Fact Check : ಬುಲ್ಡೋಜರ್‌ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ ವೀಡಿಯೊ ತೆಲಂಗಾಣದ್ದಲ್ಲ ಸೌದಿ ಅರೇಬಿಯಾದ್ದು

ಪ್ರವಾಹ ಪೀಡಿತ ತೆಲಂಗಾಣದ ಖಮ್ಮಂನಲ್ಲಿ ರಕ್ಷಣಾ ಕಾರ್ಯಾಚರಣೆಯ ಪವಾಡವಾಗಿದೆ ಎಂದು ಸೌದಿ ಅರೇಬಿಯಾದ ವೀಡಿಯೊವನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

 

 

 

 

 

 

 

 

 

ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕಳೆದ ವಾರದಿಂದ ನಿರಂತರ ಮಳೆಯಿಂದಾಗಿ ತೀವ್ರ ಪ್ರವಾಹಕ್ಕೆ ತತ್ತರಿಸಿವೆ. ಭಾರತೀಯ ಹವಮಾನ ಇಲಾಖೆ (ಐಎಂಡಿ) ಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆಯಾಗಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿದ್ದು, 35ಕ್ಕೂ ಹೆಚ್ಚು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ತೆಲಂಗಾಣದ ಖಮ್ಮಂ ಪಟ್ಟಣವು ಪ್ರವಾಹಕ್ಕೆ ತುತ್ತಾಗಿದ್ದು, ನದಿ ತೊರೆಗಳು ಮತ್ತು ಪ್ರವಾಹದ ನೀರು ವಸತಿ ಕಾಲೋನಿಗಳಿಗೆ ಉಕ್ಕಿ ಹರಿಯುತ್ತಿದೆ. ಸುದ್ದಿ ವರದಿಗಳ ಪ್ರಕಾರ, ಪ್ರಕಾಶ್‌ ನಗರದ  ಮನ್ನೇರು ನದಿಯ ಸೇತುವೆಯಲ್ಲಿ ಸುಮಾರು ಒಂಭತ್ತು ಜನರು ಸಿಲುಕಿಕೊಂಡಿದ್ದರು. ನಂತರ ಹರಿಯಾಣ ಮೂಲದ ಜೆಸಿಬಿ ಚಾಲಕ ಎಲ್ಲ ಸದಸ್ಯರನ್ನು ರಕ್ಷಿಸಿದ್ದನು.

ಈ ಹಿನ್ನೆಯಲ್ಲಿ ಖಮ್ಮಂನಲ್ಲಿ ಜೆಸಿಬಿ ರಕ್ಷಣಾ ಕಾರ್ಯಾಚರಣೆ ನಡೆಸುವುದಾಗಿ ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಒಬ್ಬ X ಬಳಕೆದಾರನು ಹಂಚಿಕೊಂಡಿದ್ದಾನೆ. ಅದರಲ್ಲಿ ” ಮುನ್ನೇರು ಪ್ರವಾಹದಲ್ಲಿ 9 ಮಂದಿ ಗಂಟೆಗಟ್ಟಲೆ ಸಿಲುಕಿದ್ದರು. ಎಲ್ಲಾ ಅಪಾಯಗಳನ್ನು ನಿರ್ಲಕ್ಷಿಸಿ, ಸುಭಾನ್‌ ಖಾನ್‌ ಒಬ್ಬರೇ ತಮ್ಮ ಜೆಸಿಬಿಯಿಂದ ಎಲ್ಲರನ್ನು ರಕ್ಷಿಸಿದರು. ಅವರು ನಾನು ಸತ್ತರೆ ಒಬ್ಬನೇ ಸಾಯುತ್ತೇನೆ. ಬದುಕಿದರೆ 9 ಜನರೊಂದಿಗೆ ಹಿಂತಿರುಗುತ್ತೇನೆ” ಎಂದು ಹೇಳಿದರು. ಅವರು ನಿಜವಾದ ಹೀರೋ! ಎಂದು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ ಚೆಕ್:‌

ಈ ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಬಳಸಿಕೊಂಡು ಹುಡುಕಿದಾಗ ಇದು ಸೌದಿ ಅರೇಬಿಯಾದ  ವಿಡಿಯೋ ಎಂದು ತಿಳಿದುಬಂದಿದೆ. 2024ರ ಎಪ್ರಿಲ್ 28 ರಂದು ಗಲ್ಪ್‌ ನ್ಯೂಸ್  ಈ ವಿಡಿಯೋವನ್ನು ಹಂಚಿಕೊಂಡಿದೆ. ಈ ವರದಿಯ ಪ್ರಕಾರ,  ಸೌದಿಯ ಬಿಷಾ ಪ್ರಾಂತ್ಯದಲ್ಲಿ ನಾಗರಿಕರು ಪ್ರವಾಹದಲ್ಲಿ ಸಿಲುಕಿದ ವೇಳೆ ನಾಲ್ವರನ್ನು ರಕ್ಷಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ಗಳು ಮತ್ತು ವೈರಲ್ ವಿಡಿಯೋ ಎಕ್ಸ್‌ ಎಂಬೆಡ್‌ ಸಹ ಈ ವರದಿಯಲ್ಲಿ ಕಂಡುಬಂದಿದೆ. ಆದ್ದರಿಂದ ಇದು ಸೌದಿ ಅರೇಬಿಯಾದ್ದು ಎಂದು ನಿಖರವಾಗಿ ಹೇಳಬಹುದು.

ಇದಲ್ಲದೆ ಅದೇ ದೃಶ್ಯಗಳನ್ನು ಸ್ಥಳೀಯ ಅರೇಬಿಕ್ ಸುದ್ದಿವಾಹಿನಿಗಳಲ್ಲಿ ಹಂಚಿಕೊಂಡಿದ್ದಾರೆ. ಈ  ವರದಿಗಳ ಪ್ರಕಾರ ಅಯದ್‌ ಬಿನ್‌ ದಗಾಷ್‌ ಅಲ್‌ ಅಕ್ಲಾಬಿ ಎಂಬ ವ್ಯಕ್ತಿ ಬಿಶಾದ ಕಣಿವೆಯಲ್ಲಿ ಅವರ ವಾಹನವು ಪ್ರವಾಹದಲ್ಲಿ ಕೊಚ್ಚಿ ಹೋಗುವ ಕೆಲವೇ ಕ್ಷಣಗಳ ಮೊದಲು ಕಾರಿನೊಳಗೆ ಸಿಕ್ಕಿಬಿದ್ದ ನಾಲ್ವರ ಜೀವಗಳನ್ನು ಉಳಿಸಿದ್ದಾರೆ.

ಈ ವಿಡಿಯೋವನ್ನು 2024ರ ಏಪ್ರಿಲ್ 28 ರಂದು ಅಬುಲೌಯಿ ನೋಟ್ ಬುಕ್ ಹೆಸರಿನ ಚಾನೆಲ್ ಮೂಲಕ You Tube ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದು ವೈರಲ್ ವಿಡಿಯೋದ ದೃಶ್ಯಗಳನ್ನು ಒಳಗೊಂಡಿದೆ.

ಹರಿಯಾಣದ ಜೆಸಿಬಿ ಚಾಲಕ ಸುಭಾನ್ ಖಾನ್ ನಡೆಸಿದ ರಕ್ಷಣಾ ಕಾರ್ಯಚರಣೆಯ ಮೂಲ ವೀಡಿಯೊವನ್ನು ಸಪ್ಟೆಂಬರ್ 4ರಂದು ಎನ್.ಡಿ ಟಿವಿಯ You Tube ಚಾನಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮತ್ತು ಬಿಬಿಸಿ ನ್ಯೂಸ್ ತೆಲುಗು ಕೂಡ ಖಾನ್‌ರವರನ್ನು ಸಂದರ್ಶನ ಮಾಡಿದೆ.

ಆದ್ದರಿಂದ ಈ ವೈರಲ್ ವಿಡಿಯೋ ಸೌದಿ ಅರೇಬಿಯಾದ್ದು ಎಂದು ಖಚಿತವಾಗಿದೆ. ಈ ವೈರಲ್ ವಿಡಿಯೋಗೂ ಮತ್ತು ತೆಲಂಗಾಣದಲ್ಲಾದ ಬುಲ್ಡೋಜರ್‌ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *