Fact Check | ಲುಪೋ ಚಾಕೊಲೇಟ್ ಕೇಕ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ ಎಂಬುದು ಸುಳ್ಳು

ಲುಪೋ ಚಾಕಲೇಟ್ ಕೇಕ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಕುರಿತು ಪೋಸ್ಟ್‌ ಮಾಡಿರುವ ಹಲವರು ”ಎಲ್ಲೆಡೆ ಡ್ರಗ್ಸ್‌ ಮಾಫಿಯಾಗಳು ಬಲಗೊಳ್ಳುತ್ತಿವೆ, ತಮ್ಮ ಹಿಡಿತವನ್ನು ಅವರು ಬಿಗಿಗೊಳಿಸುತ್ತಿದ್ದಾರೆ. ಮಕ್ಕಳು ಬೇಕರಿ ತಿನಿಸುಗಳನ್ನು ಖರೀದಿಸುವಾಗ ಜಾಗರೂಕರಾಗಿರುವಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಮಾದಕ ವ್ಯಸನಕ್ಕೆ ದೂಡಲು ನೀವೆ ಸಹಕರಿಸಿದಂತಾಗುತ್ತದೆ” ಎಂಬ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿಯೂ ಸಹ ಲುಪೋ ಚಾಕಲೇಟ್ ಕೇಕ್ ಅನ್ನು ಸಂಪೂರ್ಣವಾಗಿ ಕತ್ತರಿಸಿ ನೋಡುತ್ತಾರೆ. ಈ ವೇಳೆ ಕೇಕ್‌ನ ಮಧ್ಯ ಭಾಗದಲ್ಲಿ ಮಾತ್ರಯೊಂದು ಪತ್ತೆಯಾಗುವುದನ್ನು ಗಮನಿಸಬಹುದಾಗಿದೆ. ಈ ವಿಡಿಯೋ ನೋಡಿದ ಹಲವರು ಇದು ನಿಜಕ್ಕೂ ಕೇಕ್‌ನೊಳಗೆ ಡ್ರಗ್ಸ್‌ ಮಾತ್ರಗಳನ್ನು ತುಂಬಿರುವ ವಿಡಿಯೋ ಎಂದು ಭಾವಿಸಿ. ಈ ವೈರಲ್‌ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ನಮಗೆ  ಕೆಲವು ಅಂತರಾಷ್ಟ್ರೀಯ ವರದಿಗಳು ಕೂಡ ಕಂಡು ಬಂದಿದ್ದು, ಅವುಗಳಲ್ಲಿ ಪ್ರಮುಖವಾಗಿ ಸ್ನೋಪ್ಸ್‌ ಎಂಬ ವೆಬ್‌ತಾಣದಲ್ಲಿ ಬರೆದಿರುವ ಅಂಕಣದಲ್ಲಿ ಈ ವೈರಲ್‌ ವಿಡಿಯೋದ ಅಸಲಿಯತ್ತನ್ನು ಬಹಿರಂಗ ಪಡಿಸಲಾಗಿದೆ.

ಈ ಅಂಕಣದಲ್ಲಿ ವೈರಲ್‌ ವಿಡಿಯೋದಲ್ಲಿ  ಯಾವುದೇ ಸತ್ಯವಿಲ್ಲ ಎಂದು ‘ಸೊಲೆನ್’ (ಲುಪ್ಪೋ ಕೇಕ್ ತಯಾರಿಸುವ ಟರ್ಕಿಶ್ ಕಂಪನಿ) ಅಧಿಕಾರಿಗಳು ಉಲ್ಲೇಖಿಸಿರುವುದನ್ನು ಓದಬಹುದಾಗಿದೆ. ಅದೇ ಲೇಖನದಲ್ಲಿ, ‘ಸೊಲೆನ್’ ಸಸ್ಯಗಳ ಉತ್ಪಾದನಾ ಪ್ರಕ್ರಿಯೆ, ಮಾಲಿನ್ಯದ ಸುರಕ್ಷತೆಗಳು, ಸುರಕ್ಷತಾ ಪ್ರಮಾಣೀಕರಣಗಳನ್ನು ತೋರಿಸುವ ದಾಖಲೆಗಳನ್ನು ನೀಡಲಾಗಿದೆ, ಇದು ವೀಡಿಯೊದಲ್ಲಿ ತೋರಿಸಿರುವಂತೆ ಯಾವುದೇ ವಿದೇಶಿ ವಸ್ತು ಲುಪ್ಪೋ ಕೇಕ್‌ಗಳಲ್ಲಿ ಇರುವುದಿಲ್ಲ ಎಂದು ಸೂಚಿಸುತ್ತದೆ.

ಇದಲ್ಲದೆ, ಲುಪ್ಪೊ ಕೇಕ್‌ಗಳ ತಯಾರಿಕೆಯಲ್ಲಿ ಬಳಸಲಾಗುವ ಹಲವಾರು ಶೋಧನೆ ವ್ಯವಸ್ಥೆಗಳು 700 ಮೈಕ್ರಾನ್‌ಗಳಿಗಿಂತ ಹೆಚ್ಚಿನ ಎತ್ತರ ಅಥವಾ ಅಗಲದ ಕಣಗಳನ್ನು ನಿರ್ಬಂಧಿಸುತ್ತದೆ ಎಂದು ‘ಸೊಲೆನ್’ ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಉತ್ಪನ್ನವನ್ನು ಇರಾಕ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಎಂದು ತಿಳಿಸಿದ್ದಾರೆ. ಇನ್ನೂ ಕೆಲವು ಲೇಖನಗಳಲ್ಲಿ ಯಾರೋ ಮೊದಲೇ ಪ್ಯಾಕೆಟ್‌ ಅನ್ನು ಓಪನ್‌ ಮಾಡಿ ಕೇಕ್‌ನಲ್ಲಿ ಮಾತ್ರೆಗಳನ್ನು ಕೇಕ್‌ನಲ್ಲಿ ಇಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೇಕ್‌ನಲ್ಲಿ ರಂಧ್ರ ಇರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನು ಬಹುಮುಖ್ಯವಾಗಿ ಈ ವಿಡಿಯೋ ವೈರಲ್‌ ಆಗುತ್ತಿದ್ದ ವೇಳೆ  ಲುಪ್ಪೋ ಕೇಕ್‌ಗಳು ಭಾರತದಲ್ಲಿ ಮಾರಾಟವಾಗುತ್ತಿರಲಿಲ್ಲ ಎಂಬುದು ಕೂಡ ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಲುಪ್ಪೋ ಕೇಕ್‌ಗಳಲ್ಲಿ ಡ್ರಗ್ಸ್‌ ಮಾತ್ರೆಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ ಎಂಬುದು ಸುಳ್ಳು. ಈ ಕೇಕ್‌ ಭಾರತದಲ್ಲಿ ಮಾರಾಟ ಮಾಡಲಾಗುತ್ತಿಲ್ಲ. ಒಂದು ವೇಳೆ ವಿಡಿಯೋದಲ್ಲಿರುವ ಅಂಶ ನಿಜವೇ ಆಗಿದ್ದರೆ ಆ ಕುರಿತು ಮಾಧ್ಯಮ ವರದಿ ಕೂಡ ಬರಬೇಕಿತ್ತು, ಆದರೆ ಈ ಕುರಿತು ಯಾವುದೇ ವರದಿಗಳು ಕೂಡ ಪತ್ತೆಯಾಗಿಲ್ಲ. ಹಾಗಾಗಿ ವೈರಲ್‌ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ಸುಳ್ಳಿನಿಂದ ಕೂಡಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸುವ ಮುನ್ನ ಆನೆಗಳು ಸುರಕ್ಷಿತವಾಗಿರಲು ಓಡುತ್ತಿವೆ ಎಂದು ಹಳೆಯ ವೀಡಿಯೊ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *