Fact Check | ಆಂಧ್ರಪ್ರದೇಶದಲ್ಲಿ ಜಾವೇದ್‌ನಿಂದ ರೋಹಿತ್ ಕೊ*ಲೆ ಎಂಬುದು ಸುಳ್ಳು – ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಸಮುದಾಯದವರು

ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಮೇಲೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಜಾವೇದ್ ಎಂಬ ಮುಸ್ಲಿಂ ವ್ಯಕ್ತಿ ರೋಹಿತ್ ಎಂಬ ಹಿಂದೂ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ” ಎಂದು ಹಂಚಿಕೊಳ್ಳಲಾಗುತ್ತಿದ್ದು,  ದೆಹಲಿಯ ಸರೈ ಕಾಲೇ ಖಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋದ ಟಿಪ್ಪಣಿಯಲ್ಲಿ ಬರೆಯಲಾಗಿದೆ. ಹೀಗಾಗಿ ಈ ವಿಡಿಯೋ ವೈರಲ್‌ ಕೂಡ ಆಗಿದೆ.

ವಿಡಿಯೋ ನೋಡಿದ ಹಲವು ಮಂದಿ ಈ ಕುರಿತು ಯಾವುದೇ ರೀತಿಯಾದ ಪರಿಶೀಲನೆಯನ್ನು ನಡೆಸದೆ ಈ ಘಟನೆ ನಡೆದಿರುವುದು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಕೋಮು ದ್ವೇಷವನ್ನು ಸಮಾಜದಲ್ಲಿ ಬಿತ್ತಲು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧಿಸಿದ್ದಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 19 ಜುಲೈ 2024 ರಂದು ‘ ಇಂಡಿಯನ್ ಎಕ್ಸ್‌ಪ್ರೆಸ್‘ ಪ್ರಕಟಿಸಿದ ಸುದ್ದಿ ವರದಿಯೊಂದು ಕಂಡು ಬಂದಿದೆ.

ಆ ವರದಿಯ ಪ್ರಕಾರ 2024 ರ ಜುಲೈ 17 ರ ರಾತ್ರಿ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ವಿನುಕೊಂಡ ಪಟ್ಟಣದ ಮುಖ್ಯ ರಸ್ತೆಯಲ್ಲಿ ವೈಎಸ್‌ಆರ್‌ಸಿಪಿಯ ಯುವ ಮುಖಂಡ 27 ವರ್ಷದ ಶೇಖ್ ರಶೀದ್ ಅವರನ್ನು ಜಿಲಾನಿ ಎಂಬ ವ್ಯಕ್ತಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಂದಿದ್ದಾರೆ ಎಂದು ಉಲ್ಲೇಖಿಸಿಲಾಗಿದೆ. ವೈಎಸ್‌ಆರ್‌ಸಿಪಿಯು ಕೊಲೆಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ ಮತ್ತು ಆರೋಪಿಯು ಟಿಡಿಪಿಯೊಂದಿಗೆ ಸಂಪರ್ಕವನ್ನು ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಮಾತ್ರ ಇದು ಹಳೆಯ ವೈಷಮ್ಯದಿಂದ ನಡೆದ ಕೊಲೆ ಎಂದಿದ್ದಾರೆ ಎಂಬುದು ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವ ಅಂಶಗಳಲ್ಲಿ ಒಂದಾಗಿದೆ. ಇನ್ನು ಈ ಘಟನೆಗೆ ಸಂಬಂಧ ಪಟ್ಟಂತೆ ಇದೇ ರೀತಿಯ ಹಲವು ವರದಿಗಳನ್ನು ಕೂಡ ಕಂಡು ಕೊಂಡಿದ್ದೇವೆ.

ಇನ್ನು ಇದೇ ಘಟನೆಗೆ ಸಂಬಂಧ ಪಟ್ಟಂತೆ 26 ಜುಲೈ 2024 ರಂದು ಪಲ್ನಾಡು ಪೊಲೀಸರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ವಿನುಕೊಂಡ ಪೊಲೀಸರ ಪತ್ರಿಕಾಗೋಷ್ಠಿಯ ವೀಡಿಯೊವನ್ನು ಒಳಗೊಂಡ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ . 17 ಜುಲೈ 2024 ರಂದು ವಿನುಕೊಂಡ ಪಟ್ಟಣದ ಮುಲ್ಲಮೂರು ಬಸ್ ನಿಲ್ದಾಣದ ಬಳಿ ಶೇಖ್ ರಶೀದ್‌ನನ್ನು ಚಾಕುವಿನಿಂದ ಇರಿದು ಕೊಂದ ಶೇಖ್ ಜಿಲಾನಿಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ ಮತ್ತು ಕೊಲೆಯಲ್ಲಿ ಯಾವುದೇ ರಾಜಕೀಯ ದೃಷ್ಟಿಕೋನವಿಲ್ಲ ಎಂದು ಪೊಲೀಸರು ವೀಡಿಯೊದಲ್ಲಿ ತಿಳಿಸಿರುವುದು ಕೂಡ ಸ್ಪಷ್ಟವಾಗಿದೆ.

ಇನ್ನೂ ಇದೇ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಹುಡಕಾಟ ನಡೆಸಲು ನಾವು ಆಂಧ್ರಪ್ರದೇಶ ಪೊಲೀಸರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಈ ವೇಳೆ ನಮಗೆ ಈ ಪ್ರಕರಣದಲ್ಲಿ ದಾಖಲಿಸಲಾದ ಎಫ್‌ಐಆರ್ ಕಂಡು ಬಂದಿದ್ದು, ಎಫ್‌ಐಆರ್ (184/2024) ಪ್ರಕಾರ , ಈ ಘಟನೆಯಲ್ಲಿ ಆರೋಪಿಗಳಾದ ಜಿಲಾನಿ, ಪಠಾಣ್ ಅಬೂಬಕರ್ ಸಿದ್ದಿಕ್ (ಅಲಿಯಾಸ್ ಸಿದ್ದು), ಶಫಿ, ಇಮ್ರಾನ್, ಆಂಬ್ಯುಲೆನ್ಸ್ ರಫಿ, ಜಿಮ್ ಜಾನಿ ಮತ್ತು ಸಾಯಿಬಾ  ಹಾಗೂ ಮೃತರಾದವರ ಹೆಸರು ಶೇಖ್ ರಶೀದ್ ಎಂದು ತಿಳಿದು ಬಂದಿದೆ. ಈ ಮಾಹಿತಿಯಿಂದ ವೈರಲ್ ವೀಡಿಯೋ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದಿರುವ ಕೊಲೆ ಎಂಬುದು ಸ್ಪಷ್ಟವಾಗಿದೆ ಮತ್ತು ಆರೋಪಿಗಳು ಹಾಗೂ ಮೃತರು ಮುಸ್ಲಿಮರಾಗಿರುವುದರಿಂದ ಈ ಘಟನೆಯಲ್ಲಿ ಯಾವುದೇ ಕೋಮುವಾದದ ಕೋನವಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರಪ್ರದೇಶದ ಕೊಲೆಯ ವೀಡಿಯೊವನ್ನು “ಜಾವೇದ್ ಎಂಬ ಮುಸ್ಲಿಂ ವ್ಯಕ್ತಿ ರೋಹಿತ್ ಎಂಬ ಹಿಂದೂ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ ಹಾಗೂ ಈ ಘಟನೆ ದೆಹಲಿಯಲ್ಲಿ ನಡೆದಿದೆ” ಎಂದು ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿ ಸುಳ್ಳಾಗಿದೆ ಹಾಗೂ ಈ ಘಟನೆಯಲ್ಲಿ ಆರೋಪಿ ಮತ್ತೆ ಹತ್ಯೆಗೊಳಗಾದ ವ್ಯಕ್ತಿಗಳು ಮುಸಲ್ಮಾನರೇ ಆಗಿರುವುದರಿಂದ ಇದರಲ್ಲಿ ಯಾವುದೇ ಕೋಮು ಆಯಾಮವಿಲ್ಲ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : Fact Check | ಬಾಂಗ್ಲಾದೇಶದ ಭದ್ರತಾ ಸಭೆಯಲ್ಲಿ ಭಾರತೀಯ ಹೈಕಮಿಷನರ್ ಭಾಗವಹಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *