Fact Check I ಬಾಂಗ್ಲಾದೇಶದಲ್ಲಿ ದೇವಸ್ಥಾನದ ಮೇಲೆ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನದ ಹಳೆಯ ವಿಡಿಯೋ ಹಂಚಿಕೆ

ಬಾಂಗ್ಲಾದೇಶದಲ್ಲಿ ದೇವಸ್ಥಾನದ ಮೇಲೆ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಿಂದೂಗಳು ಗಣಪತಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ನಂತರ ಮುಸ್ಲಿಮರ ಗುಂಪು ದೇವಾಲಯದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ.

ಫ್ಯಾಕ್ಟ್‌ ಚೆಕ್‌

ಈ ವಿಡಿಯೋ 2021ರದ್ದಾಗಿದ್ದು, ಈ ಘಟನೆ ಪಾಕಿಸ್ತಾನಕ್ಕೆ ಸಂಬಂಧಿಸಿದ್ದೇ ಹೊರತು ಬಾಂಗ್ಲಾದೇಶಲ್ಲಿ ನಡೆದಿದ್ದಲ್ಲ.

ವೈರಲ್ ವೀಡಿಯೊದಿಂದ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು Google ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, 2021ರ ಆಗಸ್ಟ್ ೫ರಂದು ಹಿಂದೂಸ್ತಾನ್ ಟೈಮ್ಸ್ ಹಂಚಿಕೊಂಡ YouTube ವೀಡಿಯೊ ಲಭ್ಯವಾಗಿದ್ದು, “ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ, ಕ್ಯಾಮರಾದ ಮೇಲೆ ಗುಂಪು ದಾಳಿ; ಇಮ್ರಾನ್ ಸರ್ಕಾರದ ವಿರುದ್ಧ ಭಾರತ ವಾಗ್ದಾಳಿ “ ಎಂದು ತಲೆಬರಹ ನೀಡಿದೆ. ಈ ವರದಿಯಲ್ಲಿ 2021ರ ಆಗಸ್ಟ್‌ 4ರಂದು ಪಾಕಿಸ್ತಾನದ ರಹೀಮ್ ಯಾರ್ ಖಾನ್ ಪ್ರದೇಶದಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲಾಗಿದೆ ಎಂದು ವಿವರಣೆಯಲ್ಲಿ ಹೇಳಲಾಗಿದೆ.

ಈ ವಿಡಿಯೋವನ್ನು ಆಧಾರವಾಗಿರಿಸಿಕೊಂಡು, ‘2021ಲ್ಲಿ ಪಾಕಿಸ್ತಾನದಲ್ಲಾದ ಹಿಂದೂ ದೇವಾಲಯದ ಮೇಲಿನ ದಾಳಿ’ ಎಂದು Googleನಲ್ಲಿ ಸಂಬಂಧಿಸಿದ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವ ಹಲವಾರು ವರದಿಗಳು ಲಭಿಸಿವೆ.

ಈ ಘಟನೆಯ ಕುರಿತು ಟೈಮ್ಸ್ ಆಫ್ ಇಂಡಿಯಾ, ಫ್ರೀ ಪ್ರೆಸ್ ಜರ್ನಲ್,  ಮತ್ತು ಇಂಡಿಯಾ ಟುಡೆ,   DW ವರದಿ ಮಾಡಿವೆ.

ಇಸ್ಲಾಮಿ ಧಾರ್ಮಿಕ ಪಠ್ಯಗಳನ್ನು ಹೊಂದಿರುವ ಶಾಲೆಯ ಗ್ರಂಥಾಲಯದಲ್ಲಿ ಕಾರ್ಪೆಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ನಂತರ ಹಿಂದೂ ಹುಡುಗನನ್ನು ಬಂಧಿಸಲಾಗಿತ್ತು. ಸ್ಥಳೀಯ ಧಾರ್ಮಿಕ ಶಾಲೆಯನ್ನು ಅಪವಿತ್ರಗೊಳಿಸಿದ 8 ವರ್ಷದ ಹಿಂದೂ ಬಾಲಕನಿಗೆ ನ್ಯಾಯಾಲಯ ಜಾಮೀನು ನೀಡಿದ ನಂತರ ಮುಸ್ಲಿಂ ಗುಂಪೊಂದು ಕ್ರೋಧಿತರಾಗಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿದ್ದವು.

ಆದರೆ, ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆಯ ನಡುವೆ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಆರೋಪಗಳು ಕೇಳಿಬರುತ್ತಿದ್ದು, “ಒಂದು ವರದಿಯ ಪ್ರಕಾರ, 2024ರ ಸೆಪ್ಟೆಂಬರ್7ರಂದು ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಗಣೇಶ ಚತುರ್ಥಿ ಮೆರವಣಿಗೆಯ ಮೇಲೆ ದಾಳಿ ನಡೆದಿದೆ ಎಂದು ವರದಿ ಮಾಡಿತ್ತು. ದಾಳಿಕೋರರು ವಿಗ್ರಹ ಮತ್ತು ಭಕ್ತರ ಮೇಲೆ ಬಿಸಿನೀರನ್ನು ಎರಚಿದ್ದಾರೆ ಎಂದು ಈ ವರದಿಯಲ್ಲಿ ಆರೋಪಿಸಲಾಗಿತ್ತು. ಈ ವರದಿಗೆ ಸಂಬಂಧಿಸಿ ಯಾವುದೇ ಅಧಿಕೃತ ವಿಡಿಯೋ ಅಥವಾ ಮಾಹಿತಿ ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಪಾಕಿಸ್ತಾನದಲ್ಲಾದ ಘಟನೆಯನ್ನು ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಬೀತಾಗಿದೆ.


ಇದನ್ನು ಓದಿದ್ದೀರಾ: Fact Check | AIIMS ವೈದ್ಯರು ಸೀತಾರಾಮ್ ಯೆಚೂರಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ


 ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *