Fact Check | ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕೇಜ್ರಿವಾಲ್ ನಿಂದಿಸಿಲ್ಲ. ಅದು ಎಡಿಟೆಡ್‌ ವಿಡಿಯೋ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂದರ್ಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, “ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ನಕಲಿ ಉತ್ತರಾಧಿಕಾರಿ (ನಕ್ಲಿ ಸಂತನ್) ಎಂದು ಹೇಳಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಹಿಂದಿಯಲ್ಲಿ ಕೇಜ್ರಿವಾಲ್‌ ಅವರು  “ಉದ್ಧವ್ ಠಾಕ್ರೆ ಜೋ ಹೈ, ವೋ ಅಪ್ನೆ ಬಾಪ್ ಕಿ ‘ನಕ್ಲಿ ಸಂತಾನ್’ ಹೈ” ಎಂದು ಹೇಳುವುದನ್ನು ಕೇಳಬಹುದು.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ನೋಡಿದ ಹಲವು ಮಂದಿ “ಕೇಜ್ರಿವಾಲ್‌ ಒಬ್ಬ ಅಪ್ರಬುದ್ಧ ರಾಜಕಾರಣಿ, ಯಾರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಅವರಿಗೆ ಇನ್ನೂ ತಿಳಿದಿಲ್ಲ. ಇಂಡಿಯಾ ಮೈತ್ರಿಕೂಟ ಇದನ್ನು ಈಗ ಹೇಗೆ ಸಮರ್ಥಿಸಿಕೊಳ್ಳಲಿದೆ ಎಂದು ನೋಡಬೇಕು. ಇಂತವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ.” ಎಂದು ಬರೆದುಕೊಂಡು ವೈರಲ್‌ ವಿಡಿಯೋವನ್ನು ನಾನಾ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ರೀತಿಯ ವಿವಿಧ ಬರಹಗಳಿಂದ ಶೇರ್‌ ಮಾಡಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್‌ ವಿಡಿಯೋವಿನ ಪೂರ್ಣ ಆವೃತ್ತಿ ಪತ್ತೆಯಾಗಿದ್ದು, ಇದನ್ನು 24 ಮೇ 2024 ರಂದು ಇಂಡಿಯಾ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ, ಇದಕ್ಕೆ Arvind Kejriwal Exclusive Interview: शराब घोटाले से लेकर मालीवाल केस तक…केजरीवाल से सबसे तीखे सवाल (‘ಅರವಿಂದ್ ಕೇಜ್ರಿವಾಲ್ ವಿಶೇಷ ಸಂದರ್ಶನ: ಮದ್ಯದ ಹಗರಣದಿಂದ ಮಲಿವಾಲ್ ಪ್ರಕರಣದವರೆಗೆ…) ಎಂಬ ಶೀರ್ಷಿಕೆಯನ್ನು ನೀಡಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ನಾವು ಸಂಪೂರ್ಣವಾಗಿ ವಿಡಿಯೋವನ್ನು ಪರಿಶೀಲನೆ ನಡೆಸಿದಾಗ ಈ ಸಂದರ್ಶನದಲ್ಲಿ, 16:40 ಟೈಮ್‌ಸ್ಟ್ಯಾಂಪ್‌ನಲ್ಲಿ, 10 ವರ್ಷಗಳ ಅಧಿಕಾರದ ನಂತರ ಪ್ರಧಾನಿ ಮೋದಿ ಯಾವ ಆಧಾರದ ಮೇಲೆ ತಮ್ಮನ್ನು ಮತ್ತು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮತದಾರರನ್ನು ಕೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.ಮುಂಬೈನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿಯವರು ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಇಬ್ಬರನ್ನು ಕೀಳಾಗಿ ನಿಂದಿಸಿದ್ದಾರೆ. “ಉದ್ಧವ್ ಠಾಕ್ರೆ ಬಾಳಾ ಸಾಹೇಬ್ ಠಾಕ್ರೆಯವರ ನಿಜವಾದ ಮಗನಲ್ಲ” ಎಂದು ಮೋದಿ ಹೇಳಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಅಂದರೆ ಕೇಜ್ರಿವಾಲ್ ಮೋದಿಯವರ ಮಾತುಗಳನ್ನು ಉಲ್ಲೇಖಿಸಿದ್ದಾರೆ ಅಷ್ಟೇ

ಮುಂದಿವರೆದು.. ವೈರಲ್ ವೀಡಿಯೊ ಕ್ಲಿಪ್ 16:51 ಟೈಮ್‌ಸ್ಟ್ಯಾಂಪ್‌ನಿಂದ ಪ್ರಾರಂಭವಾಗುತ್ತದೆ. ಇದು 16:57 ಕ್ಕೆ ಕೊನೆಗೊಳ್ಳುತ್ತದೆ, ಅಲ್ಲಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. 2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಮೇ 2024 ರಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಪ್ರಧಾನಿ ಮೋದಿ ಅವರು ಉದ್ಧವ್ ಠಾಕ್ರೆ ಅವರ ಬಗ್ಗೆ ಕಾಮೆಂಟ್ಗಳನ್ನು ಮಾಡಿದರು, ಅವರನ್ನು ಶಿವಸೇನೆಯ ‘ನಕ್ಲಿ ಸಂತನ್’  ಎಂದು ಕರೆದರು ಎಂದು ಉಲ್ಲೇಕಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವಂತೆ ಅರವಿಂದ್‌ ಕೇಜ್ರಿವಾಲ್‌ ಅವರು ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕರೆದಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ವೈರಲ್‌ ಆಗುತ್ತಿರುವ ವಿಡಿಯೋ ಎಡಿಟೆಡ್‌ ಆಗಿದ್ದು, ಇದರ ಪೂರ್ಣ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕರೆದಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ ವೈರಲ್‌ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : Fact Check: ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಪೆಲ್ವಿಕ್ ಸುತ್ತಳತೆ, ಕಾಲರ್ಬೋನ್ ಮೂಳೆಗಳು ಮುರಿದಿರುವುದನ್ನು ಮರಣೋತ್ತರ ಪರೀಕ್ಷಾ ವರದಿ ಬೆಂಬಲಿಸುವುದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *