Fact Check | ವೆನೆಜುವೆಲಾದ ಪ್ರತಿಭಟನಾ ವೀಡಿಯೋವನ್ನು ದೆಹಲಿಯಲ್ಲಿ ಉಂಟಾದ ಪ್ರವಾಹ ಎಂದು ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ “ದೆಹಲಿಯಲ್ಲಿ ಭೀಕರವಾದ ಮೇಘಸ್ಪೋಟದಿಂದ ಜನರು ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಮಂದಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವ ಇದ್ದಿದ್ದರಿಂದ ಸಿಕ್ಕ ಸಿಕ್ಕ ಕಡೆಗಳಲ್ಲಿ ಓಡಿ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ. ಈ ವೇಳೆ ಕೆಲವಡೆ ಕಾಲ್ತುಳಿತ ಕೂಡ ಉಂಟಾಗಿದೆ. ಹೀಗಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ದೆಹಲಿ ತನ್ನ ಇತಿಹಾಸದಲ್ಲೇ ಈ ರೀತಿಯಾದ ಪ್ರವಾಹವನ್ನು ನೋಡಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋದಲ್ಲಿ ಕೂಡ ದಟ್ಟವಾದ ಮಂಜಿನ ರೀತಿಯ ವಾತವಾರಣ ಕಾಣಿಸಿಕೊಂಡಿದ್ದು, ಸಾಕಷ್ಟು ಮಂದಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿರುವುದನ್ನು ನೋಡಬಹುದಾಗಿದೆ. ಹೀಗಾಗಿ ವಿಡಿಯೋ ನೋಡಿದ ಹಲವು ಮಂದಿ ಇದು ನಿಜವಾದ ಘಟನೆ ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಡಿಯೋ ಕೂಡ ಸಾಕಷ್ಟು ವೈರಲ್‌ ಆಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ 30 ಜುಲೈ 2024 ರಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕಂಡು ಬಂದಿದೆ. ಇಂತಹ ವಿಡಿಯೋಗಳಲ್ಲಿ “ಮಡುರೊ ವೆನೆಜುವೆಲಾದ ಚುನಾವಣೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿಬಂದಿದೆ ಎಂಬ ವರದಿಗಳ ನಂತರ ಪೋರ್ಟೊ ಲಾ ಕ್ರೂಜ್‌ನಲ್ಲಿ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ” ಎಂದು ಶೀರ್ಷಿಕೆ ನೀಡಿರುವ ಕೆಲವೊಂದು ವಿಡಿಯೋಗಳು ಕಂಡು ಬಂದಿವೆ.

ವೀಡಿಯೊ ವಿವರಣೆಯಿಂದ ಸುಳಿವನ್ನು ತೆಗೆದುಕೊಂಡು ಗೂಗಲ್‌ ಕೀವರ್ಡ್‌ಗಳಲ್ಲಿ ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ  30 ಜುಲೈ 2024 ರಂದು ಪ್ರಕಟವಾದ ಹಲವು ವರದಿಗಳು ಕಂಡು ಬಂದಿವೆ. ಇದರಲ್ಲಿ “ಇತ್ತೀಚಿನ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸೋಲನ್ನು ಒಪ್ಪಿಕೊಳ್ಳಬೇಕೆಂದು ಜನರು ಒತ್ತಾಯಿಸಿದ್ದರಿಂದ ವೆನೆಜುವೆಲಾದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ತಮ್ಮ ಅಭ್ಯರ್ಥಿ ಎಡ್ಮಂಡೊ ಗೊನ್ಜಾಲೆಜ್ ಅವರು ಮಡುರೊಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಪಡೆದರು ಎಂದು ವಿರೋಧವು ಹೇಳಿಕೊಂಡಿದೆ, ಆದರೆ ಚುನಾವಣಾ ಅಧಿಕಾರಿಗಳು ಮಡುರೊ ಅವರನ್ನು 51% ಮತಗಳೊಂದಿಗೆ ವಿಜೇತ ಎಂದು ಘೋಷಿಸಿದರು. ಅಂತರರಾಷ್ಟ್ರೀಯ ವೀಕ್ಷಕರು ಚುನಾವಣೆಯಲ್ಲಿ ಅಪರಾದ ನಡೆದಿದೆ ಎಂದು ಟೀಕಿಸಿದ್ದಾರೆ” ಎಂಬ ಅಂಶಗಳು ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹಲವು ಸುದ್ದಿ ಮಾಧ್ಯಮಗಳ ವರದಿಗಳನ್ನು ಆಧಾರಿಸಿ ಪರಿಶೀಲನೆ ನಡೆಸಿದಾಗ ವೈರಲ್‌ ವಿಡಿಯೋ ವೆನೆಜುವೆಲಾದ ಪ್ರತಿಭಟನೆಯ ವಿಡಿಯೋ ಎಂಬುದು ಹಲವು ಅಂಶಗಳಿಂದ ಸಾಬೀತಾಗಿದೆ. ವೈರಲ್‌ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಇಂತಹ ವಿಡಿಯೋಗಳು ಕಂಡು ಬಂದರೆ ಅವುಗಳನ್ನು ಹಂಚಿಕೊಳ್ಳಬೇಡಿ.


ಇದನ್ನೂ ಓದಿ : Fact Check: ಅನಂತ್‌ ಅಂಬಾನಿಯವರ ಮದುವೆಯಲ್ಲಿ ಬಾಲಿವುಡ್‌ ಸೆಲೆಬ್ರೆಟಿಗಳಾದ ಜಾವೇದ್ ಅಖ್ತರ್‌ ಮತ್ತು ಶಬಾನಾ ಅಜ್ಮಿ ನೃತ್ಯವನ್ನು ಮಾಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *