Fact Check | ಈಜಿಪ್ಟ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ “ಗುಜರಾತ್‌ನ ವಲ್ಸಾದ್‌ನಲ್ಲಿರುವ ಡಿಪಿಎಸ್ ಶಾಲೆಯಲ್ಲಿ  ಶಕೀಲ್ ಅಹ್ಮದ್ ಅನ್ಸಾರಿ ಎಂಬ ಮುಸ್ಲಿಂ ಶಿಕ್ಷಕ ಮಕ್ಕಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಇವನ ಈ ದಾಳಿಗೆ ಮಕ್ಕಳು ನಲುಗಿದ್ದಾರೆ. ಹಿಂದುಗಳೇ ಈ ಬಗ್ಗೆ ಎಚ್ಚರದಿಂದಿರಿ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಾಕಷ್ಟು ಮಂದಿ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ವಿಡಿಯೋ ಕೂಡ ವೈರಲ್‌ ಆಗುತ್ತಿದ್ದು, ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೇ ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಕೋಮು ನಿರೂಪಣೆಯೊಂದಿಗೆ ವಿಡಿಯೋ ಹಂಚಿಕೆಯಾಗಿರುವುದರಿಂದ ಅನ್ಯ ಕೋಮಿನ ಬಗ್ಗೆ ಹಲವರಲ್ಲಿ ತಪ್ಪು ಅಭಿಪ್ರಾಯವನ್ನು ಕೂಡ ವಿಡಿಯೋ ಮೂಡಿಸುತ್ತಿದೆ. ಹಲವು ಇದು ನಿಜವಾಗಿಯೂ ಗುಜರಾತ್‌ನಲ್ಲಿಯೇ ನಡೆದಿದೆ ಎಂದು ಭಾವಿಸಿ ಅಲ್ಲಿನ ಹಾಲಿ ಸರ್ಕಾರದ ವಿರುದ್ಧ ಕೂಡ ಕಿಡಿ ಕಾರಿದ್ದಾರೆ. ಹೀಗೆ ಹಲವು ಕೋನಗಳಿಂದ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 10 ಸೆಪ್ಟೆಂಬರ್‌ 2014ರಂದು ಬಿಬಿಸಿ “Egypt orphanage video: Manager jailed for beating children” ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ.

ಈ ವರದಿಯಲ್ಲಿ “ಇದು ಈಜಿಪ್ಟ್‌ನ ಕೈರೋದಲ್ಲಿ ನಡೆದ ಘಟನೆಯಾಗಿದೆ.. ವೀಡಿಯೊದಲ್ಲಿರುವ ವ್ಯಕ್ತಿಯನ್ನು ಒಸಾಮಾ ಮೊಹಮ್ಮದ್ ಒತ್ಮಾನ್ ಎಂದು ಗುರುತಿಸಲಾಗಿದೆ, ಡಾರ್ ಮೆಕ್ಕಾ ಅಲ್-ಮೊಕರಾಮ ಎಂಬ ಅನಾಥಾಶ್ರಮದ ಮುಖ್ಯಸ್ಥ. ಗಿಜಾದಲ್ಲಿನ ಮೆಕ್ಕಾ ಅನಾಥಾಶ್ರಮದಲ್ಲಿ ನಡೆದ ದೌರ್ಜನ್ಯದ ತುಣುಕನ್ನು ಓಥ್ಮನ್ ಅವರ ವಿಚ್ಛೇದಿತ ಪತ್ನಿ ರೆಕಾರ್ಡ್ ಮಾಡಿ ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.” ಎಂದು ಉಲ್ಲೇಖಿಸಲಾಗಿದೆ. ಹಲವು ವರದಿಗಳಲ್ಲೂ ಕೂಡ ಇದನ್ನೇ ಹೇಳಲಾಗಿದೆ.

ವೀಡಿಯೊ ವೈರಲ್ ಆದ ನಂತರ, ಈಜಿಪ್ಟ್‌ನ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಮಧ್ಯಪ್ರವೇಶಿಸಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಪರಿಣಾಮವಾಗಿ, ಓಥ್ಮನ್ ಅವರನ್ನು ಬಂಧಿಸಲಾಯಿತು ಮತ್ತು ಹಲ್ಲೆ, ಬಲವಂತದ ಬಾಲಕಾರ್ಮಿಕ ಮತ್ತು ಮಕ್ಕಳ ರಕ್ಷಣೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಯಿತು ಇದರ ಪರಿಣಾಮವಾಗಿ, ಈಜಿಪ್ಟ್‌ನ ನ್ಯಾಯಾಲಯವು ಒಥ್ಮನ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ಕುರಿತು ಹಲವು ವರದಿಗಳು ಕೂಡ ಪ್ರಕಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈಜಿಪ್ಟ್‌ನ ಅನಾಥಾಶ್ರಮದಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವೀಡಿಯೊವನ್ನು ತಪ್ಪುದಾರಿಗೆಳೆಯುವ ಕೋಮುವಾದಿ ಹಕ್ಕುಗಳೊಂದಿಗೆ ಪ್ರಸಾರ ಮಾಡಲಾಗುತ್ತಿದೆ. ಈ ವೈರಲ್‌ ವಿಡಿಯೋವಿಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಅಂತರಾಷ್ಟ್ರೀಯ ಮಾದ್ಯಮಗಳಲ್ಲಿ ಪ್ರಕಟವಾದ ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಇಂತಹ ಸುದ್ದಿಗಳು ನಿಮಗೆ ಕಂಡು ಬಂದರೆ ಒಮ್ಮೆ ಪರಿಶೀಲಿಸಿಕೊಳ್ಳಿ


ಇದನ್ನೂ ಓದಿ : Fact Check: ಕೋಲ್ಕತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ರಾಜ್‌ದೀಪ್‌ ಸರ್ದೇಸಾಯಿ ಹಳೆಯ ವಿಡಿಯೋ ತಪ್ಪು ಮಾಹಿತಿಯೊಂದಿಗೆ ವೈರಲ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *