Fact Check | ಮುಸ್ಲಿಂ ವ್ಯಾಪಾರಿ ಚರಂಡಿ ನೀರಿನಲ್ಲಿ ತರಕಾರಿ ತೊಳೆದಿದ್ದಾನೆ ಎಂಬುದು ಸುಳ್ಳು

ಹಿಂದೂಗಳೇ ಎಚ್ಚರ..! ತರಕಾರಿ ವ್ಯಾಪಾರಿಯೊಬ್ಬರು ತಾವು ಮಾರಾಟ ಮಾಡಲು ಇಟ್ಟುಕೊಂಡಿದ್ದ ತರಕಾರಿಯನ್ನು ಚರಂಡಿ ನೀರಿನಲ್ಲಿ ತೊಳೆಯುತ್ತಿದ್ದಾರೆ. ಮುಸ್ಲಿಂ ವ್ಯಾಪಾರಿಗಳ ಈ ನಡೆಗೆ ಆಹಾರ ಜಿಹಾದ್‌ ಎನ್ನದೆ ಮತ್ತಿನ್ನೇನು ಹೇಳಬೇಕು. ಈಗಲಾದರೂ ಎಚ್ಚೆತ್ತುಕೊಳ್ಳಿ, ಮುಸ್ಲಿಂ ವ್ಯಾಪರಸ್ಥರ ಬಳಿ ವ್ಯಾಪಾರ ಮಾಡುವುದನ್ನು ಈಗಲಾದರೂ ನಿಲ್ಲಿಸಿ. ಹಿಂದೂಗಳ ಅಂಗಡಿಯಲ್ಲಿ ಮಾತ್ರ ನಿಮ್ಮ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ಮುಸ್ಲಿಂ ವ್ಯಾಪಾರಿಯ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು, ವೈರಲ್‌ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಮುಸ್ಲಿಂ ಸಮುದಾಯದ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದೆ. ಇನ್ನು ಈ ವಿಡಿಯೋ ನೋಡಿದ ಹಲವರು ಇದು ಸುಳ್ಳು ಅಪಾದನೆಯೊಂದಿಗೆ ಕೂಡಿದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ವೈರಲ್‌ ಆಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ . 07 ಮಾರ್ಚ್ 2020 ರಲ್ಲಿ ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾದ ವೀಡಿಯೊ ವರದಿ ಲಭ್ಯವಾಗಿದೆ. ಇದರಲ್ಲಿ ಇದೇ ರೀತಿಯ ತುಣುಕನ್ನು ಕಾಣಬಹುದು. ವೀಡಿಯೊದ ಶೀರ್ಷಿಕೆಯು, “ತರಕಾರಿ ವ್ಯಾಪಾರಿಯೂ ಚರಂಡಿ ನೀರಿನಲ್ಲಿ ತರಕಾರಿಗಳನ್ನು ತೊಳೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ” ಎಂದು ಹೇಳುತ್ತದೆ. ವಿಸ್ತೃತ ವೀಡಿಯೊದಲ್ಲಿ ಚರಂಡಿಯಿಂದ ತರಕಾರಿಗಳನ್ನು ಎತ್ತುತ್ತಿರುವುದನ್ನು ನೋಡಿದ ಕೆಲವರು ಪ್ರಶ್ನಿಸುತ್ತಾರೆ, ಅಲ್ಲಿದ್ದ ಜನರಿಗೆ ತಾನು ಎತ್ತಿಕೊಂಡ ತರಕಾರಿಯನ್ನು ಗಟಾರದಲ್ಲಿ ಬಿದ್ದಿದ್ದವು ಎಂದು ಹೇಳುತ್ತಾನೆ. ಇದಾದ ನಂತರ ಅಲ್ಲಿದ್ದ ಕೆಲವರು ಅವರ ಕೈಗಾಡಿಯಲ್ಲಿ ಇಟ್ಟಿದ್ದ ತರಕಾರಿಗಳನ್ನು ಎಸೆಯಲು ಯತ್ನಿಸುತ್ತಾರೆ ಎಂದಿದೆ.

ಹೀಗಾಗಿ ಇತರೆ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದಾಗ ಘಟನೆಯು 28 ಫೆಬ್ರವರಿ 2020 ರ ನ್ಯೂಸ್ 18 ಲೋಕಮಾತ್ ವರದಿಯಲ್ಲಿ ವೀಡಿಯೊದ ಸ್ಟಿಲ್ ಕಂಡುಬಂದಿದೆ. ವರದಿಯ ಪ್ರಕಾರ, ವೈರಲ್ ಘಟನೆಯು ಮಹಾರಾಷ್ಟ್ರದ ಭಿವಂಡಿಯ ಗಾಯತ್ರಿ ನಗರ ಪ್ರದೇಶದಲ್ಲಿ ಸಂಭವಿಸಿದೆ, ತರಕಾರಿ ವ್ಯಾಪಾರಿಯು ತನ್ನ ಕೈಗಾಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದ ವೇಳೆ ಚರಂಡಿಯ ಮುಚ್ಚಳ ತೆರೆವಾಗಿರುವುದನ್ನು ಗಮನಿಸದೆ ತಳ್ಳುವಾಗ ಕೈಗಾಡಿಯು ಏಕಾಏಕಿ ರಸ್ತೆ ಮಧ್ಯದ ಗಟಾರದಲ್ಲಿ ಪಲ್ಟಿಯಾಗಿದೆ, ಗಾಡಿಯಲ್ಲಿದ್ದ ತರಕಾರಿಗಳು ನೇರವಾಗಿ ಚರಂಡಿಗೆ ಬಿದ್ದಿವೆ. ನಂತರ, ಗಟಾರದಲ್ಲಿ ಬಿದ್ದ ತರಕಾರಿಗಳನ್ನು ಎತ್ತಿಕೊಂಡು ಮತ್ತೆ ಗಾಡಿಯಲ್ಲಿ ಹಾಕಿಕೊಳ್ಳುತ್ತಾನೆ. ಆ ವೇಳೆ ದಾರಿಹೋಕರು ಈ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ. ವರದಿಯ ಪ್ರಕಾರ, ತರಕಾರಿ ವ್ಯಪಾರಿಯು ಗಾಡಿಯಿಂದ ಬಿದ್ದ ತನ್ನ ತರಕಾರಿಗಳನ್ನ ತೆಗೆದುಕೊಳ್ಳುತ್ತಾನೆಯೇ ಹೊರತು ಆ ತರಕಾರಿಗಳನ್ನು ಗಟಾರ ನೀರಿನಿಂದ ತೊಳೆಯುವ ಉದ್ದೇಶ ಇರಲಿಲ್ಲ ಎಂದು ತಿಳಿದು ಬಂದಿದೆ.

ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, ಪೊಲೀಸರು ಆತನ ವಿರುದ್ಧ ಐಪಿಸಿಯ ಸೆಕ್ಷನ್ 273 (ಹಾನಿಕಾರಕ ಆಹಾರ ಅಥವಾ ಪಾನೀಯ ಮಾರಾಟ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇನ್ನು ವೈರಲ್‌ ಪೋಸ್ಟ್‌ ವೀಡಿಯೊ ಇತ್ತೀಚಿನದಲ್ಲ , ಗೂಗಲ್‌ನಲ್ಲಿ ಶೋಧಿಸಿದಾಗ 2020 ರಲ್ಲಿ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ ಎಂದು  ತಿಳಿದು ಬಂದಿದೆ. ಆದರೆ ಈ ವರದಿಯಲ್ಲೆ ಎಲ್ಲಿಯೂ ಕೂಡ ಆತ ಡ್ರೈನೇಜ್‌ನಲ್ಲಿ ಬಿದ್ದ ತರಕಾರಿಯನ್ನು ಮಾರಾಟ ಮಾಡಿರುವ ಕುರಿತು ಉಲ್ಲೇಖವಾಗಿಲ್ಲ. ಹಾಗಾಗಿ ವೈರಲ್‌ ವಿಡಿಯೋ ಸುಳ್ಳಿನಿಂದ ಕೂಡಿದೆ.

ಒಟ್ಟಾರೆಯಾಗಿ ಹೇಳುವುದಾರೆ ವ್ಯಾಪಾರಿಯ ವೀಡಿಯೊವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವ್ಯಾಪಾರಿಗೆ  ತರಕಾರಿಗಳನ್ನು ಚರಂಡಿ ನೀರಿನಲ್ಲಿ ತೊಳೆಯುವ ಯಾವ ಉದ್ದೇಶವು ಇರಲಿಲ್ಲ ಎಂದು ವರದಿಗಳು  ಇರಲಿಲ್ಲ ಎಂಬುದು ತಿಳಿದು ಬಂದಿದೆ. ಸ್ಲಿಂ ದ್ವೇಷ ಹರಡುವ ಉದ್ದೇಶದಿಂದ ಹೀಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುವ ಮುನ್ನ ಪರಿಶೀಲಿಸಿಕೊಳ್ಳಿ. ಸುಳ್ಳು ಮಾಹಿತಿಯ ವಿಡಿಯೋಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check| ಗುಮಾಸ್ತ-ಟೈಪಿಸ್ಟ್ ನಡುವಿನ ಜಗಳಕ್ಕೆ ನ್ಯಾಯಾಧೀಶರ ಮೇಲೆ ಹಲ್ಲೆ ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *