Fact Check | ಚೆನ್ನೈನಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಅತ್ಯಾಚಾರಿಯ ಶಿರಚ್ಛೇದ ಮಾಡಿದ್ದಾನೆ ಎಂಬುದು ಸುಳ್ಳು

” ತಮಿಳುನಾಡಿನಲ್ಲಿ ತನ್ನ ಸಹೋದರಿಯನ್ನು ಅತ್ಯಾಚಾರ ಮಾಡಿದ ವ್ಯಕ್ತಿಯ ತಲೆ ಕಡಿದ ಅಣ್ಣ, ಆ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಕಾನೂನು ಶಿಕ್ಷೆ ಕೊಡಲು ತಡ ಮಾಡಿದಾಗ ಅತ್ಯಾಚಾರಿಗಳನ್ನು ಹೀಗೆಯೇ ಶಿಕ್ಷಿಸಬೇಕಿದೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ರುಂಡವನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಹೀಗೆ ಈ ವಿಡಿಯೋ ವೈರಲ್‌ ಆಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ಇದು ನಜವಾಗಿಯೂ ನಡೆದ ಘಟನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೊಲ್ಕತ್ತಾ ಅತ್ಯಾಚಾರದ ಪ್ರಕರಣ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿರುವ ಈ ಸಂದರ್ಭದಲ್ಲೇ ವೈರಲ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ವಿಡಿಯೋ ನೋಡಿದ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದ್ದೇವೆ. ಈ ವೇಳೆ ನಮಗೆ 29 ಸೆಪ್ಟೆಂಬರ್‌ 2018ರ ನ್ಯೂಸ್‌ 18 ಕನ್ನಡದ  ವರದಿಯೊಂದು ಕಂಡು ಬಂದಿದ್ದು, ಈ ಘಟನೆ ಕರ್ನಾಟಕದಲ್ಲಿ ನಡೆದಿದೆ ಎಂಬುದು ತಿಳಿದು ಬಂದಿದೆ.

ಈ ವರದಿಯ ಪ್ರಕಾರ  ಈ ಘಟನೆ ಕರ್ನಾಟಕದ ಮಂಡ್ಯದ ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪಶುಪತಿ ಎಂಬ ವ್ಯಕ್ತಿ ಅವನ ಗೆಳೆಯ ಗಿರೀಶ್ ಎಂಬ ವ್ಯಕ್ತಿಯ ತಲೆ ಕಡಿದು ಜೈಲು ಪಾಲಾಗಿದ್ದಾನೆ ಎಂಬ ವಿಚಾರ ಬೇಳಕಿಗೆ ಬಂದಿದೆ. ಈ ಘಟನೆಯ ಸಂಬಂಧ ಇನ್ನಷ್ಟು ಹುಡುಕಾಡಿದಾಗ ಗಿರೀಶ್ ತನ್ನ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಪಶುಪತಿ ಹಾಗೂ ಗಿರೀಶ್‌ ನಡುವೆ ವಾಕ್ಸಮರ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡಿದ್ದು, ಬಳಿಕ ಪಶುಪತಿ ಗಿರೀಶ್‌ ತಲೆ ಕಡಿದು, ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು NDTV ಸೇರಿದಂತೆ ವಿವಿಧ ಮಾಧ್ಯಗಳು ಕೂಡ ಇದೇ ರೀತಿಯಾದ ವರದಿಯನ್ನು ಮಾಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ನೋಡುವುದಾದರೆ ಚೆನ್ನೈನಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಅತ್ಯಾಚಾರಿಯ ಶಿರಚ್ಛೇದ ಮಾಡಿದ ವೈರಲ್ ಪೋಸ್ಟ್ ಸುಳ್ಳಾಗಿದೆ. ಈ ಘಟನೆ ಕರ್ನಾಟಕದಲ್ಲಿ ನಡೆದಿದ್ದು, ಸ್ನೇಹೀತನೊಬ್ಬ ತನ್ನ ತಾಯಿಯನ್ನು ನಿಂದಿಸಿದ ಕಾರಣ ಆತನ ತಲೆ ಕಡಿದಿರುವುದಾಗಿ ಈ ವರದಿಯಲ್ಲಿ ಕಂಡು ಬಂದಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *