Fact Check | ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ನಿಷೇಧಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿಲ್ಲ

“ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಲೈಂಗಿಕ ನಿಂದನೆ ಕಾರಣಗಳಿಂದ ಪ್ಯಾರಿಸ್‌ನಲ್ಲಿ ಬಂಧಿಸಲಾಯಿತು. ಹೀಗಾಗಿ ಈಗ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಷನ್ ಭಾರತದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ  ಆಪಾದಿತ ಪಾತ್ರದ ಕಾರಣದಿಂದ ತೀವ್ರ ಪರಿಶೀಲನೆಗೆ ಒಳಪಟ್ಟಿದೆ. ಈ ಸಂದರ್ಭದಲ್ಲಿ ಟೆಲಿಗ್ರಾಮ್‌ ಭಾರತದಲ್ಲಿ ಬ್ಯಾನ್‌ ಆಗುವ ಸಾಧ್ಯತೆ ಇದೆ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ, ಆದರೆ ಇದು ನಿಜವಲ್ಲ. ಭಾರತದಲ್ಲಿ ಟೆಲಿಗ್ರಾಮ್ ನಿಷೇಧದ ಸುದ್ದಿಯನ್ನು ಖಂಡಿಸಿ ಮತ್ತು ಟೆಲಿಗ್ರಾಮ್ ಅನ್ನು ನಿಷೇಧಿಸುವುದಿಲ್ಲ ಎಂದು‌ ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ” ಎಂಬ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇನ್ನೂ ಕೆಲವರು ಪ್ರಧಾನಿ ಮೋದಿ ಅವರೇ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಹೇಳಿದ್ದಾರೆ ಎಂದು  26 ಆಗಸ್ಟ್ 2024 ರಲ್ಲಿ ಪ್ರಧಾನಿ ಮೋದಿ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ ಎಂಬ ವೈರಲ್‌ ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸ್ಕ್ರೀನ್‌ಶಾಟ್ ನೋಡಿದ ಹಲವು ಮಂದಿ ಪ್ರಧಾನಿ ಮೋದಿ ಅವರು ಟೆಲಿಗ್ರಾಮ್‌ ನಿಷೇಧದ ವಿರುದ್ಧ ಇದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿರುವ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಈ ಕುರಿತು ಯಾವುದಾದರೂ ಮಾಧ್ಯಮಗಳು ವರದಿ ಮಾಡಿವೆಯೇ ಎಂಬುದನ್ನು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯಾದ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್‌ ಪೋಸ್ಟ್‌ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ ಎನ್ನಲಾದ ಎಕ್ಸ್‌ ಪೋಸ್ಟ್‌ ಅನ್ನು ಪರಿಶೀಲನೆ ನಡೆಸಲು ಮುಂದಾದೆವು. 26 ಆಗಸ್ಟ್ 2024 ರಂದು ಪಿಎಂ ಮೋದಿ ಅವರು ಮಾಡಿದ ಟ್ವೀಟ್‌ನ ವೈರಲ್ ಸ್ಕ್ರೀನ್‌ಶಾಟ್ ಮತ್ತು X (ಹಿಂದೆ ಟ್ವಿಟರ್) ನಲ್ಲಿನ ವಿಶಿಷ್ಟ ಪೋಸ್ಟ್‌ಗಳ ನಡುವಿನ ವ್ಯತ್ಯಾಸಗಳನ್ನು ನಾವು ಗಮನಿಸಬಹುದು. ವೈರಲ್ ಟ್ವೀಟ್‌ನಲ್ಲಿರುವ ಸಮಯವು AM ಅಥವಾ PM ಅನ್ನು ಒಳಗೊಂಡಿಲ್ಲ, ಇದು ಟ್ವೀಟ್ ಅನ್ನು ಡಿಜಿಟಲ್ ಎಡಿಟ್ ಮಾಡಲಾಗಿದೆ ಎಂಬುದು ನಮಗೆ ಖಚಿತವಾಗಿತ್ತು.

ಇದಲ್ಲದೆ, ಸೋಶಿಯಲ್ ಬ್ಲೇಡ್‌ನಂತಹ ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಸಾಧನಗಳು 26 ಮತ್ತು 27 ಆಗಸ್ಟ್ 2024 ರಂದು ಪಿಎಂ ಮೋದಿ ಕೇವಲ ಆರು ಟ್ವೀಟ್‌ಗಳನ್ನು ಮಾಡಿದ್ದಾರೆ ಎಂದು ಸೂಚಿಸುತ್ತದೆ. ಎಲ್ಲಾ ಆರು ಟ್ವೀಟ್‌ಗಳು ಪ್ರಸ್ತುತ ಪಿಎಂ ಮೋದಿ ಖಾತೆಯಲ್ಲಿ ಗೋಚರಿಸುತ್ತವೆ. ಆದರೆ ವೈರಲ್‌ ಆಗಿರುವ ಪೋಸ್ಟ್‌ ಪ್ರಧಾನಿ ಮೋದಿ ಎಕ್ಸ್‌ ಖಾತೆಯಲ್ಲಿ ಕಂಡು ಬಂದಿಲ್ಲ. ಒಂದು ವೇಳೆ ಪ್ರಧಾನಿ ಮೋದಿ ಪೋಸ್ಟ್‌ ಮಾಡಿ ಡಿಲೀಟ್‌ ಮಾಡಿದ್ದರೂ ಕೂಡ ಆ ಕುರಿತು ಇಲ್ಲಿ ಮಾಹಿತಿ ಲಭ್ಯವಾಗಬೇಕಿತ್ತು. ಆದರೆ ಆ ಕುರಿತು ಕೂಡ ಇಲ್ಲಿ ಯಾವುದೇ ಮಾಹಿತಿ ಇಲ್ಲ.

ಇನ್ನು ಒಂದು ವೇಳೆ ಪ್ರಧಾನಿ ಮೋದಿ ಅವರು ಟೆಲಿಗ್ರಾಮ್‌ ಅನ್ನು ಭಾರತಲ್ಲಿ ನಿಷೇಧಿಸುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದು ನಿಜವೇ ಆಗಿದ್ದಲ್ಲಿ ಆ ಕುರಿತು ಬಹುಮುಖ್ಯವಾಗಿ ಪ್ರೆಸ್‌ ಇನ್‌ಫರ್‌ಮೇಷನ್‌ ಆಫ್‌ ಬ್ಯೂರೋ ವರದಿಯನ್ನು ಮಾಡಬೇಕಿತ್ತು, ಅಥವಾ ಈ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಬೇಕಿತ್ತು. ಆದರೆ ಅಂತಹ ಯಾವುದೇ ಪ್ರಕಟಣೆಗಳು PIB ಯ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿಲ್ಲ. ಹಾಗಾಗಿ ವೈರಲ್‌ ಪೋಸ್ಟ್‌ ನಂಬಲು ಅರ್ಹವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟ್‌ ಸಂಪೂರ್ಣವಾಗಿ ಎಡಿಟೆಡ್‌ ಆಗಿದೆ. ಇಂತಹ ಪೋಸ್ಟ್‌ಗಳು ನಿಮಗೆ ಕಂಡು ಬಂದರೆ ಅವುಗಳನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | ಪ್ಯಾಲೆಸ್ತೀನ್ ಅನ್ನು ಬ್ರಿಕ್ಸ್‌ಗೆ ಸೇರಿಸಲು ಭಾರತ ವಿರೋಧಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *