Fact Check: ವಯನಾಡಿನ ಸಂತ್ರಸ್ತರಿಗೆ RSS ಸಹಾಯ ಮಾಡುತ್ತಿದೆ ಎಂದು ಹಳೆಯ ಮತ್ತು ಸಂಬಂಧವಿರದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ

ವಯನಾಡ್ ಭೂಕುಸಿತದ ಸಾವಿನ ಸಂಖ್ಯೆ ಸುಮಾರು 250 ಕ್ಕೆ ಏರಿದೆ, ನೂರಾರು ಜನರು ಇನ್ನೂ ಕಾಣೆಯಾಗಿದ್ದಾರೆ. ಅತ್ತಮಾಲಾ, ಮುಂಡಕ್ಕೈ ಮತ್ತು ಚುರಲ್ಮಾಲಾದಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಶೋಧ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಈ ದುರಂತಕ್ಕೆ ದೇಶದಾದ್ಯಂತ ಜನರು ಮಿಡಿಯುತ್ತಿದ್ದು, “ವಯನಾಡಿಗಾಗಿ ಪ್ರಾರ್ಥಿಸಿ” ಎಂದು ಜನರಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲು ಕೇಳಿಕೊಳ್ಳಲಾಗುತ್ತಿದೆ. ಅನೇಕ ಸ್ಥಳಿಯರು ಮತ್ತು ಸಂಘ ಸಂಸ್ಥೆಗಳು ದುರಂತ ನಡೆದ ಸ್ಥಳಕ್ಕೆ ಮತ್ತು ಪುನರ್ವಸತಿ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕೇರಳದ ಈ ದುರಂತವನ್ನು ಅನೇಕರು ಸಂಭ್ರಮಿಸುತ್ತಿದ್ದು, “ಕೇರಳದ ಜನರು ಹಿಂದು ಸಂಘಟನೆಗಳನ್ನು, ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದರು ಅವರಿಗೆ ಹೀಗೆ ಆಗಬೇಕಿತ್ತು” ಎಂದು ಇಂತಹ ದುರಂತದ ಸಮಯದಲ್ಲಿಯೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ.

ಈಗ, “ಆರ್‌ಎಸ್‌ಎಸ್‌ ಸಂಘಟನೆಯನ್ನು ಕೇರಳಿಗರು ತೆಗಳುತ್ತಿದ್ದರು. ಆದರೆ ಇಂತಹ ಕಷ್ಟದ ಸಮಯದಲ್ಲಿ ಆರ್‌ಎಸ್‌ಎಸ್‌ ವಯನಾಡಿನ ಜನರ ರಕ್ಷಣೆಗೆ ನಿಂತಿದೆ ಎಂದು ಅನೇಕ ಪೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮಲಯಾಳಂ ನಟಿ ನಿಖಿಲಾ ವಿಮಲ್ ಮತ್ತು ಒಂದಷ್ಟು ಯುವಕರು ಆಹಾರ ಹಂಚುತ್ತಿರುವ ವೀಡಿಯೋವನ್ನು ಆರ್‌ಎಸ್‌ಎಸ್‌ ಗೀತೆಯಾದ “ನಮಸ್ತೆ ಸದಾ ವತ್ಸಲೆ ಮಾತೃಭೂಮಿ” ಗೀತೆಯೊಂದಿಗೆ “ವಯನಾಡಿನ ಜನರಿಗೆ ಆಹಾರ ನೀಡಿ ಸಹಾಯ ಮಾಡುತ್ತಿರುವ ಆರ್‌ಎಸ್‌ಎಸ್‌” ಎಂಬ ಶೀರ್ಷಿಕೆಯೋಂದಿಗೆ ಇದನ್ನು ಅನೇಕರು  ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್:

RSS ಸಂಘಟನೆ ವಯನಾಡಿನಲ್ಲಿ ಜನರಿಗೆ ಸಹಾಯ ಮಾಡುತ್ತಿದೆ ಎಂದು ಅನೇಕ ಬಲಪಂಥೀಯ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿಗರು ಹಂಚಿಕೊಂಡಿರುವ ಪೋಟೋಗಳು ಹಳೆಯ ಘಟನೆಗಳದ್ದಾಗಿವೆ ಮತ್ತು ವಯನಾಡಿಗೆ ಸಂಬಂಧಿಸಿದ್ದಲ್ಲ. ಇನ್ನೂ ಮಲಯಾಳಂ ನಟಿ ನಿಖಿಲಾ ವಿಮಲ್  ಇರುವ ವೀಡಿಯೋ ಸಹ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ್ದಲ್ಲ ಎಂದು ನಾವು ಕಂಡುಕೊಂಡಿದ್ದೇವೆ.

ಮೊದಲಿಗೆ RSS ಕಾರ್ಯಕರ್ತರು ಮನೆಗಳಿಗೆ ತೆರಳಿ ಆಹಾರ ವಿತರಿಸುತ್ತಿರುವ ಪೋಟೋವನ್ನು ರಿವರ್ಸ್‌ ಇಮೇಜ್ ಮೂಲಕ ಹುಡುಕಿದಾಗ ಇವು 2018ರ ಹಳೆಯ ಪೋಟೋಗಳು ಮತ್ತು ವಯನಾಡಿಗೆ ಸಂಬಂಧಿಸಿದವುಗಳಲ್ಲ ಎಂದು ತಿಳಿದು ಬಂದಿದೆ.

ಈ ಕೆಳಗೆ ವೈರಲ್‌ ಪೋಟೋಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಇದರಿಂದ ಈ ಪೋಟೋಗಳು ಬೇರೆ ಬೇರೆ ಸಂದರ್ಭದ ಚಿತ್ರಗಳೆಂದು ಸಾಬೀತು ಪಡಿಸುತ್ತವೆ. ಮತ್ತು ಪೋಟೋಗಳ ಕೆಳಗೆ ಅವುಗಳ ದಿನಾಂಕವನ್ನು ಗಮನಿಸಬಹುದು.

ಇನ್ನೂ ಕೇರಳದ ಪ್ರಮುಖ ಸುದ್ದಿ ಮಾಧ್ಯಮವಾದ ಮಾತೃಭೂಮಿ ವರದಿಯ ಪ್ರಕಾರ “ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ನಡೆಯುತ್ತಿರುವ ಪರಿಹಾರ ಕಾರ್ಯಗಳ ಮಧ್ಯೆ, ನಟಿ ನಿಖಿಲಾ ವಿಮಲ್ ಅವರು ಪ್ರಯತ್ನಗಳಲ್ಲಿ ಭಾಗವಹಿಸುವ ಮೂಲಕ ಸಕ್ರಿಯ ಪಾತ್ರ ವಹಿಸಿದ್ದಾರೆ. ಪೀಡಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲು ಮತ್ತು ರವಾನಿಸಲು ಅವರು ಡಿವೈಎಫ್ಐ ಸ್ಥಾಪಿಸಿದ ಕಣ್ಣೂರಿನ ತಲಿಪರಂಬ ಸಂಗ್ರಹ ಕೇಂದ್ರದಲ್ಲಿ ಸ್ವಯಂಸೇವಕರೊಂದಿಗೆ ಸೇರಿಕೊಂಡರು.” ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಡಿವೈಎಫ್‌ಐ(Democratic Youth Federation of India) ಕೇರಳದ ಕಮುನಿಸ್ಟ್‌ ಯುವ ಸಂಘಟನೆಯಾಗಿದೆ.

ಹಳೆಯ ಪೋಟೋಗಳು ಮತ್ತು ವಯನಾಡಿಗೆ ಸಂಬಂಧಿಸಿರದ ಚಿತ್ರಗಳನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುವ ಮೂಲಕ ಜನರಿಂದ ಮೆಚ್ಚುಗೆ ಮತ್ತು ಪ್ರಶಂಸೆ ಪಡೆಯಲು ನೋಡುತ್ತಿರುವುದನ್ನು ಆಲ್ಟ್‌ ನ್ಯೂಸ್‌ ವರದಿಗಾರ ಮಹಮ್ಮದ್ ಜುಬೈರ್‌ ಬಯಲು ಮಾಡಿದ್ದಾರೆ.

ಆದ್ದರಿಂದ ವಯನಾಡಿನ ದುರಂತದ ಸಂತ್ರಸ್ತರಿಗೆ ಆರ್‌ಎಸ್‌ಎಸ್‌ ಸಹಾಯ ಮಾಡುತ್ತಿದೆ ಎಂದು ಹಳೆಯ ಮತ್ತು ಸಂಬಂಧವಿರದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸಾಭೀತಾಗಿದೆ.


ಇದನ್ನು ಓದಿ: ಕೇರಳದ ಇಡುಕ್ಕಿಯ ಭೂಕುಸಿತದ 2020ರ ಹಳೆಯ ಫೋಟೋವನ್ನು ವಯನಾಡ್‌ನ ಇತ್ತೀಚಿನ ಫೋಟೋ ಎಂದು ತಪ್ಪಾಗಿ ಹಂಚಿಕೆ


ವೀಡಿಯೋ ನೋಡಿ: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *