Fact Check | ಹಿಂದೂ ಮಹಿಳೆಗೆ ಅವಮಾನ ಎಂದು ಮುಸ್ಲಿಂ ಮಹಿಳೆಯ ವಿಡಿಯೋ ಹಂಚಿಕೊಂಡ ಆರ್‌ಎಸ್‌ಎಸ್, ಬಿಜೆಪಿ ಬೆಂಬಲಿಗರು

ಸಾಮಾಜಿಕ ಜಾಲತಾಣದಲ್ಲಿ “ಇವರು ಬಾಂಗ್ಲಾದೇಶದ ಜ್ಯೋತಿಕಾ ಬಸು-ಚಟರ್ಜಿ. ಮಾನವೀಯ ಸಂಘಟನೆಯನ್ನು ನಡೆಸುತ್ತಿದ್ದ ಮಹಿಳೆ. ಅವರು ಹಿಂದೂ ನಿಧಿಯಿಂದ ಮುಸ್ಲಿಮರಿಗೆ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಅವಿರತವಾಗಿ ಶ್ರಮಿಸಿದರು. ಚಿಕ್ಕವರಿರಲಿ ದೊಡ್ಡವರಿರಲಿ ಹತ್ತಿರದ ಎಲ್ಲಾ ಹೆಂಗಸರಿಗೂ ಸಹಾಯ ಮಾಡಿದಳು; ಯಾರಿಗಾದರೂ ಸಹಾಯ ಬೇಕಾದಾಗ ತಕ್ಷಣವೇ ಅವರ ನೆರವಿಗೆ ಧಾವಿಸುತ್ತಿದ್ದರು, ಆದರೆ ಈಗ ನೋಡಿ ಅಲ್ಲಿನ ಇಸ್ಲಾಂ ಜನ ಈಕೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ” ಎಂದು ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋವನ್ನು ನೋಡಿದ ಹಲವರು ಇದು ನಿಜವಾದ ಘಟನೆ ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಲವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ವ್ಯಾಪಕವಾಗಿ ಟೀಕೆಯನ್ನು ಮಾಡುತ್ತಿದ್ದಾರೆ. ಹೀಗೆ ಹೆಚ್ಚು ವೈರಲ್ ಆಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಅಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಮೊದಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಆದರೆ ಘಟನೆಗೆ ಸಂಬಂಧ ಪಟ್ಟಂತೆ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಈ ಘಟನೆ ನಿಜವೇ ಆಗಿದ್ದರೆ ಈ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳಿಂದ ಸ್ಥಳೀಯ ಮಾಧ್ಯಮಗಳವರೆಗೆ ವರದಿ ಕಂಡು ಬರಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ. ಹಾಗಾಗಿ ವೈರಲ್ ವಿಡಿಯೋ ಹಲವು ಅನುಮಾನಗಳನ್ನು ಮೂಡಿಸಿತ್ತು.

ಹೀಗಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಅಲ್ಟ್‌ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜ಼ುಬೈರ್ ಅವರ ಎಕ್ಸ್ ಪೋಸ್ಟ್( ಹಿಂದಿನ ಟ್ವಿಟರ್) ಕಂಡು ಬಂದಿದೆ. ಅದರಲ್ಲಿ “ಮಹಿಳೆಯ ಹೆಸರು ಸಾಗೋರಿಕಾ ಅಖ್ತರ್. ಅವಳು ಹಿಂದೂ ಅಲ್ಲ ಆದರೆ ಮುಸ್ಲಿಂ ಮತ್ತು ಈಡನ್ ಮೋಹಿಲಾ ಕಾಲೇಜಿನ ಛಾತ್ರ ಲೀಗ್ ನಾಯಕಿ. ವೀಡಿಯೊ ಜುಲೈನಿಂದ ಹಂಚಿಕೊಳ್ಳಲಾಗುತ್ತಿದೆ, ಛಾತ್ರ ಲೀಗ್ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾಗಿದ್ದು, ಇದು ಕೋಟಾ ಪ್ರತಿಭಟನಾಕಾರರ ವಿರುದ್ಧವಾಗಿತ್ತು.” ಎಂದು ಉಲ್ಲೇಖಿಸಿದ್ದಾರೆ.

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಲು ನಾವು ಅಂತರ್ಜಾಲ್ಲಿ ಮತ್ತೆ ಕೆಲವೊಂದು ಕೀ ವರ್ಡ್‌ಗಳ ಸಹಾಯದಿಂದ ಹುಡುಕಾಟವನ್ನು ನಡೆಸಿದಾಗ 17 ಜುಲೈ 2024ರಂದು ಮಹದಿ ಹಸನ್‌ ತಲಹ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದ್ದು, ಅದರಲ್ಲಿ ಕೂಡ ವೈರಲ್‌ ವಿಡಿಯೋವನ್ನು ಹಂಚಿಕೊಂಡು ಅದರಲ್ಲಿ ಮಹಿಳೆಯನ್ನು ಈಡನ್ ಮೋಹಿಲಾ ಕಾಲೇಜಿನ ಛಾತ್ರ ಲೀಗ್ ನಾಯಕಿ ಸಾಗೋರಿಕಾ ಅಖ್ತರ್ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್‌ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿ ನಂಬಲಾರ್ಹವಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಂದೂ ಮಹಿಳೆಗೆ ಮುಸಲ್ಮಾನರ ಗುಂಪು ಅವಮಾನಿಸಿ ಕಿರುಕುಳ ಕೊಟ್ಟಿದ್ದಾರೆ ಎಂಬುದು ಸುಳ್ಳು. ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ಅಧಿಕೃತ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ


ಇದನ್ನೂ ಓದಿ  :Fact Check | ಹಿಂದೂ ಮಹಿಳೆಯರ ಮೇಲೆ ದಾಳಿ ಎಂದು ತಪ್ಪಾಗಿ ಛಾತ್ರ ಲೀಗ್ ಕಾರ್ಯಕರ್ತರ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *