Fact Check | ಪ್ಯಾರಿಸ್ ಒಲಿಂಪಿಕ್ಸ್‌ನ ವಿವಾದಾತ್ಮಕ ಉದ್ಘಾಟನಾ ಸಮಾರಂಭವನ್ನು ಕಮಲಾ ಹ್ಯಾರಿಸ್ ಹೊಗಳಿಲ್ಲ

“ಲಿಯೊನಾರ್ಡೊ ಡಾ ವಿನ್ಸಿ ಅವರ “ದಿ ಲಾಸ್ಟ್ ಸಪ್ಪರ್” ಪೇಂಟಿಂಗ್ ಅನ್ನು ವಿಡಂಬನೆ ಮಾಡಿದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಕುರಿತು ಕಮಲಾ ಹ್ಯಾರಿಸ್‌ ಅವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕ್ರೈಸ್ತರಿಗೆ ಅವಮಾನವಾದ ಈ ಕಾರ್ಯಕ್ರಮವನ್ನು ಕಮಲಾ ಹ್ಯಾರಿಸ್‌ ಅವರು ಹೇಗೆ ಒಪ್ಪಿಕೊಂಡಿದ್ದಾರೆ. ಈ ಬಾರಿ ಅಮೆರಿಕದ ಚುನಾವಣೆಯಲ್ಲಿ ಯೋಚಿಸಿ ಮತ ಚಲಾಯಿಸಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ವಿರುದ್ಧ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇಷ್ಟು ಮಾತ್ರವಲ್ಲದೆ ಈ ಪೋಸ್ಟ್‌ ಅನ್ನು ಜಾಗತಿಕವಾಗಿ ಕ್ರೈಸ್ತರ ಗಮನಕ್ಕೆ ತರುವುದಕ್ಕಾಗಿ ಈ ಪೋಸ್ಟ್‌ ಅನ್ನು ವೈರಲ್‌ ಮಾಡುವ ಪ್ರಯತ್ನವು ಕೂಡ ನಡೆಯುತ್ತಿದೆ. ಈ ಪೋಸ್ಟ್‌ನ ಹಿಂದೆ ರಾಜಕೀಯ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದ್ದು, ಇದೀಗ ಧಾರ್ಮಿಕ ವಿಚಾರವನ್ನು ಕೂಡ ಎಳೆದು ತಂದು ಅಮೆರಿಕದ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಅವರಿಗೆ ಸಂಪೂರ್ಣವಾಗಿ ಹಿನ್ನಡೆ ಉಂಟಾಗುವಂತೆ ನೋಡಿಕೊಳ್ಳಲು ಯತ್ನಿಸಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಕಮಲಾ ಹ್ಯಾರಿಸ್‌ ಒಂದು ವೇಳೆ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದು ನಿಜವೇ ಆದಲ್ಲಿಆ ಕುರಿತು ಮಾಧ್ಯಮ ವರದಿಗಳು ಕಂಡು ಬರಬೇಕಿತ್ತು. ಹೀಗಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ನಮಗೆ ಅಂತಹ ಯಾವುದೇ ವರದಿಗಳು ಕಂಡು ಬಂದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಮಲಾ ಹ್ಯಾರಿಸ್‌ ಅವರ ವಿವಿಧ ಸಾಮಾಜಿಕ ಜಾಲತಾಣವನ್ನು ಬಹುಮುಖ್ಯವಾಗಿ ಅವರು ಸಕ್ರಿಯವಾಗಿರುವ ಎಕ್ಸ್‌ ( ಟ್ವಿಟರ್‌) ಖಾತೆಯನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಪ್ಯಾರಿಸ್‌ ಒಲಿಂಪಿಕ್‌ ಕುರಿತು ಕಮಲಾ ಹ್ಯಾರಿಸ್‌ ಅವರ ಯಾವುದೇ ಪೋಸ್ಟ್‌ಗಳು ಎಕ್ಸ್‌ನಲ್ಲಿ ಕಂಡು ಬಂದಿಲ್ಲ.

ಸರಿಸುಮಾರು ನಾಲ್ಕು ಗಂಟೆಗಳ ಉದ್ಘಾಟನಾ ಸಮಾರಂಭವು ಜುಲೈ 26, 2024 ರಂದು (ಶುಕ್ರವಾರ) ಮಧ್ಯಾಹ್ನ 1:30 ಕ್ಕೆ (ಯುಎಸ್ ಸಮಯ) ಪ್ರಾರಂಭವಾದಾಗಿನಿಂದ 24 ಗಂಟೆಗಳಲ್ಲಿ ಹ್ಯಾರಿಸ್ ಒಲಿಂಪಿಕ್ಸ್ ಕುರಿತು ಏನನ್ನೂ ಪೋಸ್ಟ್ ಮಾಡದೆ ಇರುವುದು ಕಂಡು ಬಂದಿದೆ. ಇನ್ನು ಸೋಶಿಯಲ್ ಬ್ಲೇಡ್ ಎಂಬ ವಿಶ್ಲೇಷಣಾ ಸಾಧನದಲ್ಲಿ ಕಮಲಾ ಹ್ಯಾರಿಸ್‌ ಟ್ವೀಟ್‌ ಮಾಡಿ ಡಿಲಿಟ್‌ ಮಾಡಿದ್ದಾರೆಯೇ ಎಂದು ಪರಿಶೀಲಿಸಿದಾಗ ಜುಲೈ 26 ಮತ್ತು ಜುಲೈ 27 ರಂದು ಯಾವುದೇ ಟ್ವೀಟ್ ಅನ್ನು ಅಳಿಸಲಾಗಿಲ್ಲ ಎಂದು ತೋರಿಸಿದೆ. ಹೀಗಾಗಿ ವೈರಲ್ ಸ್ಕ್ರೀನ್‌ಶಾಟ್ ಕೂಡ ನಕಲಿ ಎಂದು ಸಾಬೀತಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ಪ್ಯಾರಿಸ್‌ ಒಲಿಂಪಿಕ್‌ನ ಉದ್ಘಾಟನೆಯಲ್ಲಿ ಪ್ರದರ್ಶಿಸಲಾದ ವಿಡಂಬನಾತ್ಮಕ ದ ಲಾಸ್ಟ್‌ ಸಪ್ಪರ್‌ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು. ಹಾಗೂ ಈ ಆರೋಪಕ್ಕೆ ಯಾವುದೇ ಪುರಾಕವಾದ ಸಾಕ್ಷಿಗಳು ಕೂಡ ಲಭ್ಯವಾಗಿಲ್ಲ. ಹಾಗಾಗಿ ಇಂತಹ ಸುಳ್ಳು ಸುದ್ದಿಯನ್ನು ನಂಬುವ ಮುನ್ನ ಒಮ್ಮೆ ಪರಿಶೀಲನೆ ನಡೆಸಿ.


ಇದನ್ನೂ ಓದಿ : ರಾಹುಲ್ ಗಾಂಧಿ ವಯನಾಡ್ ಭೇಟಿ ಮುಂದೂಡಿದ್ದು ಹವಾಮಾನ ಕಾರಣಗಳಿಂದ ಹೊರತು ಅನಿವಾರ್ಯ ಕಾರಣಗಳಿಂದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *