Fact Check | ಕಾಣೆಯಾದ ಮಗನಿಗಾಗಿ ಪ್ರತಿಭಟಿಸಿದ ಬಾಂಗ್ಲಾದ ಮುಸ್ಲಿಂ ವ್ಯಕ್ತಿಯನ್ನು ಹಿಂದೂ ಎಂದು ಸುಳ್ಳು ಹರಡಿದ ANI

“ಬಾಂಗ್ಲಾದೇಶ: ತನ್ನ ಕಾಣೆಯಾದ ಮಗನ ಪೋಸ್ಟರ್‌ನೊಂದಿಗೆ ಪ್ರತಿಭಟಿಸುವ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸದಸ್ಯರೊಬ್ಬರು “ನಾನು ನನ್ನ ಜೀವವನ್ನು ನೀಡುತ್ತೇನೆ, ಆದರೆ ನನ್ನ ಮಗುವಿಗೆ ನ್ಯಾಯ ಸಿಗಬೇಕು. ನನ್ನ ಮಗು ಎಲ್ಲಿದೆ? ನನ್ನ ಮಗುವಿನ ಬಗ್ಗೆ ವಿಚಾರಿಸಲು ನಾನು ಮನೆಯಿಂದ ಮನೆಗೆ ಹೋಗುತ್ತಿದ್ದೇನೆ, ಆದರೆ ಯಾರೂ ನನ್ನ ಮಾತುಗಳನ್ನು ಕೇಳಲು ತಯಾರಿಲ್ಲ.” ಎಂದು ANI ಕಿರು ವರದಿಯನ್ನು ಎಕ್ಸ್‌ನಲ್ಲಿ  ಪೋಸ್ಟ್‌ ಮಾಡಿ ಅಳಿಸಿ ಹಾಕಿದೆ. ಇದನ್ನ ನೋಡಿದ ಹಲವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಹೀಗಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. 

ANI ಎಕ್ಸ್‌ ಪೋಸ್ಟ್‌ ಗಮನಿಸಿದ ಹಲವು ಮಂದಿ ಪ್ರತಿಭಟಿಸಿದ ವ್ಯಕ್ತಿ ಹಿಂದೂ ಎಂದು ಭಾವಿಸಿ ವ್ಯಾಪಕವಾಗಿ ಆಕ್ರೋಶವನ್ನು ಹೊರ ಹಾಕುತ್ತಿದ್ದು, ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. ಇದು ಕೋಮು ಆಯಾಮವನ್ನು ಕೂಡ ಪಡೆದುಕೊಂಡಿದ್ದು, ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರಲು ಆರಂಭಿಸಿದ್ದಾರೆ. ಹೀಗೆ ಹಂಚಿಕೊಳ್ಳಲಾದ ಪೋಸ್ಟ್‌ನ ಹಿಂದಿನ ಸತ್ಯ ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ANI ಪೋಸ್ಟ್‌ ಆಧಾರಿತ ಸುದ್ದಿಯ ಸತ್ಯಾಸತ್ಯತೆ ಏನು ಎಂಬುದನ್ನು ಪರಿಶೀಲಿಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲು ಮುಂದಾದೆವು. ಈ ವೇಳೆ ನಮಗೆ 13 ಆಗಸ್ಟ್‌ 2024 ರಂದು ಬಾಂಗ್ಲಾದೇಶದ ಸುದ್ದಿ ಪೋರ್ಟಲ್ Barta24 ನ ಅಧಿಕೃತ YouTube ಚಾನಲ್‌ನಿಂದ ಲೈವ್ ಸ್ಟ್ರೀಮ್ ಮಾಡಿರುವ ವಿಡಿಯೋವೊಂದು ಕಂಡು ಬಂದಿದೆ.

ಈ ವಿಡಿಯೋದಲ್ಲಿ ಎಎನ್‌ಐ ಸುದ್ದಿ ವರದಿಯಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ತನ್ನನ್ನು ಬಾಬುಲ್ ಹೌಲದಾರ್ ಎಂದು ಗುರುತಿಸಿಕೊಂಡಿದ್ದಾನೆ ಮತ್ತು ಬಾಂಗ್ಲಾದೇಶದ ಹಸೀನಾ ಆಳ್ವಿಕೆಯಲ್ಲಿ ತನ್ನ ಹಿರಿಯ ಮಗ ಮೊಹಮ್ಮದ್ ಸನ್ನಿ ಹಾಲದಾರ್ ನಾಪತ್ತೆಯಾದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಹೇಳಿರುವುದು ಕಂಡು ಬಂದಿದೆ. ಹೀಗೆ ಹಲವು ಸುದ್ದಿ ಸಂಸ್ಥೆಗಳಿಗೂ ಇದೇ ಮಾಹಿತಿಯನ್ನು ನೀಡಿದ್ದಾರೆ.

ಮತ್ತೊಂದು ಸುದ್ದಿ ಮಾಧ್ಯಮದೊಂದಿಗೆ ಕೂಡ ಇವರು ಮಾತನಾಡಿದ್ದು, ಹಸಿನಾ ಆಡಳಿತದಿಂದ ತನಗೆ ಬೆದರಿಕೆಗಳು ಬಂದಿವೆ ಮತ್ತು ಸ್ಪಷ್ಟ ವಿವರಣೆಯನ್ನು ನೀಡದೆ ವಿವಿಧ ದಾಖಲೆಗಳಿಗೆ ಸಹಿ ಹಾಕಲಾಗಿದೆ ಎಂದು ಹೌಲದಾರ್ ಉಲ್ಲೇಖಿಸಿದ್ದಾರೆ. ಅವರ ಮಗನ ರಾಜಕೀಯ ಸಂಬಂಧಗಳ ಬಗ್ಗೆ ಕೇಳಿದಾಗ, ಹೌಲದಾರ್ ಅವರು ತಮ್ಮ ಮಗ ಕೇವಲ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಬೆಂಬಲಿಗ ಎಂದು ಹೇಳಿದರು. ಇನ್ನು ಬಾಂಗ್ಲಾದೇಶದಾದ್ಯಂತ ಹಲವು ಜನರು ಢಾಕಾದ ಜಮುನಾ ಸ್ಟೇಟ್ ಅತಿಥಿ ಗೃಹದ ಮುಂದೆ ಜಮಾಯಿಸಿ ತಮ್ಮ ಕಾಣೆಯಾದ ಕುಟುಂಬ ಸದಸ್ಯರಿಗೆ ನ್ಯಾಯ ಒದಗಿಸಿ ಎಂದು ಕೇಳಿಕೊಳ್ಳುತ್ತಿರುವ ವರದಿಗಳು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡುವಂತೆ ಪ್ರತಿಭಟಿಸಿದ್ದ ವ್ಯಕ್ತಿ ಹಿಂದೂ ಎಂಬ ANI ಪೋಸ್ಟ್‌ ಸುಳ್ಳಾಗಿದೆ. ತನ್ನ  ತಪ್ಪಿನ ಅರಿವಾದ ನಂತರ ಸ್ವತಃ ANI ಸುದ್ದಿ ಸಂಸ್ಥೆ ಪ್ರತಿಭಟಿಸಿದ ವ್ಯಕ್ತಿ ಮುಸಲ್ಮಾನನಲ್ಲ, ಆತ ಹಿಂದೂ ಎಂದು ಸ್ಪಷ್ಟನೆ ನೀಡಿ ಹಳೆಯ  ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದೆ. ಹಾಗಾಗಿ ವೈರಲ್‌ ಪೋಸ್ಟ್‌ ಸುಳ್ಳಿನಿಂದ ಕೂಡಿದ್ದು, ಯಾವುದೇ ಸುದ್ದಿಗಳು ಕಂಡು ಬಂದರೆ, ಅವುಗಳ ಬಗ್ಗೆ ನಿಮಗೆ ಅನುಮಾನ ಮೂಡಿದರೆ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನೂ ಓದಿ : Fact Check: ಯುಕೆಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *