Fact Check | BSNL ಗ್ರಾಹಕರ SIM KYC ಅನ್ನು ಅಮಾನತುಗೊಳಿಸಲಾಗಿದೆ ಎಂಬುದು ಸುಳ್ಳು..!

“TRAI ಗ್ರಾಹಕರ SIM KYC ಅನ್ನು ಅಮಾನತುಗೊಳಿಸಿದೆ ಮತ್ತು 24 ಗಂಟೆಗಳ ಒಳಗೆ ಎಲ್ಲಾ ಬಿಎಸ್‌ಎನ್‌ಎಲ್‌ SIM ಕಾರ್ಡ್‌ಗಳನ್ನು ನಿರ್ಬಂಧಿಸಲಾಗುವುದು ಎಂದು BSNL ನಿಂದ ಸೂಚಿಸಲಾದ. ಈ  ಸೂಚನೆಯನ್ನು ಎಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಶೇರ್‌ ಮಾಡಿ. ಮಾನತುಗೊಳಿಸುವಿಕೆಯನ್ನು ತಡೆಯಲು ತಕ್ಷಣವೇ ಈ ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ ” ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಹಂಚಿಕೊಳ್ಳಲಾದ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿಯನ್ನು ತಲುಪಿದ್ದು ಇನ್ನೂ ಶೇರ್‌ ಆಗುತ್ತಲೇ ಇದೆ. ಈ ಪೋಸ್ಟ್‌ ನೋಡಿದ ಸಾಕಷ್ಟು ಮಂದಿ ಇದು ನಿಜವಿರಬಹುದು ಎಂದು ಈ ಪೋಸ್ಟ್‌ ಅನ್ನು ಶೇರ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ಪೊಸ್ಟರ್‌ನಲ್ಲಿ ನೀಡಿದ ನಂಬರ್‌ಗೆ ಕರೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿನ ಅಸಲಿ ಸತ್ಯ ಏನು ಎಂಬುದನ್ನು ಈ ಪ್ಯಾಕ್ಟ್‌ಚೆಕ್‌ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ನಮಗೆ 2022ರಿಂದಲೂ ಇದೇ ರೀತಿಯಾದ ಪೋಸ್ಟ್‌ಗಳು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಇದು ಇತ್ತೀಚೆಗಿನ ಸುದ್ದಿಯಲ್ಲಿ ಎಂಬುದು ನಮಗೆ ಖಚಿತವಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ  2022 ರಲ್ಲಿ ದೆಹಲಿ ಪೊಲೀಸರ ಮಾಡಿದ್ದ ಟ್ವೀಟ್‌ವೊಂದು ಕಂಡು ಬಂದಿದೆ.  ಅದು MTNL ಹೆಸರಿನಲ್ಲಿ ಇದೇ ರೀತಿಯ ಸಂದೇಶವನ್ನು ಹರಡಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಈ ಪೋಸ್ಟ್‌ ಪ್ರಕಾರ ಗೌಪ್ಯ ಮಾಹಿತಿಯನ್ನು ಪಡೆಯಲು ದುಷ್ಕರ್ಮಿಗಳು KYC ನವೀಕರಣದ ನೆಪದಲ್ಲಿ MTNL ನ ಲೋಗೋ ಮತ್ತು ಹೆಸರನ್ನು ಬಳಸಿಕೊಂಡು ಆರ್ಥಿಕ ವಂಚನೆ ಮಾಡುತ್ತಿದ್ದಾರೆ ಎಂದು ದೆಹಲಿ ಪೊಲೀಸರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ಪರಿಶೀಲಿಸದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ ಎಂದು  ಗ್ರಾಹಕರಿಗೆ ಎಚ್ಚರಿಕೆಯನ್ನು ಕೂಡ ನೀಡಿತ್ತು.

ಇನ್ನು ವೈರಲ್‌ ಪೋಸ್ಟ್‌ ಅನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ 11 ಜೂನ್‌ 2024ರಂದು PIB ಮಾಡಿದ್ದ ಟ್ವೀಟ್‌ವೊಂದು ಕಂಡು ಬಂದಿದೆ.  ಇದರಲ್ಲಿ ಪ್ರಸ್ತುತ ಸಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿರುವ ಸಂದೇಶವನ್ನು ನಕಲಿ ಎಂದು ಸ್ಪಷ್ಟ ಪಡಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಹಕ್ಕುಗಳು ಸುಳ್ಳು ಮತ್ತು BSNL ಎಂದಿಗೂ ಅಂತಹ ಸೂಚನೆಗಳನ್ನು ಕಳುಹಿಸುವುದಿಲ್ಲ ಎಂದು PIB ಹೇಳಿದೆ. ಹೆಚ್ಚುವರಿಯಾಗಿ, ಜನರು ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು PIB ಸಲಹೆ ನೀಡಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ TRAI ಗ್ರಾಹಕರ SIM KYC ಅನ್ನು ಅಮಾನತುಗೊಳಿಸಿದೆ ಮತ್ತು 24 ಗಂಟೆಗಳ ಒಳಗೆ ಎಲ್ಲಾ ಬಿಎಸ್‌ಎನ್‌ಎಲ್‌ SIM ಕಾರ್ಡ್‌ಗಳನ್ನು ನಿರ್ಬಂಧಿಸಲಾಗುವುದು ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳಬೇಡಿ ಹಾಗೂ ಯಾರೇ ಅಪರಿಚಿತರು ನಿಮ್ಮ ಬ್ಯಾಂಕ್‌ ಮಾಹಿತಿ ಸೇರಿದಂತೆ ಇನ್ನೀತರ ಮಾಹಿತಿಗಳನ್ನು ಕೇಳಿದರೆ ನೀಡಬೇಡಿ. ಆ ಮೂಲಕ ಸೈಬರ್‌ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.


ಇದನ್ನೂ ಓದಿ : Fact Check | ಟೆಲಿಫೋನ್‌ನ ಸಂಶೋಧಕ ಅಲೆಕ್ಸಾಂಡರ್ ಗ್ರಹಾಂ ಬೆಲ್ ಮೊದಲಿಗೆ “ಹಲೋ” ಎಂಬ ಪದವನ್ನು ಬಳಸಲಿಲ್ಲ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *