಾಡುತ್ತಿದ್ದಳು. ಆದರೆ ಅವಳನ್ನು ರಕ್ಷಿಸಲು ಯಾವುದೂ ಅಸ್ತ್ರವಾಗಿ ಬರಲಿಲ್ಲ. ಜಾತಿ, ಭಾಷೆ, ರಾಜ್ಯದ ಹೆಸರಿನಲ್ಲಿ ಜಗಳವಾಡುವುದನ್ನು ನಿಲ್ಲಿಸಿ. ಹಿಂದೂಗಳೇ ಒಗ್ಗಟ್ಟಾಗಿ ಎಲ್ಲರ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡಲು ಸಿದ್ದರಾಗಿದೆ.” ಎಂದು ತೆರೆದ ಫ್ರಿಜ್‌ನಲ್ಲಿ ಕತ್ತರಿಸಿದ ದೇಹದ ತುಂಡು ಹಾಗೂ ಅದರ ಮುಂದೆ ಮುಸ್ಲಿಂ ಟೋಪಿ ಧರಿಸಿದ್ದ ವ್ಯಕ್ತಿ ಕುಳಿತಿರುವ ಫೋಟೋವನ್ನು ಹಂಚಿಕೊಂಡು, ಮಹಾಲಕ್ಷ್ಮಿಯನ್ನು ಕೊಂದಿದ್ದು ಮುಸ್ಲಿಂ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ. ಹೀಗೆ ವಿವಿಧ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ “Massive Twist Around The Mahalakshmi Case |ಮುಕ್ತಿ ಕೊಟ್ಟರಾಕ್ಷಸ ರಂಜನ್!|Mukti Ranjan |Bengaluru” ಎಂಬ ಶೀರ್ಷಿಕೆಯ ಅಡಿಯಲ್ಲಿ ನ್ಯೂಸ್‌ 18 ಕನ್ನಡ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ಆರೋಪಿಯ ಹೆಸರು ರಂಜನ್‌ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಇನ್ನೂ ಹಲವು ವರದಿಗಳನ್ನು ಪರಿಶೀಲನೆ ನಡೆಸಿದಾಗ ಎಲ್ಲಾ ವರದಿಗಳಲ್ಲಿ ಕೂಡ ಮೃತ ಆರೋಪಿ ರಂಜನ್‌ ಎಂಬುದನ್ನೇ ಉಲ್ಲೇಖಿಸಿವೆ. ಇನ್ನು ಈ ಕೊಲೆ ಪ್ರಕರಣ ಬೆಳಕಿಗೆ ಬರುತಿದ್ದಂತೆ ಮೊದಲು ಮೃತ ಮಹಾಲಕ್ಷ್ಮಿ ಪತಿ ಹೇಮಂತ್, ಅಶ್ರಫ್ ಎಂಬಾತನ‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಈ ಆರೋಪಿಯನ್ನೂ ಪೊಲೀಸರು ವಿಚಾರಣೆ ನಡೆಸಿದಾಗ,  ಕೊಲೆಯಲ್ಲಿ ಈತನ ಪಾತ್ರ ಇಲ್ಲ‌ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ ಪೊಲೀಸರಿಗೆ ಮೃತ ಆರೋಪಿ ರಂಜನ್‌ ಸುಳಿವು ಸಿಕ್ಕಿದೆ. ಬಳಿಕ ಈತನನ್ನು ಹುಡುಕಿಕೊಂಡು ಒಡಿಶಾಗೆ ಪೊಲೀಸರು ಹೋಗುತ್ತಿದ್ದಂತೆ ಆರೋಪಿ ರಂಜನ್‌ ನೇಣಿಗೆ ಶರಣಾಗಿದ್ದಾನೆ. 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಅಶ್ರಫ್‌ ಮಹಾಲಕ್ಷ್ಮಿಯನ್ನು ಕೊಂದಿದ್ದಾನೆ ಎಂಬುದು ಸುಳ್ಳು, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಮಹಾಲಕ್ಷ್ಮಿ ಕೊಲೆ ಆರೋಪಿ ರಂಜನ್‌ ನೇಣಿಗೆ ಶರಣಾಗಿದ್ದು, ಲಭ್ಯವಿರುವ ಅಧಿಕೃತ ಮಾಹಿತಿಗಳ ಪ್ರಕಾರ  ಈತನ ಡೈರಿ ಮತ್ತು ಡೆತ್‌ನೋಟ್ ಪತ್ತೆಯಾಗಿದೆ‌ ಎನ್ನಲಾಗುತ್ತಿದೆ. ಅದರಲ್ಲಿ ಈತನೇ ಮಹಾಲಕ್ಷ್ಮಿಯನ್ನು ಕೊಂದಿದ್ದಾನೆ ಎಂದು ಬರೆದುಕೊಂಡಿದ್ದಾನೆ ಎಂಬ ಅಂಶವನ್ನು ಹಲವು ಮಾಧ್ಯಮಗಳು ಉಲ್ಲೇಖಿಸಿವೆ. ಹಾಗಾಗಿ  ವೈರಲ್‌ ಆಗುತ್ತಿರುವ ಪೋಸ್ಟ್‌ಗಳು ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ :  Fact Check: ಜಪಾನಿನ ಅಟಾಮಿಯ ಭೂಕುಸಿತವನ್ನುಇಟಲಿಯಲ್ಲಿ ನಡೆದಿದೆ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *