Fact Check | ಹೊಸ ಸರ್ಕಾರದ ನಂತರ ಫ್ರಾನ್ಸ್‌ನಲ್ಲಿ ಮುಸ್ಲಿಮರ ಅಟ್ಟಹಾಸ ಎಂದು ಹಳೆಯ ಭಯೋತ್ಪಾದನಾ ದಾಳಿಯ ವಿಡಿಯೋ ಹಂಚಿಕೆ

“ರಸ್ತೆಯ ಮೇಲೆ ರಕ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಈ ಜನಗಳನ್ನು ನೋಡಿ ಇವರನ್ನು ಭೀಕರವಾಗಿ ಕೊಲ್ಲಲಾಗಿದೆ. ಈ ಬೃಹತ್‌ ಹತ್ಯಾಕಾಂಡದ ಹಿಂದಿರುವವರು ಬೇರೆ ಯಾರು ಅಲ್ಲ ಷರಿಯಾ ಕಾನೂನನ್ನು ಜಗತ್ತಿನಾದ್ಯಂತ ಜಾರಿಗೆ ತರಲು ಹೊರಟಿರುವ ಮುಸ್ಲಿಮರು,  ಫ್ರಾನ್ಸ್‌ ದೇಶ ಮುಸ್ಲಿಂ ನಿರಾಶ್ರಿತರಿಗೆ ನೆಲೆ ಕೊಟ್ಟ ಕಾರಣಕ್ಕೆ ಅಲ್ಲಿನ ಬಿಳಿ ಜನರನ್ನು ಹೇಗೆ ಹತ್ಯೆ ಮಾಡಿದ್ದಾರೆ ನೋಡಿ. ಇದೇ ಕಾರಣಕ್ಕೆ ಮುಸ್ಲಿಂ ನಿರಾಶ್ರಿತರನ್ನು ನಂಬಬೇಡಿ ಎಂದು ಹೇಳುವುದು” ಎಂಬ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದರ ಜೊತೆ ವೈರಲ್‌ ಆಗುತ್ತಿದೆ.

ಇನ್ನೂ ಕೆಲವರು ಇದೇ ವಿಡಿಯೋವನ್ನು ವಾಟ್ಸ್‌ಆಪ್‌ನಲ್ಲಿ ಹಂಚಿಕೊಂಡು “ಫ್ರಾನ್ಸ್ ಚುನಾವಣೆಯಲ್ಲಿ ಮುಸ್ಲಿಂ ಪಕ್ಷ ಜಯಭೇರಿ ಬಾರಿಸಿದೆ ಈಗ ನೋಡಿ ಮುಸ್ಲಿಮರು ತಮ್ಮ ದೇಶದಲ್ಲಿ ಫ್ರೆಂಚ್ ನಾಗರಿಕರನ್ನು ಹೇಗೆ ಕೊಲ್ಲುತ್ತಿದ್ದಾರೆ ಭಾರತದಲ್ಲಿ ಮುಸ್ಲಿಂ ಪಕ್ಷ ಗೆದ್ದರೆ ಏನಾಗುತ್ತದೆ ಎಂದು ಯೋಚಿಸಿ ಬಿವೇರ್ ಬಿವೇರ್ ಬಿವೇರ್” ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಬರಹದ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ  2016 ರಿಂದ ಕೆಲವು ಸುದ್ದಿ ವರದಿಗಳು ಪ್ರಕಟವಾಗಿರುವುದು ಕಂಡು ಬಂದಿವೆ. ಈ ಸುದ್ದಿ ವರದಿಗಳನ್ನು ಗಮನಿಸಿದಾಗ ವೈರಲ್‌ ವಿಡಿಯೋದೊಂದಿಗೆ ಹಂಚಿಕೊಳ್ಳಲಾದ ಬರಹಕ್ಕೂ ಈ ಸುದ್ದಿಗಳಿಗೂ ಸಾಕಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ.

ಈ ವರದಿಗಳ ಪ್ರಕಾರ  2016 ರಲ್ಲಿ ಬಾಸ್ಟಿಲ್ ಡೇ ಆಚರಣೆಯ ಸಂದರ್ಭದಲ್ಲಿ ಫ್ರಾನ್ಸ್‌ನ ನೈಸ್‌ನಲ್ಲಿ ನಡೆದ ಟ್ರಕ್ ಭಯೋತ್ಪಾದನೆಯ ದಾಳಿಯಲ್ಲಿ ಜನ ಸಾಮಾನ್ಯರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ರಾಯಿಟರ್ಸ್‌ ಪ್ರಕಟಿಸಿದ ವರದಿಯ ಪ್ರಕಾರ “ಫ್ರಾನ್ಸ್‌ನ ಬಾಸ್ಟಿಲ್ ಡೇ ರಾಷ್ಟ್ರೀಯ ರಜಾದಿನವನ್ನು ಗುರುತಿಸಲು ಪಟಾಕಿ ಪ್ರದರ್ಶನವು ಗುರುವಾರ ಅಂತ್ಯಗೊಂಡಾಗ ವ್ಯಕ್ತಿಯೊಬ್ಬ 19 ಟನ್ ತೂಕದ ಟ್ರಕ್ ಅನ್ನು ಜನಸಂದಣಿಯತ್ತ ಅತಿ ವೇಗದಲ್ಲಿ ಓಡಿಸಿದ್ದಾನೆ. ಅವನು ತನ್ನ ವಾಹನದಿಂದ ಪಿಸ್ತೂಲಿನಿಂದ ಸುಮಾರು 2 ಕಿಮೀ ವರೆಗೆ ಗುಂಡು ಹಾರಿಸಿದ ಪರಿಣಾಮ ರಸ್ತೆಯಲ್ಲಿದ್ದ ಸಾಕಷ್ಟು ಜನರು ಭೀಕರವಾಗಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಬಿಬಿಸಿ ವರದಿಯ ಪ್ರಕಾರ “ಇಸ್ಲಾಮಿಕ್ ಸ್ಟೇಟ್ ಉಗ್ರರ ಪರವಾದ ನಿಲುವು ಹೊಂದಿರುವ ‘ಮೊಹಮದ್ ಲಹೌಯೆಜ್-ಬೌಹ್ಲೆಲ್’ ಈ ದಾಳಿಯ ಹೊಣೆಯನ್ನು ವಹಿಸಿಕೊಂಡಿದೆ ಎಂಬುದನ್ನು ಘೋಷಿಸಿಕೊಂಡಿತ್ತು.  ಈ ದಾಳಿಯಲ್ಲಿ 86 ಜನರು ಪ್ರಾಣ ಕಳೆದುಕೊಂಡರು. ಈ ಟ್ರಕ್ ದಾಳಿಯೊಂದಿಗೆ ಸಂಬಂಧ ಹೊಂದಿರುವ ಎಂಟು ಜನರಿಗೆ ಡಿಸೆಂಬರ್ 2022 ರಲ್ಲಿ ಫ್ರೆಂಚ್ ನ್ಯಾಯಾಲಯವು ಜೈಲು ಶಿಕ್ಷೆಯನ್ನು ವಿಧಿಸಿತು.” ಎಂದು ಘಟನೆಯ ಕುರಿತು ಸುದ್ದಿಯನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ 2016 ರ ಬಾಸ್ಟಿಲ್ ಡೇ ಭಯೋತ್ಪಾದಕ ದಾಳಿಯ ವೀಡಿಯೊವನ್ನು ಈಗ ಮುಸ್ಲಿಂ ನಿರಾಶ್ರಿತರಿಂದ ಬಿಳಿಯರನ್ನು ಹತ್ಯೆ,  ಫ್ರಾನ್ಸ್ ಚುನಾವಣೆಯಲ್ಲಿ ಮುಸ್ಲಿಂ ಪಕ್ಷ ಜಯಭೇರಿ ಹಿನ್ನೆಲೆ ಫ್ರೆಂಚ್ ನಾಗರಿಕರನ್ನು ಮುಸ್ಲಿಂ ನಿರಾಶ್ರೀತರು ಕೊಂದಿದ್ದಾರೆ ಎಂಬುದು ಸುಳ್ಳು ಅಪಾದನೆಯಾಗಿದೆ ಎಂಬುದು ಈ ಎಲ್ಲಾ ಪರಿಶೀಲನೆಯಿಂದ ಸಾಬೀತಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸುವುದು  ಉತ್ತಮ


ಇದನ್ನೂ ಓದಿ : Fact Check: 2001ರಲ್ಲಿ ಎಲ್ ಸಾಲ್ವಡಾರ್ ಭೂಕಂಪದ ಚಿತ್ರವನ್ನು ವಯನಾಡ್ ಭೂಕುಸಿತದ ದೃಶ್ಯ ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *