ರಾಹುಲ್ ಗಾಂಧಿ ವಯನಾಡ್ ಭೇಟಿ ಮುಂದೂಡಿದ್ದು ಹವಾಮಾನ ಕಾರಣಗಳಿಂದ ಹೊರತು ಅನಿವಾರ್ಯ ಕಾರಣಗಳಿಂದಲ್ಲ

ವಯನಾಡ್

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಸರಣಿ ಭೂ ಕುಸಿತಗಳ ಪರಿಣಾಮ ನೂರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದರು. ಕೆಲವರು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಇಡೀ ದೇಶವೇ ಈ ದುರ್ಘಟನೆಗೆ ಸಂತಾಪ ಸೂಚಿಸಿದೆ. ಸದ್ಯ ವಯನಾಡ್‌ನಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿಯವರು ಘಟನೆಗೆ ಸಂತಾಪ ವ್ಯಕ್ತಪಡಿಸಿ, ತನ್ನ ಸಹೋದರಿ ಪ್ರಿಯಾಂಕ ಗಾಂಧಿಯೊಂದಿಗೆ ಇಂದು ಬುಧವಾರ ವಯನಾಡ್‌ಗೆ ತೆರಳಿ ಸಂತ್ರಸ್ತರ ಅಳಲು ಕೇಳುವುದಾಗಿ ತಿಳಿಸಿದ್ದರು. ಆದರೆ ನಂತರ ತಮ್ಮ ಭೇಟಿಯನ್ನು ಮುಂದೂಡಿದ್ದಾರೆ. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಚಡ್ಡಿಗಳು ಸಂತ್ರಸ್ತರ ನೆರವಿಗೆ ಧಾವಿಸಿದ್ದರೆ, ಅಲ್ಲಿನ ನಾಯಕ ಅನಿವಾರ್ಯ ಕಾರಣಗಳಿಂದ ಬರಲು ಆಗಲಿಲ್ಲ ಎಂದು ಟ್ವೀಟ್ ಮಾಡಿದ್ದಾನೆ ಎಂದು ಜವಾರಿ ಜಮಖಂಡಿ ಲೋಗೊ ಇರುವ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ವಯನಾಡ್‌ನ ದುರಂತಕ್ಕೆ ಮಾನವೀಯ ಸ್ಪಂದನೆ ದೊಡ್ಡ ಮಟ್ಟದಲ್ಲಿ ದೊರಕಿದೆ. ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಮನವಿ ಮಾಡಲಾಗಿದ್ದು, ಹಲವರು ದೇಣಿಗೆ ನೀಡಿದ್ದಾರೆ. ಚರ್ಚ್, ಮಸೀದಿ ಮತ್ತು ದೇವಸ್ಥಾನಗಳನ್ನು ಪರಿಹಾರ ಶಿಬಿರಗಳಾಗಿ, ಆಸ್ಪತ್ರೆಗಳಾಗಿ ಬದಲಾಯಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು, ಸಂಘಟನೆಗಳ ಕಾರ್ಯಕರ್ತರು ರಕ್ಷಣೆ ಮತ್ತು ನೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳು, ತುರ್ತು ಔಷಧಿಗಳು, ಬಟ್ಟೆಗಳು ಮತ್ತು ನೈರ್ಮಲ್ಯ ಪರಿಕರಗಳನ್ನು ತ್ವರಿತವಾಗಿ ತಲುಪಿಸಲು ಹಲವಾರು ಸ್ಥಳಗಳಲ್ಲಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ. ಹತ್ತಾರು ಹೆಲ್ಪ್‌ಲೈನ್ ನಂಬರ್‌ಗಳನ್ನು ತೆರೆಯಲಾಗಿದ್ದು, ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.

ಇನ್ನು ರಾಹುಲ್ ಗಾಂಧಿಯವರು ಇಂದು ಬುಧವಾರ ಬೆಳಿಗ್ಗೆ ತನ್ನ ಸಹೋದರಿ ಪ್ರಿಯಾಂಕ ಗಾಂಧಿಯೊಂದಿಗೆ ವಯನಾಡ್‌ಗೆ ತೆರಳಿ ಸಂತ್ರಸ್ತರ ಅಳಲು ಕೇಳುವುದಾಗಿ ತಿಳಿಸಿದ್ದರು. ಆದರೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ತೀವ್ರ ಮಳೆ, ಬಿರುಗಾಳಿಯ ಕಾರಣದಿಂದ ವಿಮಾನ ಇಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ತಮ್ಮ ಭೇಟಿಯನ್ನು ಮುಂದೂಡಿರುವುದಾಗಿ ಟ್ವೀಟ್ ಮಾಡಿದ್ದಾರೆಯೇ ಹೊರತು ಅನಿವಾರ್ಯ ಕಾರಣ ಎಂದು ಬರೆದಿಲ್ಲ. ಅವರ ಟ್ವೀಟ್ ಅನ್ನು ಇಲ್ಲಿ ನೋಡಬಹುದು.

ರಾಹುಲ್ ಗಾಂಧಿಯವರು ವಯನಾಡ್ ಭೇಟಿ ಮುಂದೂಡಿದ್ದನ್ನು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ವಯನಾಡ್‌ನಲ್ಲಿ ಭಾರೀ ದುರಂತ ಸಂಭವಿಸಿದೆ. ಜನ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಮಾನವೀಯವಾಗಿ ಸ್ಪಂದಿಸುತ್ತಿದ್ದಾರೆ. ರಾಹುಲ್ ಗಾಂಧಿ ಕೂಡ ಸಂಸತ್ತಿನಲ್ಲಿ ಈ ಕುರಿತು ಮಾತನಾಡಿದ್ದಾರೆ. ಮೃತರಿಗೆ ಸಂತಾಪ ಕೋರಿ ಮೌನ ಆಚರಣೆ ನಡೆಸಿದ್ದಾರೆ. ಸದ್ಯ ಮಳೆ ಬಿರುಗಾಳಿ ಹೆಚ್ಚಿರುವ ಕಾರಣ ಅವರು ವಯನಾಡ್‌ಗೆ ತೆರಳಲು ಸಾಧ್ಯವಾಗುತ್ತಿಲ್ಲ ಅಷ್ಟೆ. ಇಂತಹ ದುರಂತ ಸಂದರ್ಭದಲ್ಲಿ ಯಾರೂ ಸಹ ಸುಳ್ಳು ಸುದ್ದಿಗಳ ಮೂಲಕ ರಾಜಕೀಯ ಮಾಡಬಾರದು ಎಂಬುದು ನಮ್ಮ ಕೋರಿಕೆಯಾಗಿದೆ.


ಇದನ್ನೂ ಓದಿ; Fact Check: ಮುಂಬೈನಲ್ಲಿ ಬಾರ್ಬರ್ ಜಿಹಾದ್‌ ಎಂದು ಸಂಬಂಧವಿಲ್ಲದ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *