Fact Check| ಬೈಕ್ ಗ್ಯಾಂಗ್‌ನಿಂದ ಕಿರುಕುಳ ಪ್ರಕರಣಕ್ಕೆ ತಿರುವು: ಮೂವರು ಯುವಕರು ತನಗೆ ಸಹಾಯ ಮಾಡುತ್ತಿದ್ದರು ಎಂದ ಯುವತಿ

ಉತ್ತರಪ್ರದೇಶದ ಆಗ್ರಾದಲ್ಲಿ ರಾತ್ರಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಗೆ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಸ್ಟ್ 19ರಂದು ವೈರಲ್ ಆಗಿತ್ತು.

ಯುವತಿಯ ಸ್ಕೂಟರ‌ನ್ನು ಎಡಭಾಗದಲ್ಲಿದ್ದ ಸ್ಕೂಟರ್ ಸವಾರರು ಆಗಾಗ ಹಿಂಬದಿಯಿಂದ ಒದೆಯುತ್ತಿದ್ದರೆ, ಬಲ ಬದಿಯಲ್ಲಿದ್ದ ಬೈಕ್‌ ಸವಾರರು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ, ಹಲವು ಕಿ.ಮೀ‌ ವರೆಗೆ ಹಿಂಬಾಲಿಸಿದ್ದು, ವಿಡಿಯೋದಲ್ಲಿ ದಾಖಲಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಾಧ್ಯಮಗಳು ಆಗ್ರಾದಲ್ಲಿ ಬೈಕ್ ಗ್ಯಾಂಗ್‌ನಿಂದ ಯುವತಿಗೆ ಕಿರುಕುಳ ಎಂದು ವರದಿ ಮಾಡಿದ್ದವು. ವಾಸ್ತವದಲ್ಲಿ ಈ ಘಟನೆ ಸತ್ಯಕ್ಕೆ ದೂರವಾಗಿದೆ.

ಫ್ಯಾಕ್ಟ್‌ಚೆಕ್:

ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಿದ ಛಟ್ಟಾ ಪೊಲೀಸ್ ಠಾಣೆಯ ಆ್ಯಂಟಿ ರೋಮಿಯೋ ತಂಡವು ತಕ್ಷಣ ರಾತ್ರಿಯೇ ಪ್ರಕರಣ ದಾಖಲಿಸಿಕೊಂಡಿತ್ತು. ಮತ್ತು ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ರಾತ್ರಿಯೇ ಬಂಧಿಸಿದ್ದು, ಇವರಿಂದ ಮೋಟಾರ್ ಸೈಕಲ್ ವಶಪಡಿಸಿಕೊಂಡಿತ್ತು. ಈ ಘಟನೆಯ ಬಗ್ಗೆ ಬ್ರುಟ್ ವಿಡಿಯೋ ವರದಿಯನ್ನು ಪ್ರಕಟಿಸಿದೆ.

“ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೋಗುತ್ತಿದ್ದಾಗ ಯುವತಿಯ ಸ್ಕೂಟರ್‌ನಲ್ಲಿ ಪೆಟ್ರೋಲ್ ಖಾಲಿಯಾಗಿದ್ದು ಗಮನಕ್ಕೆ ಬಂದಿದ್ದು ಆಕೆಯ ಪರಿಚಿತ ಸ್ನೇಹಿತರು ಆಕೆಗೆ ಸಹಾಯ ಮಾಡಲು ಮುಂದಾಗಿದ್ದರು. ವಿಡಿಯೋದಲ್ಲಿ ಕಾಣುವ ಎಡಭಾಗದ ಬೈಕ್‌ನಲ್ಲಿದ್ದವರು ತನಗೆ ಪರಿಚಿತರಾಗಿದ್ದು, ಸ್ಕೂಟರ್‌‌ನ್ನು ತಳ್ಳುವ ಮೂಲಕ ಸಹಾಯ ಮಾಡುತ್ತಿದ್ದರು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ, ಬಲಭಾಗದಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ತನಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಇದರಿಂದ ಬೇಸತ್ತು ಟ್ರಾಫಿಕ್ ಪೊಲೀಸರಿಂದ ಯುವತಿ ಸಹಾಯ ಯಾಚಿಸಿದ್ದಳು. ಛಟ್ಟಾ ಪೋಲೀಸ್ ಠಾಣೆಯ ಆ್ಯಂಟಿ ರೋಮಿಯೋ ತಂಡವು ತ್ವರಿತ ಕ್ರಮ ಕೈಗೊಂಡು, ಅಂದು ರಾತ್ರಿಯೇ ಇಬ್ಬರು ಬೈಕ್ ಸವಾರರನ್ನು ಬಂಧಿಸಿದೆ. ಮತ್ತು ಪ್ರಕರಣ ದಾಖಲಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತಿದೆ” ಎಂದು ಆಗ್ರಾ ಪೊಲೀಸ್ ಕಮೀಷನರೇಟ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿವರವನ್ನು ಹಂಚಿಕೊಂಡಿದೆ.

ಮೇಲ್ನೋಟಕ್ಕೆ ವಿಡಿಯೋ ನೋಡುವಾಗ ಬೈಕ್ ಗ್ಯಾಂಗ್‌ವೊಂದು ಯುವತಿಗೆ ಕಿರುಕುಳ ನೀಡಿದಂತೆ ಕಾಣುತ್ತದೆಯಾದರೂ, ಮೂವರು ಯುವಕರು ಯುವತಿಗೆ ಸಹಾಯ ಮಾಡುತ್ತಿದ್ದರು ಎಂಬುದು ಆಕೆಯ ಹೇಳಿಕೆಯಿಂದಲೇ ಸಾಬೀತಾಗಿದೆ. ಹಾಗಾಗಿ, ಯುವತಿಗೆ ಕಿರುಕುಳ ನೀಡಿದ ಬೈಕ್ ಗ್ಯಾಂಗ್ ಎಂಬ ವರದಿ ಸತ್ಯಕ್ಕೆ ದೂರವಾಗಿದ್ದು ಪೊಲೀಸರ ಅಧಿಕೃತ ಪ್ರಕಟನೆಯಿಂದ ನೈಜ ಘಟನೆ ಬೆಳಕಿಗೆ ಬಂದಿದೆ‌.


ಇದನ್ನು ಓದಿದ್ದೀರಾ? Fact Check| ಗುಮಾಸ್ತ-ಟೈಪಿಸ್ಟ್ ನಡುವಿನ ಜಗಳಕ್ಕೆ ನ್ಯಾಯಾಧೀಶರ ಮೇಲೆ ಹಲ್ಲೆ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *