Fact Check I ಆಸ್ಕರ್‌ ಪ್ರಶಸ್ತಿ ನಾಮ ನಿರ್ದೇಶನಕ್ಕೆ ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಚಲನಚಿತ್ರ ಆಯ್ಕೆ ಮಾಡಿಲ್ಲ

ಆಸ್ಕರ್‌ ಪ್ರಶಸ್ತಿಗೆ ಪ್ರತಿ ವರ್ಷ ಭಾರತದಿಂದ ಒಂದು ಸಿನಿಮಾವನ್ನು ‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ಆಯ್ಕೆ ಮಾಡಿ ಕಳುಹಿಸುತ್ತದೆ. ಈ ವರ್ಷ ಕಿರಣ್ ರಾವ್‌ರವರಿಂದ​ ನಿರ್ದೇಶಿತ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆಗಿದೆ.


ಸೋಮವಾರ (ಸೆ.23) ಆಸ್ಕರ್​ ಸ್ಪರ್ಧೆಗೆ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆದ ಸುದ್ದಿ ಕೇಳಿ ಬಂದ ಬೆನ್ನಲ್ಲೇ, ಆಸ್ಕರ್‌ ಪ್ರಶಸ್ತಿಯ ಅಂಗಳಕ್ಕೆ ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ ತಮ್ಮ ಸಿನಿಮಾವನ್ನು ಅಧಿಕೃತವಾಗಿ ಸಲ್ಲಿಕೆ ಮಾಡಿದೆ ಎಂದು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರತಂಡ ಘೋಷಿಸಿಕೊಂಡಿದೆ. ಚಿತ್ರದ ನಿರ್ದೇಶಕ ರಣ್‌ ದೀಪ್ ಹೂಡ ಖುದ್ದು ಈ ವಿಚಾರವನ್ನು ಹಂಚಿಕೊಂಡಿದ್ದು, ತಮ್ಮ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ನಮ್ಮ ಚಿತ್ರ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಆಸ್ಕರ್‌ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಚಲನಚಿತ್ರ ಫೆಡರೇಶನ್‌ಗೆ ಧನ್ಯವಾದಗಳು, ಇದೊಂದು ಅದ್ಭುತ ಪ್ರಯಾಣವಾಗಿದ್ದು ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ರಣ್‌ದೀಪ್ ಹೂಡ ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್:‌

‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾʼ ವತಿಯಿಂದ ಒಂದೇ ಸಿನೆಮಾವನ್ನು ಅಧಿಕೃತವಾಗಿ ಕಳುಹಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ ವಿಷಯ. ಹಾಗಾಗಿ, ಒಂದು ದೇಶದಿಂದ 2 ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ.
ಸೋಮವಾರ(ಸೆ.23) ಆಸ್ಕರ್​ ಸ್ಪರ್ಧೆಗೆ ‘ಲಾಪತಾ ಲೇಡೀಸ್​’ ಸಿನಿಮಾ ಆಯ್ಕೆ ಆದ ಸುದ್ದಿ ಅಧಿಕೃತವಾಗಿ ಹೊರಬಂದಿದ್ದು, ʼಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ’ ವತಿಯಿಂದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಆಯ್ಕೆಯೇ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ.

“ಸ್ವಾತಂತ್ರ್ಯ ವೀರ್ ಸಾವರ್ಕರ್ ಚಲನಚಿತ್ರವನ್ನು “ಅಧಿಕೃತವಾಗಿ” ಆಸ್ಕರ್‌ಗೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಸಂಪೂರ್ಣವಾಗಿ ಸುಳ್ಳು. ಸಿನೆಮಾ ತಯಾರಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗಾಗಿ ಲಾಪತಾ ಲೇಡೀಸ್ ಅನ್ನು ಮಾತ್ರ ಕಳುಹಿಸಲಾಗಿದೆ” ಎಂದು ಎಫ್‌ಎಫ್‌ಐ ಅಧ್ಯಕ್ಷ ರವಿ ಕೊಟ್ಟಕರ ಸ್ಪಷ್ಟನೆ ನೀಡಿದ್ದಾರೆ.

ಆಸ್ಕರ್‌ಗೆ ಪರಿಗಣಿಸಲು ಸಲ್ಲಿಸಲಾದ 29 ಚಲನಚಿತ್ರಗಳಲ್ಲಿ ಸ್ವಾತಂತ್ರ್ಯ ವೀರ್ ಸಾವರ್ಕರ್ ಕೂಡಾ ಒಂದಾಗಿದೆ. ಪಾಯಲ್ ಕಪಾಡಿಯಾ ಅವರ ಕ್ಯಾನೆಸ್ ವಿಜೇತ ಆಲ್ ವಿ ಇಮ್ಯಾಜಿನ್ ಆಸ್ ಲೈಟ್, ಆನಂದ್ ಎಕರ್ಷಿ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಆಟಂ, ಸಂದೀಪ್ ರೆಡ್ಡಿ ವಂಗಾ ಅವರ ವಿವಾದಾತ್ಮಕ ಬ್ಲಾಕ್‌ಬಸ್ಟರ್ ಅನಿಮಲ್, ಜೊತೆಗೆ ಸಹಜವಾಗಿ, ಲಾಪತಾ ಲೇಡೀಸ್ ಹಾಗೂ ಸ್ವಾತಂತ್ರ್ಯ ವೀರ್ ಸಾವರ್ಕರ್ ಪಟ್ಟಿಯಲ್ಲಿತ್ತು.

FFI ಹೊರತಂದಿರುವ ಮಾನದಂಡಗಳಿಗೆ ಸರಿಹೊಂದುವ ಯಾವುದೇ ಚಲನಚಿತ್ರವನ್ನು, ಸಿನೆಮಾ ತಯಾರಕರು 1,25,000 ರೂಪಾಯಿಗಳ ಶುಲ್ಕ ಪಾವತಿಸುವ ಮೂಲಕ ಭಾರತದ ಸಂಭಾವ್ಯ ಅಧಿಕೃತ ಆಯ್ಕೆಗಾಗಿ ತಮ್ಮ ಸಿನೆಮಾವನ್ನು ಸಲ್ಲಿಸಬಹುದು. ಸಲ್ಲಿಕೆಯಾದ ಚಲನಚಿತ್ರಗಳನ್ನು ತೀರ್ಪುಗಾರರು ವೀಕ್ಷಿಸುತ್ತಾರೆ ಮತ್ತು ದೇಶವನ್ನು ಪ್ರತಿನಿಧಿಸಲು ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಾರೆ. ಈ ಬಾರೀ ಸಲ್ಲಿಕೆಯಾದ 29 ಚಲನಚಿತ್ರಗಳಲ್ಲಿ ʼಲಾಪತಾ ಲೇಡೀಸ್‌ʼ FFIನ ಅಧಿಕೃತ ಆಯ್ಕೆಯಾಗಿದೆ.

FFI ದೇಶವನ್ನು ಪ್ರತಿನಿಧಿಸುವ ಒಂದು ಸಿನಿಮಾವನ್ನು ಮಾತ್ರ ಅಧಿಕೃತವಾಗಿ ಆಸ್ಕರ್​ ಸ್ಪರ್ಧೆಗೆ ಕಳಿಸಬಹುದು. ಆದರೆ ಇನ್ನುಳಿದ ಸಿನಿಮಾ ತಂಡಗಳು ಪ್ರತ್ಯೇಕವಾಗಿ ಬೇಕಿದ್ದರೆ ಆಸ್ಕರ್​ಗೆ ಸ್ಪರ್ಧೆ ನೀಡಬಹುದು. ಆದರೆ ಆ ರೀತಿ ಮಾಡಲು ಸಿನೆಮಾ ತಯಾರಕರು ಬಹುಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ತಂಡ ಕೂಡ ಆ ದಾರಿ ಅನುಸರಿಸಬಹುದು. ಆದ್ದರಿಂದ ‘ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ’ದ ಹೆಸರನ್ನು ಎಳೆದು ತರುವ ಅಗತ್ಯ ಇಲ್ಲ.

ಆದ್ದರಿಂದ, ಸಂಪೂರ್ಣ ವರದಿಯನ್ನು ಪರಿಶೀಲಿಸಿದಾಗ ವೀರ್‌ ಸಾವರ್ಕರ್‌ ಚಲನಚಿತ್ರವು ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾದ ಅಧಿಕೃತ ಆಯ್ಕೆಯಲ್ಲ ಎಂಬುದು ಸ್ಪಷ್ಟವಾಗಿದೆ. ಮತ್ತು ʼಲಾಪತಾ ಲೇಡೀಸ್‌ʼ ಚಲನಚಿತ್ರವನ್ನು FFI ಈ ಬಾರೀ ಆಸ್ಕರ್‌ಗೆ ಕಳುಹಿಸಿದೆ.


ಇದನ್ನು ಓದಿದ್ದೀರಾ? Fact Check | ತಿರುಪತಿ ದೇಗುಲದ ಅರ್ಚಕರ ಪುತ್ರಿಯರ ಮದುವೆಗೆ ನೂರು ಕೆಜಿ ಚಿನ್ನ ಬಳಕೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *