Fact Check | ಕುಮಾರಿ ಸೆಲ್ಜಾ ಅವರು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬುದು ನಿಜವಲ್ಲ

“ಇದು ಸೆಲ್ಜಾ ಅವರ ಹೇಳಿಕೆ ಹಿಂದೂ ದೇವರಾದ ರಾಮನ ಮೇಲೆ ಕಾಂಗ್ರೇಸ್‌ನವರ ದ್ವೇಷ ಎಂತಹದ್ದು ಎಂಬುದು ಸಾಬೀತಾಗಿದೆ. ಕಾಂಗ್ರೆಸ್‌ನವರು ಯಾವಾಗಲೂ ಭಗವಾನ್ ಶ್ರೀ ರಾಮನನ್ನು ಅವಮಾನಿಸುತ್ತಾರೆ. ರಾಮನ ಬಗ್ಗೆ ಇಂತಹ ಹೇಳಿಕೆಗಳನ್ನು, ಇಂತಹ ಭಾಷೆಯನ್ನು ಬಳಸಿರುವುದು ಹಿಂದುಗಳ ನಂಬಿಕೆಗೆ ಅಪಮಾನ ಮಾತ್ರವಲ್ಲ, ಎಲ್ಲಾ ಶ್ರೀರಾಮನ ಭಕ್ತರಿಗೂ ಮಾಡಿದ ಅವಮಾನವಾಗಿದೆ.” ಎಂದು ಸೆಲ್ಜಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಹರಿಯಾಣ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶವನ್ನು ಹೊರಹಾಕಿದೆ.

ಇನ್ನು ಬಿಜೆಪಿಯ ವಕ್ತಾರೆಯಾದ ಅನುಜ ಕಪೂರ್ ಅವರು ಕೂಡ “ರಾಮ್‌ ತಪಕ್ತಾ ರಹತ?” ಎಂಬ ಪ್ರಶ್ನಾರ್ಥಕವಾದ ಬರಹವನ್ನು ಹಿಂದಿಯಲ್ಲಿ ಹಾಕಿದ್ದು, “ಕಾಂಗ್ರೆಸ್‌ ಮತ್ತೊಮ್ಮೆ ಭಗವಾನ್ ಶ್ರೀ ರಾಮನಿಗೆ ಅವಮಾನವನ್ನು ಮಾಡಿದ್ದಾರೆ, ಇದು ಯಾವ ರೀತಿಯಾದ ಭಾಷೆ ಇವರದ್ದು?” ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಎರಡು ಪೋಸ್ಟ್‌ಗಳನ್ನು ಗಮನಿಸಿದ ಬಿಜೆಪಿಯ ಹಲವಾರು ಬೆಂಬಲಿಗರು, ವೈರಲ್ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು, ಕಾಂಗ್ರೆಸ್‌ನ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಗೊಂದಲವನ್ನು ಉಂಟುಮಾಡಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಕುಮಾರಿ ಸೆಲ್ಜಾ ಅವರ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 29 ಆಗಸ್ಟ್ 2024ರಂದು ಅಜಿತ್ ಅಂಜುಂ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಕುಮಾರಿ ಸೆಲ್ಜಾ ಅವರು ಮಾತನಾಡಿರುವ ವಿಡಿಯೋ ಪತ್ತೆಯಾಗಿದೆ.

ಇದರಲ್ಲಿ ಅಜಿತ್ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕುಮಾರಿ ಸೆಲ್ಜಾ ಅವರು ಬಿಜೆಪಿಯ ಕಾರ್ಯ ವೈಖರಿಯ ಕುರಿತು ಸ್ಥಳೀಯ ಭಾಷೆಯಲ್ಲಿ ಟೀಕೆಯನ್ನು ಮಾಡಿದ್ದಾರೆ. ಬಿಜೆಪಿ ಅವಧಿಯ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಮಳೆ ಬಂದಾಗ ಅವುಗಳು ಸೋರುತ್ತಿವೆ. ಇದರಿಂದ ರಾಮಮಂದಿರ ಕೂಡ ಹೊರತಾಗಿಲ್ಲ. ಬಿಜೆಪಿಯವರು ರಾಮ ಮಂದಿರವನ್ನು ಸಹ ಬಿಡುವುದಿಲ್ಲ. ಮಳೆಗಾಲದಲ್ಲಿ ರಾಮ ಮಂದಿರ ಸೋರುತ್ತಿದೆ. ಅದರಿಂದ ರಾಮ (ಮಳೆ) ತೊಟ್ಟಿಕುವ ಪರಿಸ್ಥಿತಿ ಬಂದಿದೆ.(ಇಲ್ಲಿ ಹರಿಯಣದ ಸ್ಥಳೀಯ ಭಾಷೆಯಲ್ಲಿ ರಾಮ ಎಂದು ಮಳೆಗೆ ಉಲ್ಲೇಖಿಸಲಾಗುತ್ತದೆ) ಎಂದು ಮಾತನಾಡಿದ್ದಾರೆ.  ಅವರ ಈ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಹಲವು ನಾಯಕರು ಈಗ ಟೀಕೆಯನ್ನು ಮಾಡುತ್ತಿದ್ದಾರೆ.

ಇಲ್ಲಿ ಪ್ರಮುಖವಾಗಿ ಹರಿಯಾಣದ ಆಡು ಮಾತಿನಲ್ಲಿ ರಾಮ ತಪಕ್ನ ಎಂದರೆ ಮಳೆಯ ಹನಿಗಳನ್ನು ಸೂಚಿಸುತ್ತದೆ. ಈ ಕುರಿತು ಇನ್ನಷ್ಟು ಹುಡುಕಿದಾಗ 15 ಜನವರಿ 2024 ರಂದು ANI ಪ್ರಕಟಿಸಿದ ವರದಿ ಒಂದು ಕಂಡು ಬಂದಿದೆ. ಇದರಲ್ಲಿ ಮಕರ ಸಂಕ್ರಾಂತಿಗಾಗಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ಹರಿಯಾಣದ ಕಾಂಗ್ರೆಸ್ ಸಂಸದ ದೀಪೇಂದರ್‌ ಸಿಂಗ್‌ ಹೂಡ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅದರಲ್ಲಿ “ಇಲ್ಲಿ ನಾನು ಬಂದ ಪ್ರದೇಶದ ಜನರು ರಾಮ್ ರಾಮ್ ಎಂದು ಹೇಳುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಆ ಪ್ರದೇಶದಲ್ಲಿ ಮಳೆ ಬಂದಾಗ ‌“ರಾಮ್ ಬರಸ್ ಗಯಾ” ಎನ್ನುತ್ತಾರೆ. ಈ ಹೇಳಿಕೆಯು ರಾಮ ಬರಸ್ನಾ ಎಂದರೆ ಮಳೆ ಎಂಬುದನ್ನ ಸ್ಪಷ್ಟಪಡಿಸುತ್ತದೆ. ಹಾಗಾಗಿ ಇದು ಆಕ್ಷೇಪರ್ಹ ಅಥವಾ ಅಸಭ್ಯ ಭಾಷೆಯಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಬಗೆಗಿನ ಹೆಚ್ಚಿನ ಸ್ಪಷ್ಟನೆಗಾಗಿ ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ 2023ರ ಫೇಸ್‌ಬುಕ್‌ ಪೋಸ್ಟ್‌ ಒಂದು ಕಂಡು ಬಂದಿದೆ. ಇದು ಹರಿಯಾಣದಲ್ಲಿ ರಾಮ್ ಪದವನ್ನು ಮಳೆಯನ್ನು ಉಲ್ಲೇಖಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ ಎಂದು ಆ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಹರಿಯಾಣದಲ್ಲಿ ಮಳೆ ಬಂದಾಗ ಜನರು “ರಾಮ್ ಆಯಾ ಹೈ” ಅಥವಾ “ಬಹುತ್ ರಾಮ್ ಬರ್ಸಾ ಭಾಯ್” ಎಂದು ಹೇಳುತ್ತಾರೆ ಎಂಬ ಅಂಶವನ್ನು ಈ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಕುಮಾರಿ ಸೆಲ್ಜಾ ಅವರು ಹುಟ್ಟಿ ಬೆಳೆದದ್ದು ಹರಿಯಾಣದಲ್ಲಿ ಮತ್ತು ಅವರು ಹರಿಯಾಣಿ ಭಾಷೆಯಲ್ಲಿ ರಾಮ ತೊಟ್ಟಿಕ್ಕುತ್ತಿದ್ದಾನೆ ಎಂದರೆ ಮಳೆ ಹನಿ ತೊಟ್ಟಿಕುತಿದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಸಾಬೀತಾಗಿದೆ. ಆದರೆ ಸಂಪೂರ್ಣ ವಿಡಿಯೋದಲ್ಲಿ ಕೇವಲ ಇದೊಂದು ಭಾಗವನ್ನು ಆಯ್ದುಕೊಂಡು ಸುಳ್ಳು ಸುದ್ದಿಯನ್ನು ಹರಡಲಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಿರಲಿ.


ಇದನ್ನೂ ಓದಿ : Fact Check | ಗಾಂಧಿಜೀ ಅವರು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪಾದಗಳನ್ನು ಸ್ಪರ್ಶಿಸಿದ್ದಾರೆ ಎಂಬ ಫೋಟೋ ಎಡಿಟೆಡ್‌ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *