Fact Check | ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ಹತ್ಯೆಯನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ಎಂದು ಹಂಚಿಕೆ

“ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯುನಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿ ಹಿಂದುಗಳ ಮೇಲಿನ ದಾಳಿ ಕಡಿಮೆಯಾಗಿಲ್ಲ. ಅಮಾಯಕ ಹಿಂದೂಗಳ ಮನೆಗಳ ಒಳಗೆ ನುಗ್ಗಿ ಉದ್ರಿಕ್ತ ಮುಸಲ್ಮಾನರ ಗುಂಪು ಹಿಂದೂಗಳ ನರಮೇಧವನ್ನು ಮಾಡುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಮಕ್ಕಳ ಸಾವಿನ ಚಿತ್ರಣವಿದ್ದು ಇದೇ ಕಾರಣದಿಂದ ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಕೂಡ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ಬಾಂಗ್ಲಾದೇಶದಲ್ಲಿ ಇನ್ನೂ ಕೂಡ ಹಿಂದುಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸುವುದರ ಜೊತೆಗೆ, ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನೂ ಹಲವರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ತಪ್ಪು ಮಾಹಿತಿಗಳನ್ನು ಶೇರ್ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್ ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಚಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 2024ರ ಜೂನ್‌ನಲ್ಲಿ ರೋಹಿಂಗ್ಯ ಮಾನವ ಹಕ್ಕುಗಳ ಕಾರ್ಯಕರ್ತ ಮುವಾಂಗ್ ಹ್ಲಾ ಮೈನ್ಟ್ ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಕಂಡು ಬಂದಿದೆ. ಈ ಘಟನೆಯು ದೊಡ್ಡ ಪ್ರಮಾಣದ ಸ್ಪೋಟದ ನಂತರ ಸಂಭವಿಸಿದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಘಟನೆ ಮ್ಯಾನ್ಮಾರ್‌ನ ಹಬ್ಬಿ ವೆಸ್ಟ್ ರೋಹಿಂಗ್ಯ ಗ್ರಾಮ ರಕೈನ್ ರಾಜ್ಯ ದ ಮೌಂಗ್‌ಡಾ ಟೌನ್‌ಶಿಪ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಇನ್ನಷ್ಟು ಹುಡುಕಿದಾಗ ಜೂನ್ 9 ರಂದು ರೋಹಿಂಗ್ಯ ಕಾರ್ಯಕರ್ತ ಮತ್ತು ಪತ್ರಕರ್ತ ನೇಯ್ ಸ್ಯಾನ್ ಲ್ವಿನ್ ಮಾಡಿದ್ದ ಪೋಸ್ಟ್ ಕಂಡುಬಂದಿದ್ದು, ಇದರಲ್ಲಿನ ವಿಡಿಯೋ ವೈರಲ್ ವಿಡಿಯೋಗೆ ಹೋಲಿಕೆ ಆಗಿರುವುದು‌ ಕಂಡು ಬಂದಿದೆ. ಈ ಕುರಿತು ಪೋಸ್ಟ್‌ನಲ್ಲಿ ರಾಖೈನ್ ರಾಜ್ಯದ ಮೌಂಗ್ಡಾವ್ ಟೌನ್‌ಶಿಪ್‌ನಲ್ಲಿ ಮ್ಯಾನ್ಮಾರ್ ಮಿಲಿಟರಿ ಮತ್ತು ಅರಾಕನ್ ಆರ್ಮಿ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಫಿರಂಗಿ ಶೆಲ್‌ಗಳು ಥಿ ಹೊ ಕ್ಯುನ್ ಹಳ್ಳಿಯ, ಹಬಿ ವೆಸ್ಟ್ ರೋಹಿಂಗ್ಯಾ ಕುಗ್ರಾಮಕ್ಕೆ ಬಡಿದು ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು ಮತ್ತು ಏಳು ಮಂದಿ ಗಾಯಗೊಂಡರು ಅವರಲ್ಲಿ ನಾಲ್ವರು ಮಕ್ಕಳಿದ್ದರೂ ಎಂದು ಉಲ್ಲೇಖಿಸಲಾಗಿದೆ. ಹೀಗೆ ಹಲವು ಪ್ರಮುಖ ಮಾಹಿತಿಗಳಿಂದ ವೈರಲ್ ವಿಡಿಯೋ ಬಾಂಗ್ಲಾದೇಶದ ಹಿಂದೂಗಳಿಗೆ ಸಂಬಂಧಿಸಿದಲ್ಲ ಮ್ಯಾನ್ಮಾರ್‌ನ ರೋಹಿಂಗ್ಯಾಗಳಿಗೆ ಸಂಬಂಧಿಸಿದ ಎಂದು ತಿಳಿದುಬಂದಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದಲ್ಲಿನ ಉಲ್ಲೇಖದಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ಎಂಬುದು ಸುಳ್ಳು, ವೈರಲ್‌ ಆಗಿರುವ ವಿಡಿಯೋ ಮ್ಯಾನ್ಮಾರ್‌ನ ರೋಹಿಂಗ್ಯಾಗಳಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ


ಇದನ್ನೂ ಓದಿ : Fact Check: ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಪೆಲ್ವಿಕ್ ಸುತ್ತಳತೆ, ಕಾಲರ್ಬೋನ್ ಮೂಳೆಗಳು ಮುರಿದಿರುವುದನ್ನು ಮರಣೋತ್ತರ ಪರೀಕ್ಷಾ ವರದಿ ಬೆಂಬಲಿಸುವುದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *