Fact Check : ರತನ್‌ ಟಾಟಾ ಭಾರತೀಯ ಸೇನೆಗೆ 2500 ಗುಂಡು ನಿರೋಧಕ ವಾಹನಗಳ ಖರೀದಿಗೆ ದೇಣಿಗೆ ನೀಡಿದ್ದಾರೆಂಬುದು ಸುಳ್ಳು

ರತನ್‌ ಟಾಟಾ

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಗುಂಡು ನಿರೋಧಕ ವಾಹನಗಳನ್ನು ಖರೀದಿಸಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌:

ವೈರಲ್‌ ಆದ ಪೋಸ್ಟ್‌ರ್‌ಗೆ ಸಂಬಂಧಿಸಿದ ಕೀವರ್ಡ್‌ನ್ನು ಹಾಕಿ ಹುಡುಕಿದಾಗ, ಈ ಪೋಸ್ಟ್‌ರ್‌ ಕುರಿತು ಯಾವುದೇ  ವಿಶ್ವಾಸಾರ್ಹ ವರದಿಗಳು ಪ್ರಕಟವಾಗಿಲ್ಲ. ಇದರ ಹೊರತಾಗಿಯೂ ರತನ್ ಟಾಟಾ ಅಥವಾ ಟಾಟಾ ಗ್ರೂಪ್‌ನವರು ದೇಣಿಗೆಯನ್ನು ನೀಡಿದ್ದರೆ, ಅದು ಖಂಡಿತವಾಗಿಯೂ ಗಮನಾರ್ಹವಾದ ವಿಷಯವಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತು. ಹೆಚ್ಚುವರಿಯಾಗಿ,  ರತನ್ ಟಾಟಾ ಮತ್ತು ಟಾಟಾ ಗ್ರೂಪ್‌ನ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಪೋಸ್ಟ್‌ರ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು ಹುಡುಕುತ್ತಿರುವ ಸಮಯದಲ್ಲಿ ವೈರಲ್‌ ಪೋಸ್ಟ್‌ರ್‌ನಲ್ಲಿರುವ ಚಿತ್ರಗಳು 2016ರಲ್ಲಿ ಸುಳ್ಳು ಮಾಹಿತಿಯೊಂದಿಗೆ ಪ್ರಸಾರವಾಗುತ್ತಿರುವುದನ್ನು ಗಮನಿಸಿದೆವು.

ವೈರಲ್ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಡಿದಾಗ 2012ರ ಏಪ್ರಿಲ್ 01 ರಂದು ‘ಇಂಡಿಯನ್ ಆಟೋಸ್ ಬ್ಲಾಗ್’ ಹೆಸರಿನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನ ನಮಗೆ ಸಿಕ್ಕಿದೆ. ಈ ಲೇಖನವು ವೈರಲ್ ಪೋಸ್ಟ್‌ನ ಒಂದೆರಡು ಚಿತ್ರಗಳನ್ನು ಒಳಗೊಂಡಿದೆ. ಈ ಲೇಖನದ ಪ್ರಕಾರ, ವೈರಲ್ ಚಿತ್ರಗಳು 2012 ರಲ್ಲಿ DEFEXPO ನಲ್ಲಿ ಪ್ರದರ್ಶಿಸಲಾದ ಲೆವೆಲ್-3 ರಕ್ಷಣೆಯನ್ನು ನೀಡುವ ಸ್ಕಾರ್ಪಿಯೋ ಮಹೀಂದ್ರ ರಕ್ಷಕ್ ಪ್ಲಸ್ ಅನ್ನು ತೋರಿಸುತ್ತವೆ.

2019 ರಲ್ಲಿ ಪ್ರಕಟವಾದ ‘ಅಮರ್ ಉಜಾಲಾ’ ಸುದ್ದಿ ವರದಿಯ ಪ್ರಕಾರ , ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳಿಗೆ ಬುಲೆಟ್ ಪ್ರೂಫ್ ಸ್ಕಾರ್ಪಿಯೋ (ಮಹೀಂದ್ರ ರಕ್ಷಕ್ ಪ್ಲಸ್) ವಾಹನಗಳನ್ನು ಒದಗಿಸಲಾಗಿದೆ. ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಮಹೀಂದ್ರ ರಕ್ಷಕ್ ಪ್ಲಸ್ ವಾಹನಗಳ ಬಳಕೆಯ ಚಿತ್ರಗಳನ್ನು ಹಂಚಿಕೊಂಡಿದೆ. 2023ರ ಜನವರಿ 12 ರಂದು ಪ್ರಕಟವಾದ ‘ದಿ ಎಕನಾಮಿಕ್ ಟೈಮ್ಸ್’ ವರದಿಯು “ಭಾರತೀಯ ಸೇನೆಯು ಸುಮಾರು 1500 ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ SUV ಗಳನ್ನು ಖರೀದಿಸಿದೆ”. ಎಂದು ವರದಿಯನ್ನು ತಯಾರಿಸಿದೆ. ಮಹೀಂದ್ರಾ ಆಟೋಮೋಟಿವ್‌ನ ಟ್ವೀಟ್ ನಿಖರವಾದ ಮಾಹಿತಿಯನ್ನು ನೀಡಿದೆ.

ಮಹೀಂದ್ರಾ ಆಟೋಮೋಟಿವ್‌ನ ಅಧಿಕೃತ ಟ್ವಿಟರ್‌ನ್ನು ಪರಿಶೀಲಿಸಿದಾಗ ಭಾರತೀಯ ಸೇನೆಯು ಇತ್ತೀಚೆಗೆ 2,500 ಬುಲೆಟ್‌ಪ್ರೂಫ್ ಸ್ಕಾರ್ಪಿಯೋಗಳನ್ನು ಖರೀದಿಸಿದೆ ಎಂಬ ನಿಖರವಾದ ಪೋಸ್ಟ್‌ರ್‌ಗಳು ಕಂಡುಬಂದಿಲ್ಲ. ಭಾರತೀಯ ಸೇನೆಯು ನಿಜವಾಗಿಯೂ ಅಂತಹ ಆದೇಶವನ್ನು ಹೊರಡಿಸಿದ್ದರೆ ಅದು ಖಂಡಿತವಾಗಿಯೂ ಮಾಧ್ಯಮಗಳಲ್ಲಿ ಗಮನವನ್ನು ಸೆಳೆಯುತ್ತಿತ್ತು. ಆದ್ದರಿಂದ ಭಾರತೀಯ ಸೇನೆಯು ಇತ್ತೀಚೆಗೆ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋಗಳನ್ನು ಖರೀದಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ರತನ್ ಟಾಟಾ ಖರೀದಿಗೆ ಹಣವನ್ನು ನೀಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾ ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋ ವಾಹನಗಳನ್ನು ಖರೀದಿಸಿದೆ ಎಂಬ ವೈರಲ್ ಪೋಸ್ಟ್‌ರ್‌ನ ಮಾಹಿತಿ ಸುಳ್ಳು.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *