Fact Check | ಮ್ಯಾನ್ಮಾರ್, ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಯ ಫೋಟೋವನ್ನು ಬಾಂಗ್ಲಾದೇಶದ್ದು ಎಂದು ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಪ್ರತಿಭಟನೆಗೆ ಸಂಬಂಧಿಸಿದಂತೆ ಹಲವು ವಿಡಿಯೋ, ಫೋಟೋಗಳು ವೈರಲ್‌ ಆಗುತ್ತಿವೆ. ಸಾಕಷ್ಟು ಮಂದಿ ಮಾಧ್ಯಮಗಳಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಂಡರೆ, ಇನ್ನೂ ಕೆಲವರು ಅಂತರ್ಜಾಲದಲ್ಲಿ ಸಿಕ್ಕಸಿಕ್ಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಆದರೆ ಹೀಗೆ ವೈರಲ್‌ ಆಗುತ್ತಿರುವ ಹಲವು ಫೋಟೋ ಮತ್ತು ವಿಡಿಯೋಗಳು ಬಾಂಗ್ಲಾದೇಶಕ್ಕೆ ಸಂಬಂಧಿಸಿಲ್ಲ ಎಂಬುದು ಹಲವರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ವಾಸ್ತವದಲ್ಲಿ ಕಳೆದ ಹಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯ ಕುರಿತು, ಸಂಬಂಧವಿಲ್ಲದ ಫೋಟೋ, ವಿಡಿಯೋಗಳು, ಕೋಮುದ್ವೇಷ ಹರಡುವ ಟಿಪ್ಪಣಿಗಳು ಸಾಮಾಜದ ಸ್ವಾಥ್ಯ ಕದಡಲು ಮುಂದಾಗಿವೆ. ಇಂತಹ ಪೋಸ್ಟ್‌ಗಳು ದ್ವೇಷ ಭಾವನೆಯನ್ನು ಮೂಡಿಸುವುದರ ಜೊತೆಗೆ ಸಾಮಾಜವನ್ನೇ ತಪ್ಪು ದಾರಿ ತುಳಿಯುವಂತೆ ಮಾಡುತ್ತಿವೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಹಲವು ಫೋಟೋಗಳ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಹಲವು ಫೋಟೋಗಳ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆಯನ್ನು ನಡೆಸಿದೆ. ಈ ವೇಳೆ ನಮಗೆ ವಿವಿಧ ರೀತಿಯ ಫೋಟೋಗಳು ಬಾಂಗ್ಲಾದೇಶಕ್ಕೆ ಸಂಬಂಧಿಸಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದ್ದು, ಈ ಫೋಟೋಗಳನ್ನು ಸುಳ್ಳು ಮಾಹಿತಿ ಮತ್ತು ಕೋಮುದ್ವೇಷ ಹರಡಲು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗೆ ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿರುವ ಫೋಟೋಗಳ ಅಸಲಿಯತ್ತು ಈ ಕೆಳಗಿನ ವಿವರಗಳಲ್ಲಿ ನೀವು ನೋಡಬಹುದಾಗಿದೆ.

ಚಿತ್ರ-1

ಈ ಚಿತ್ರವೂ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರ ಪರದಾಟ ಎಂದು ಹಂಚಿಕೊಳ್ಳಲಾಗುತ್ತಿತ್ತು. ಹೀಗಾಗಿ ಇದನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ ನಮಗೆ NPR ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿಯೊಂದು ಕಂಡು ಬಂದಿದ್ದು, ಆ ವರದಿಯ ಪ್ರಕಾರ 3 ಮಾರ್ಚ್‌ 2021 ರಂದು ಮ್ಯಾನ್ಮಾರ್‌ನಲ್ಲಿ ನಡೆದ ಸೇನಾದಂಗೆಗೆ ಕಾರಣವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದೇ ವರದಿಯಲ್ಲಿ ನ್ಯೂಸ್‌ ನೇಷನ್‌ ಕೂಡ 1 ಮಾರ್ಚ್‌ 2021ರಂದು ತನ್ನ ಯುಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಂಡಿದೆ.

ವರದಿಯಲ್ಲಿ ಉಲ್ಲೇಖಿಸಿದಂತೆ ಮಿಲಿಟರಿ ದಂಗೆಯ ವಿರುದ್ಧ ಪ್ರತಿಭಟನಕಾರರು ಆಶ್ರಯ ಪಡೆದುಕೊಳ್ಳಲು ಪರದಾಡಿದರು, ಮ್ಯಾನ್ಮರ್‌ನಲ್ಲಿನ ಸೇನಾದಂಗೆ ತೀವ್ರಗೊಂಡಿದ್ದು, ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮ್ಯಾನ್ಮಾರ್‌ನಲ್ಲಿ ಇನ್ನಷ್ಟು ಪ್ರಕ್ಷುಬ್ದ ವಾತಾವರಣ ಉಂಟಾಗಲಿದೆ ಎಂದು ಸುದ್ದಿ ವರದಿಯಲ್ಲಿ ಹೇಳಲಾಗಿದೆ. ಈ ವಿಡಿಯೋ ಹಾಗೂ ವರದಿಗಳಲ್ಲಿರುವ ಕೆಲವೊಂದು ಫೋಟೋಗಳು ವೈರಲ್‌ ಫೋಟೋಗೆ ಹೋಲಿಕೆಯಾಗುವುದನ್ನು ಕೂಡ ನಾವು ಕಾಣಬಹುದಾಗಿದೆ.

ಚಿತ್ರ-2

ಈ ಚಿತ್ರವನ್ನು ಕೂಡ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ನಮಗೆ 24 ಆಗಸ್ಟ್ 2019ರಂದು ಪ್ರಕಟಿಸಿದೆ ಡೈಲಿ ಮೇಲ್ “Hong Kong protests turn violent again as police in riot gear brandishing batons fire tear gas and charge huge crowd of protesters who respond with barrage of stones, bottles and bamboo poles” ಎಂಬ ದೀರ್ಘ ಶೀರ್ಷಿಕೆಯಲ್ಲಿ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ.

ಇದೇ ವರದಿಯನ್ನು LʼINDEPENDENT ಸುದ್ದಿ ಸಂಸ್ಥೆ ವರದಿಯನ್ನು ಪ್ರಕಟಿಸಿದ್ದು, ಆ ವರದಿಯ ಪ್ರಕಾರ ಹಾಂಗ್ ಕಾಂಗ್‌ನ ಕ್ವುನ್ ಟಾಂಗ್‌ನಲ್ಲಿ ಸರ್ಕಾರಿ ವಿರೋಧಿ ಮೆರವಣಿಗೆಯಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಿಸಿದ್ದು. ಜೂನ್ ಆರಂಭದಿಂದ ಹಾಂಗ್ ಕಾಂಗ್ ಪ್ರತಿಭಟನೆಯಲ್ಲಿ ಮುಳುಗಿಹೋಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ ವೈರಲ್‌ ಚಿತ್ರ ಹಾಂಗ್ ಕಾಂಗ್‌ನಿಂದ ಬಂದಿದೆಯೇ ಹೊರತು ಬಾಂಗ್ಲಾದೇಶದಲ್ಲ ಎಂಬುದು ಖಚಿತವಾಗಿದೆ.

ಚಿತ್ರ 3

ಈ ಚಿತ್ರವೂ ಕೂಡ ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದ್ದು, ಈ ಫೋಟೋವನ್ನುಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ 17 ಏಪ್ರಿಲ್‌ 2021ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ಕೂಡ ಮ್ಯಾನ್ಮಾರ್‌ ಪ್ರತಿಭಟನೆ, ಅಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ಉಲ್ಲೇಖವನ್ನು ಮಾಡಲಾಗಿದ್ದು, ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಈ ವರದಿಗೆ “ಕಳೆದ ತಿಂಗಳು ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಸ್ಲಿಂಗ್‌ಶಾಟ್‌ಗಳನ್ನು ಬಳಸಿದರು” (ಇಂಗ್ಲೀಷ್‌ನಿಂದ ಭಾಷಾಂತರಗೊಳಿಸಲಾಗಿದೆ) ಎಂದು ಶೀರ್ಷಿಕೆಯನ್ನು ನೀಡಲಾಗಿತ್ತು. ವರದಿಯ ಪ್ರಕಾರ  ಮ್ಯಾನ್ಮಾರ್‌ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಪೊಲೀಸರು ಹಾಗೂ ಸೇನಾ ಸಿಬ್ಬಂಧಿಯ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಉಲ್ಲೇಖಿಸಲಾಗಿತ್ತು. ಹೀಗಾಗಿ ಈ ಫೊಟೋವೂ ಕೂಡ ಬಾಂಗ್ಲಾದೇಶದಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಸಾಬಿತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವಿಡಿಯೋ, ಫೋಟೋ ಎಂದು ಸಾವಿರಾರು ಫೋಟೋಗಳು ಮತ್ತು ವಿಡಿಯೋಗಳು ಪ್ರತಿನಿತ್ಯವೂ ಹರಿದಾಡುತ್ತಿವೆ. ಇಂತಹ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ. ಇಲ್ಲದಿದ್ದರೆ ಸುಳ್ಳು ಸುದ್ದಿಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.


ಇದನ್ನೂ ಓದಿ : ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಕಾದು ಕುಳಿತ ಹಿಂದೂ ನಿರಾಶ್ರಿತರು ಎಂದು ಸುಳ್ಳು ಸುದ್ದಿ ಹರಡಿದ ಸುವರ್ಣ ನ್ಯೂಸ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *