Fact Check| ಸೌದಿ ಏರ್‌ಲೈನ್ಸ್‌ನಲ್ಲಿ ನಮಾಝ್ ಮಾಡಿದ್ದಕ್ಕೆ ಇಸ್ಲಾಮೋಫೋಬಿಕ್ ತಿರುವು ನೀಡಿ ವಿಡಿಯೋ ಹಂಚಿಕೆ

ಮುಸ್ಲಿಮರ ಧಾರ್ಮಿಕ ಆಚರಣೆಯ ವಿಷಯಗಳಲ್ಲಿ ಹಿಜಾಬ್‌ನ ಬಳಿಕ ಅತಿ ಹೆಚ್ಚು ಇಸ್ಲಾಮೋಫೋಬಿಕ್ ವರದಿಗಳು ಪ್ರಕಟವಾಗಿರುವುದು ನಮಾಝ್ ಕುರಿತಾಗಿದೆ. ನಮಾಝ್‌ಗೆ ಸಂಬಂಧಿಸಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದ್ದು, ಪ್ರಯಾಣಿಕನೋರ್ವ ವಿಮಾನದಲ್ಲಿ ನಮಾಝ್ ಮಾಡುವ ಮೂಲಕ ಇತರೆ ಪ್ರಯಾಣಿಕರಿಗೆ ಅಡಚಣೆಯುಂಟು ಮಾಡುತ್ತಿದ್ದಾನೆ ಎಂದು ವಿಡಿಯೋವೊಂದನ್ನು ಹರಿಬಿಡಲಾಗಿದೆ.

ವಿಡಿಯೋದಲ್ಲೇನಿದೆ?

ವ್ಯಕ್ತಿಯೊಬ್ಬ ವಿಮಾನದಲ್ಲಿ ನಮಾಝ್ ಮಾಡುತ್ತಿರುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಲಾಗಿದ್ದು ” ಇಲ್ಲಿಂದ ದಾಟಬೇಡಿ; ನಾನು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಿದೆ” ಎಂದು ವ್ಯಂಗ್ಯಾತ್ಮಕ ಶೀರ್ಷಿಕೆ ನೀಡಲಾಗಿದೆ.

ಸತ್ಯಾಂಶ ಏನು?

ವಿಮಾನದಲ್ಲಿ ನಮಾಝ್ ಮಾಡಿರುವ ದೃಶ್ಯವು ಅಸಲಿಯಾಗಿದ್ದು, ಆದರೆ, ಇದು ಸೌದಿ ಏರ್‌ಲೈನ್ಸ್‌ನಲ್ಲಿ ಚಿತ್ರಿಸಲಾದ ವಿಡಿಯೋ ಎಂಬ ಬಗ್ಗೆ ದಿ ಇಂಟೆಂಟ್ ಡಾಟಾ ಎಂಬ ಸತ್ಯ ಶೋಧಕ ಸಂಸ್ಥೆಯು ಎಕ್ಸ್‌ ಖಾತೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಸತ್ಯಾಂಶವನ್ನು ಬಹಿರಂಗ ಪಡಿಸಿದೆ‌.

ದಿ ಇಂಟೆಂಟ್ ಡಾಟಾ ಹೇಳುವುದೇನು?

ವಿಮಾನದೊಳಗೆ ಧಾರ್ಮಿಕ ಪ್ರಾರ್ಥನೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಚಿತ್ರಿಸುವ ವೀಡಿಯೋವನ್ನು ಸೌದಿಯಾ ಏರ್‌ಲೈನ್ಸ್‌ನಲ್ಲಿ ಸೆರಹಿಡಿಯಲಾಗಿದ್ದು, ಸೌದಿ ಏರ್‌ಲೈನ್ಸ್‌ನ ಕೆಲವು ವಿಮಾನಗಳಲ್ಲಿ ನಮಾಝ್ ಮಾಡಲಿಕ್ಕಾಗಿಯೇ ಸ್ಥಳವನ್ನು ವಿನ್ಯಾಸಗೊಳಿಸಲಾಗಿದೆ.

ಇಸ್ಲಾಮೀ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಹೊಂದಿರುವ ಸೌದಿಯಾ ಏರ್‌ಲೈನ್ಸ್ ಹಾಗೂ ಇತಿಹಾದ್ ಏರ್‌ಲೈನ್ಸ್‌ನ ಕೆಲವು ಬೃಹತ್ ವಿಮಾನಗಳಲ್ಲಿ ನಮಾಝ್ ಮಾಡಲು ಸ್ಥಳವನ್ನು ಮೀಸಲಿಡಲಾಗಿದೆ ಎಂಬುದನ್ನು ದಿ ಇಂಟೆಂಟ್ ಡಾಟಾ ಬಹಿರಂಗ ಪಡಿಸಿದೆ‌.

 

ಏರ್‌ಬಸ್ A330s, ಬೋಯಿಂಗ್ 777s, ಬೋಯಿಂಗ್ 787ಡ್ರೀಮ್‌ಲೈನರ್ ಏರ್‌ಕ್ರಾಫ್ಟ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ವಿಮಾನಯಾನ ಸಂಸ್ಥೆಗಳು ನಮಾಝ್‌ಗೆ ಸ್ಥಳಾವಕಾಶವನ್ನು ಮೀಸಲಿರಿಸಿವೆ. ಕೆಲವು ವಿಮಾನಗಳಲ್ಲಿ ಇಕಾನಮಿ ಕ್ಲಾಸ್ ಸೀಟುಗಳನ್ನು ತೆರವುಗೊಳಿಸಿ ನಮಾಝ್‌ ಮಾಡಲು ಸ್ಥಳ ವಿನ್ಯಾಸಗೊಳಿಸಲಾಗಿದ್ದು, ಇನ್ನೂ ಕೆಲವು ವಿಮಾನಗಳಲ್ಲಿ ನಮಾಝ್ ಮಾಡಲು ಪ್ರತ್ಯೇಕ ಕೋಣೆಯನ್ನು ವಿನ್ಯಾಸಗೊಳಿಸಲಾಗಿದೆ.

ಯೂಟ್ಯೂಬರ್ ಅಬ್ದುಲ್ ಮಲಿಕ್ ಫರೀದ್ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ನಮಾಝ್‌ಗೆ ಮೀಸಲಾಗಿರುವ ಒಂದು ಕೋಣೆಯ ವಿನ್ಯಾಸದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನಮಾಝ್ ಸ್ಥಳಾವಕಾಶ, ದಿಕ್ಸೂಚಿ, ಹಾಸು ಸೇರಿದಂತೆ ಇತರೆ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ದಿ ಇಂಟೆಂಟ್ ಡಾಟಾ ಸರಣಿ ಟ್ವೀಟ್‌ನಲ್ಲಿ ಹಂಚಿಕೊಂಡಿದೆ.

ಇದಲ್ಲದೇ, ಸಿಂಪಲ್ ಫ್ಲೈಯಿಂಗ್, ಬುಸಿನೆಸ್ ಇನ್‌ಸೈಡರ್,ಒನ್ ಮೈಲ್ ಎಟ್ ಏ ಟೈಮ್, ಬಾಂಗ್ಲಾದೇಶ್ ಮಾನಿಟರ್ ನ್ಯೂಸ್ ವೆಬ್‌ಸೈಟ್‌ಗಳಲ್ಲಿಯೂ ಕೂಡ ನಮಾಝ್ ಮಾಡಲು ವಿಮಾನಗಳಲ್ಲಿ ವಿಶೇಷ ವಿನ್ಯಾಸಗಳಿರುವ ಬಗ್ಗೆ ವರದಿ ಮಾಡಿವೆ.

ಒಟ್ಟಾರೆಯಾಗಿ ವಿಮಾನದಲ್ಲಿ ನಮಾಝ್ ಮಾಡಿದ ದೃಶ್ಯಗಳನ್ನು ಹಂಚಿಕೊಂಡು ಮುಸ್ಲಿಮರ ಧಾರ್ಮಿಕ ಆಚರಣೆಗಳ ಬಗ್ಗೆ ತಪ್ಪಾದ ಸಂದೇಶ ಹರಡಲಾಗುತ್ತಿದೆ.


ಇದನ್ನು ಓದಿ: Fact Check: ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಕ್ಷಣದ ವೀಡಿಯೋ ಎಂದು ಹಳೆಯ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *