Fact Check | ತಿರುಪತಿ ದೇಗುಲದ ಅರ್ಚಕರ ಪುತ್ರಿಯರ ಮದುವೆಗೆ ನೂರು ಕೆಜಿ ಚಿನ್ನ ಬಳಕೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ

“ಇದು ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರ ಮೂವರು ಪುತ್ರಿಯರ ಮದುವೆಯ ಫೋಟೋ, ಎಲ್ಲಾ ಮೂವರ ಚಿನ್ನದ ಆಭರಣಗಳ ತೂಕ 125 ಕೆಜಿ! ಭಾರತೀಯ ನಾಗರಿಕರು ಎಲ್ಲಿ ದಾನ ಮಾಡಬೇಕೆಂದು ಯೋಚಿಸಬೇಕು. ಏಕೆಂದರೆ ನೀವು ದಾನ ಮಾಡುವ ಚಿನ್ನದ ಆಭರಣಗಳು ದೇವಾಲಯದ ಅಭಿವೃದ್ಧಿಗೆ ಹೋಗುತ್ತಿಲ್ಲ. ಬದಲಾಗಿ ಅಲ್ಲಿನ ಅರ್ಚಕರ ಮನೆಗೆ ಸೇರುತ್ತಿದೆ. ಏಕೆ ಈ ಬಗ್ಗೆ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇದು ಧರ್ಮದ್ರೋಹ ಅಲ್ಲವೆ?” ಎಂದು  ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋಗಳಲ್ಲಿ ಮೂವರು ಯುವತಿಯರು ಚಿನ್ನದ ಆಭರಣಗಳನ್ನು ಧರಿಸಿರುವುದು ಕಂಡು ಬಂದಿದ್ದು, ಮತ್ತೊಂದು ಕಡೆಯಲ್ಲಿ ವ್ಯಕ್ತಿಯೊಬ್ಬ ಕೆಜಿ ಗಟ್ಟಲೆ ಚಿನ್ನವನ್ನು ಧರಿಸಿರುವುದು ಕೂಡ ಕಂಡು ಬಂದಿದೆ. ಹಾಗಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಅನ್ನು ಹಲವರು ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಕೂಡ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಹಲವು ರೀತಿಯಾದ ಗೊಂದಲಗಳು ಸೃಷ್ಟಿಯಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ “ಗೋಲ್ಡ್ ಮ್ಯಾನ್/ಕಾಕಾ 222” ಹೆಸರಿನ ಫೇಸ್‌ಬುಕ್ ಪುಟದಲ್ಲಿ ಈ ವೈರಲ್‌ ಫೋಟೋ ಕಂಡು ಬಂದಿದೆ.  ಇದರ ಆಧಾರದ ಮೇಲೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಾವು ಎಕ್ಸ್‌ನಲ್ಲಿ ವೈರಲ್‌ ಪೋಸ್ಟ್‌ ಅನ್ನು ಕಂಡುಕೊಂಡಿದ್ದೇವೆ ಈ ವೈರಲ್‌ ಪೋಸ್ಟ್‌ ಅನ್ನು 23 ಸೆಪ್ಟೆಂಬರ್‌ 2018 ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಇರುವುದು ಪತ್ತೆಯಾಗಿದೆ. ಅಲ್ಲಿಗೆ ವೈರಲ್‌ ಫೋಟೋವಿನ ಒಂದು ಭಾಗ 6 ವರ್ಷಗಳಷ್ಟು ಹಿಂದಿನದ್ದು ಎಂಬುದು ಸಾಬೀತಾಗಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಪಾಕಿಸ್ತಾನಿ ಸುದ್ದಿ ಸಂಸ್ಥೆಯೊಂದು 12 ಅಕ್ಟೋಬರ್‌ 2018ರಂದು ಈ ಸುದ್ದಿಯನ್ನು ಹಂಚಿಕೊಂಡಿರುವುದು ತಿಳಿದು ಬಂದಿದೆ. ಅದರಲ್ಲಿ ಈ ವ್ಯಕ್ತಿ ಪಾಕಿಸ್ತಾನದ ರಾವಲ್ಪಿಂಡಿಯ ನಿವಾಸಿ ಅಮ್ಜದ್ ಎಂದು ಗುರುತಿಸಲಾಗಿದೆ ‘ಗೋಲ್ಡ್ ಮ್ಯಾನ್ ಕಾಕಾ 222’ ಹೆಸರಿನ ಫೇಸ್‌ಬುಕ್ ಪುಟದಲ್ಲಿ 22 ಮೇ 2029 ರಂದು ಹಂಚಿಕೊಂಡ ಪೋಸ್ಟ್‌ನಲ್ಲಿ , ಆತ ತನ್ನ ಹೆಸರನ್ನು ಅಮ್ಜದ್ ಸಯೀದ್ ಎಂದು ಹೇಳಿಕೊಂಡಿರುವುದು ಕಂಡು ಬಂದಿದೆ.

ಇನ್ನು ಫೋಟೋದಲ್ಲಿ ಚಿನ್ನಾಭರಣಗಳೊಂದಿಗೆ ಇರುವ ಮೂವರು ಯುವತಿಯರ ಬಗ್ಗೆ ನಾವು ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 27 ಮೇ 2016 ರಂದು ತೆಲುಗಿನ  ‘ವಿ 6 ನ್ಯೂಸ್ ತೆಲುಗು’ ಎಂಬ ಸುದ್ದಿ ವಾಹಿನಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಕಂಡು ಬಂದಿದೆ. ಇದರಲ್ಲಿ ಆಭರಣಗಳನ್ನು ಹೊತ್ತ ಮೂವರು ಮಹಿಳೆಯರು ಬಿಹಾರದ  ಶ್ರೀಮಂತ ವ್ಯಕ್ತಿಯೊರ್ವರ ಪುತ್ರಿಯರು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ, ಫೇಸ್‌ಬುಕ್ ಬಳಕೆದಾರರಾದ ‘ಪಾಥಕ್ ಜಿ’ ಎಂಬ ಪ್ರೊಫೈಲ್‌ನಿಂದ ಹಂಚಿಕೊಳ್ಳಲಾದ ಈ ಚಿತ್ರ ಕಂಡು ಬಂದಿದ್ದು, ಅದರಲ್ಲಿ 6 ಮೇ  2016 ರಂದು ‘ಸತ್ಪಾಲ್ ಖಾರಿಯ ಪುತ್ರಿಯರ’ ಮದುವೆ ಎಂದು ಹಂಚಿಕೊಳ್ಳಲಾಗಿರುವುದು ಪತ್ತೆಯಾಗಿದೆ. ಈ ಎಲ್ಲಾ ಮಾಹಿತಿಗಳನ್ನು ಗಮನಿಸಿದಾಗ ಮೂವರು ಯುವತಿಯರ ಫೋಟೋ ಸುಮಾರು 8 ವರ್ಷಗಳಷ್ಟು ಹಳೆಯದು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ವೈರಲ್ ಆಗುತ್ತಿರುವ ಚಿತ್ರವು ತಿರುಪತಿ ದೇವಸ್ಥಾನದ ಯಾವುದೇ ಅರ್ಚಕರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಕಳೆದ ಹಲವಾರು ವರ್ಷಗಳಿಂದ ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ. ವೈರಲ್‌ ಚಿತ್ರ ಎರಡು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಚಿನ್ನಾಭರಣ ಹೊಂದಿರುವ ವ್ಯಕ್ತಿ ಪಾಕಿಸ್ತಾನದ ರಾವಲ್ಪಿಂಡಿಯ ನಿವಾಸಿಯಾಗಿದ್ದು, ಆತ ‘ಚಿನ್ನದ ಮನುಷ್ಯ’ ಎಂದು ಪ್ರಸಿದ್ಧನಾಗಿದ್ದಾರೆ. ಇನ್ನು ಫೋಟೋದಲ್ಲಿ ಕಂಡು ಬಂದ ಮೂವರು ಯುವತಿಯರ ಫೋಟೊ ಬಿಹಾರ ಮೂಲದ್ದು ಎಂದು ತಿಳಿದು ಬಂದಿದೆ. ಹಾಗಾಗಿ ವೈರಲ್‌ ಫೋಟೋಗೂ ತಿರುಪತಿಯ ಅರ್ಚಕರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ.


ಇದನ್ನೂ ಓದಿ : Fact Check : ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *