Fact Check: ಬೆಂಗಳೂರಿಗೆ ಸರಬರಾಜು ಆಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ರಾಜಸ್ಥಾನದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ರೈಲಿನಲ್ಲಿ ಸರಬರಾಜು ಆಗುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವನ್ನು ಬೆರೆಸಲಾಗಿದೆ ಎಂದು ಆರೋಪಿಸಿ ವಿವಾದಿತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದುಪರ ಸಂಘಟನೆಗಳು ಕೆಎಸ್‌ಆರ್‌(ಯಶವಂತಪುರ) ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉದ್ದನೆಯ ಬಾಲ ಇರುವ ಕುರಿ ಮಾಂಸ ಕಂಡು ಇದು ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ದಾಖಲೆಯನ್ನು ಒದಗಿಸಿಲ್ಲ.

ಇದರ ನಂತರ ಅಲ್ಲಿಗೆ ಆಗಮಿಸಿದ ಪೋಲಿಸರು ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಮಾಂಸದ ಮಾದರಿಗಳನ್ನು(ಸ್ಯಾಂಪಲ್‌) ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪೋಲಿಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿಯನ್ನು ಬಂಧಿಸುತ್ತಿದ್ದಂತೆ ಆತ ಅಸ್ವಸ್ತರಾಗಿದ್ದಾರೆ. ಆತನನ್ನು ಸ್ಥಳಿಯ ಆಸ್ಪತ್ರೆಗೆ ಪೋಲಿಸರು ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿ ಮಾಧ್ಯಮಗಳು ಸೇರಿದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಬೆಂಗಳೂರಿಗೆ ನಾಯಿ ಮಾಂಸವನ್ನು ಸರಬರಾಜು ಮಾಡುತ್ತಿದ್ದನಂತೆ ಎಂದು ವರದಿ, ಸಂದೇಶಗಳು ಹಾಗೂ ಅಪಹಾಸ್ಯದ ಪೋಸ್ಟರ್‌ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಸುವರ್ಣ ನ್ಯೂಸ್‌ ಸಹ “ಬೆಂಗಳೂರಿಗೆ ಸರಬರಾಜು ಆಗುತ್ತಿದೆಯೇ ನಾಯಿ ಮಾಂಸ? ರಾಜಸ್ಥಾನದಿಂದ ಬಂದ 4000 ಕೆಜಿ ಉದ್ದ ಬಾಲದ ಮಾಂಸ ಯಾವುದು?” ಎಂದು ಸರಬರಾಜು ಆಗುತ್ತಿರುವ ಮಾಂಸ ನಾಯಿ ಮಾಂಸವೇ ಎಂದು ಪರೋಕ್ಷವಾಗಿ ಆರೋಪಿಸಿ, ಓದುಗರಲ್ಲಿ ಗೊಂದಲ ಮೂಡಿಸಿದ್ದಾರೆ.

ಇನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪುನಿತ್ ಕೆರೆಹಳ್ಳಿ ದಾಳಿ ಮಾಡುವ ಮತ್ತು ಅಬ್ದುಲ್ ರಜಾಕ್ ಮತ್ತು ಪುನಿತ್ ಕೆರೆಹಳ್ಳಿ ವಾಗ್ವಾದ ನಡೆಸುವ ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ.  ವೀಡಿಯೋ ಹಂಚಿಕೊಂಡಿರುವ ಬಹುತೇಕರು “ಜಿಹಾದಿ ಅಬ್ದುಲ್ ರಾಜಾಕ್ ಎನ್ನುವ ನಾಯಿಯ ಮಾಂಸ ದಂದೇಯ ಅಸಲಿ ಮುಖ ಬಹಿರಂಗ😡😡 ಟಿವಿ ಗಳಲ್ಲಿ ಕುಳಿತು ಹಿಂದೂಗಳ ವಿರುದ್ಧ ಹಿಂದೂಧರ್ಮದ ವಿರುದ್ಧ ಬೊಗಳುತಿದ್ದ ನಾಯಿಯೇ ಮಾಂಸ ವ್ಯಾಪಾರಕ್ಕೆ ಇಳಿದ ಅಸಲಿ ದೃಶ್ಯ ಒಮ್ಮೆ ನೋಡಿ😡 ಇಂತಹ ಅಯೋಗ್ಯನನ್ನು ಪಕ್ಷದ ವಕ್ತಾರನಂತೆ ಬೆಳೆಸಿದ ಅಯೋಗ್ಯ ಸರ್ಕಾರದ ಅಧಿಕಾರಿಗಳೇ ಇವನ ನಾಯಿ ಮಾಂಸ ದಂದೇಯಲ್ಲಿ ಬಾಗಿಯಾಗಿರುವ ಅನುಮಾನವಿದೆ!! ಎಲ್ಲರೂ ಒಟ್ಟಾಗಿ ತನಿಖೆಗೆ ಆಗ್ರಹಿಸೋಣ” ಎಂಬ ಶೀರ್ಷಿಕೆಯನ್ನು ಬಳಸಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ಶನಿವಾರ ಸಂಗ್ರಹಿಸಿದ ಮಾಂಸದ ಮಾದರಿಗಳು ಮೇಕೆ ಮಾಂಸದ್ದಾಗಿದ್ದು, ಯಾವುದೇ ನಾಯಿ ಮಾಂಸವನ್ನು ಬೆರೆಸಲಾಗಿಲ್ಲ ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಟನ್ ಬೇಡಿಕೆಯನ್ನು ಪೂರೈಸಲು ರಾಜಸ್ಥಾನದಿಂದ ಮಾಂಸವನ್ನು ವಿಶೇಷವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಆಹಾರ ಸುರಕ್ಷತಾ ಆಯುಕ್ತ ಕೆ.ಶ್ರೀನಿವಾಸ್, “ನಾವು ನಡೆಸಿದ ಲ್ಯಾಬ್ ಪರೀಕ್ಷೆಗಳ ಪ್ರಕಾರ ಇದು ನಾಯಿ ಮಾಂಸವಲ್ಲ. ಇದು ಸಿರೋಹಿ ಎಂಬ ವಿಶೇಷ ಜಾತಿಯ ಮೇಕೆಯಾಗಿದ್ದು, ಇದು ರಾಜಸ್ಥಾನ ಮತ್ತು ಗುಜರಾತ್‌ನ ಕಚ್-ಭುಜ್ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಈ ಆಡುಗಳು ದೇಹದ ಮೇಲೆ ಕಲೆಗಳನ್ನು ಹೊಂದಿರುತ್ತವೆ ಮತ್ತು ಬಾಲವು ಸ್ವಲ್ಪ ಉದ್ದವಾಗಿರುತ್ತದೆ ಆದ್ದರಿಂದ ಅದು ನಾಯಿಯಂತೆ ಕಾಣುತ್ತದೆ. ಬೆಂಗಳೂರಿನ ಕೆಲವು ವ್ಯಾಪಾರಿಗಳು ಕೆಲವು ಸಮಯದಿಂದ ರಾಜಸ್ಥಾನದಿಂದ ಮೇಕೆ ಮಾಂಸವನ್ನು ತರುತ್ತಿದ್ದಾರೆ. ಮಟನ್ ಮತ್ತು ‘ಶೆವೊನ್’ ಪೂರೈಕೆಯ ಕೊರತೆಯಿಂದಾಗಿ, ಕೆಲವು ವ್ಯಾಪಾರಿಗಳು ಅದನ್ನು ಇತರ ರಾಜ್ಯಗಳಿಂದ ಪಡೆದು ಕೈಗೆಟುಕುವ ಬೆಲೆಗೆ ಇಲ್ಲಿ ಮಾರಾಟ ಮಾಡುತ್ತಾರೆ” ಎಂದು ಅವರು ಹೇಳಿದ್ದಾರೆ.

ಜಿಕೆವಿಕೆಯ ಪ್ರಾಣಿ ವಿಜ್ಞಾನದ ಮಾಜಿ ಪ್ರಾಧ್ಯಾಪಕ ಪ್ರೊ.ಬಿ.ಎಲ್.ಚಿದಾನಂದ ಮಾತನಾಡಿ, ಜನಪ್ರಿಯ ಕುರಿ ಪ್ರಭೇದಗಳಿಗಿಂತ ಭಿನ್ನವಾಗಿ, ಕರ್ನಾಟಕದಲ್ಲಿ ತನ್ನದೇ ಆದ ಮೇಕೆ ಪ್ರಭೇದಗಳಿಲ್ಲ. ಈ ಕಾರಣದಿಂದಾಗಿ, ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ‘ಶೆವೊನ್’ ನ 25% ರಿಂದ 30% ಕೊರತೆ ಇದೆ. ಅದೇ ಸಮಯದಲ್ಲಿ, ಬೆಂಗಳೂರು, ಕರ್ನಾಟಕದ ಇತರ ಜಿಲ್ಲೆಗಳೊಂದಿಗೆ, ಮಾಂಸದ ಅತಿದೊಡ್ಡ ಗ್ರಾಹಕವಾಗಿದೆ. ಈ ಅಂತರವನ್ನು ಕಡಿಮೆ ಮಾಡಲು ಮತ್ತು ಬೆಲೆ ಕೈಗೆಟುಕುವಿಕೆಯನ್ನು ಗಮನದಲ್ಲಿಟ್ಟುಕೊಂಡು, ವ್ಯಾಪಾರಿಗಳು ದೊಡ್ಡ ಪ್ರಮಾಣದ ಉತ್ಪಾದನೆ ಇರುವ ಇತರ ರಾಜ್ಯಗಳಿಂದ ಅಗ್ಗದ ತಳಿಯ ಚೆವೊನ್ ಅನ್ನು ಪಡೆಯುತ್ತಾರೆ ಎಂದು ಟೈಮ್ಸ್‌ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಮಾಹಿತಿ ಸಂಗ್ರಹಿಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆಯುಕ್ತ ಶ್ರೀನಿವಾಸ್, “ನಾವು ಪ್ರಸ್ತುತ 12 ವ್ಯಕ್ತಿಗಳಿಗೆ ಮಾಂಸ ಮಾರಾಟ ಮಾಡಲು ಪರವಾನಗಿ ನೀಡಿದ್ದೇವೆ. ಭೇಟಿ ನೀಡಿ ಮಾಹಿತಿ ನೀಡುವಂತೆ ನಾವು ಅವರನ್ನು ಕೇಳಿದ್ದೇವೆ. ಈ 12 ವ್ಯಕ್ತಿಗಳು ಇಂದು ಪಾಲಿಸದಿದ್ದರೆ, ನಾವು ನೋಟಿಸ್ ನೀಡುತ್ತೇವೆ. ಅವರು ವಿಚಾರಣೆಗೆ ಹಾಜರಾಗಲು ವಿಫಲವಾದರೆ, ಅವರ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು” ಎಂದಿದ್ದಾರೆ ಎಂದು ದ ಹಿಂದುಸ್ತಾನ್ ಗೆಜೆಟ್‌ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನೂ ಈ ಕುರಿತು ರಾಜಸ್ಥಾನದಿಂದ ಸರಬರಾಜಾಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಕೆ.ಶ್ರೀನಿವಾಸ್ ಅವರಿಂದ ಮಾಹಿತಿ ಪಡೆದು ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಅವುಗಳಲ್ಲಿ ಹಿಂದುಸ್ತಾನ್ ಟೈಮ್ಸ್‌ ಮತ್ತು ದ ಎಕನಾಮಿಕ್ ಟೈಮ್ಸ್‌ ವರದಿಯನ್ನು ನೀವಿಲ್ಲಿ ಓದಬಹುದು.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಅಕ್ರಮ ಮಾಂಸ ಮಾರಾಟ, ಗಲಭೆ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮತ್ತು ಕೊಲೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರ ವಿರುದ್ಧ ಮೂರನೇ ಎಫ್ಐಆರ್ ದಾಖಲಿಸಲಾಗಿದೆ.

ಅಬ್ದುಲ್ ರಜಾಕ್ ಅವರು “ಪುನೀತ್ ಕೆರೆಹಳ್ಳಿ ತಂಡ ರೋಲ್‌ಕಾಲ್‌ ಮಾಡಲು ಮುಂದಾದಾಗ ಅದಕ್ಕೆ ನಾವು ಸ್ಪಂದಿಸಲಿಲ್ಲ, ಈ ಕಾರಣಕ್ಕಾಗಿ ನಮ್ಮ ಮೇಲೆ ಮೇಲೆ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಕಳೆದ 14 ವರ್ಷಗಳಿಂದ ಮಾಂಸದ ವ್ಯಾಪಾರದಲ್ಲಿ ನಿರತನಾಗಿದ್ದು. ಇಂತಹ ಯಾವುದೇ ನೀಚ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.

ಇನ್ನೂ ರಾಜಸ್ಥಾನದ ಕುರಿ ತಳಿಗಳ ಕುರಿತು ಹುಡುಕಿದಾಗ, ಉದ್ದನೆಯ ಬಾಲವಿರುವ ಕುರಿ ಮತ್ತು ಮೇಕೆಗಳ ಜಾತಿಯ ಕುರಿಗಳು ಇರುವುದು ಪತ್ತೆಯಾಗಿದೆ. ಯೂಟೂಬ್‌ನಲ್ಲಿ ಆಸಿಂ ಶೈಕ್ ಎಂಬುವವರು ಈ ವೀಡಿಯೋ ಹಂಚಿಕೊಂಡಿದ್ದು. ಉದ್ದನೆಯ ಬಾಲದ ಲಮ್‌-ದುಮ್ ತಳಿಗಳ ಕುರಿತು ಅವುಗಳ ಬೆಲೆಗಳ ಕುರಿತು ವೀಕ್ಷಕರಿಗೆ ವಿವರಿಸಿದ್ದಾರೆ.

ಹಾಗೆಯೇ ರಾಜಸ್ಥಾನದ ಬೋಲರಾಮ್ ಕರ್ಮಾವತ್ ಎಂಬುವವರು ಸಹ ಯೂಟೂಬ್‌ನಲ್ಲಿ ಉದ್ದ ಬಾಲ ಹೊಂದಿರುವ ಕುರಿಯನ್ನು ಛತ್ತಿಸ್ಘಡದ ತಳಿ ಎಂದು ಹೆಸರಿಸಿದ್ದಾರೆ ಮತ್ತು ಮಾರಾಟಕ್ಕೆ ಸಂಪರ್ಕಿಸಬಹುದು ಎಂದು ತಮ್ಮ ಪೋನ್ ನಂಬರ್ ನೀಡಿದ್ದಾರೆ.

ನಮ್ಮ ದೇಶದ ಕುರಿ ಮತ್ತು ಮೇಕೆ ತಳಿಗಳ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ ಭಾರತವು 40ಕ್ಕೂ ಹೆಚ್ಚು ತಳಿಯ ಕುರಿಗಳನ್ನು ಮತ್ತು 20ಕ್ಕೂ ಹೆಚ್ಚು ತಳಿಯ ಮೇಕೆಗಳನ್ನು ಹೊಂದಿದೆ. ಮತ್ತು ಪ್ರತೀ ರಾಜ್ಯಗಳಿಗೂ ತನ್ನದೇ ಆದ ನಾನಾ ಬಗೆಯ ಪ್ರತ್ಯೇಕ ತಳಿಗಳಿವೆ. ಇವುಗಳಲ್ಲಿ ಅನೇಕವು ಉದ್ದಬಾಲದ ತಳಿಯ ಕುರಿಗಳು ಸಹ ಇವೆ.

ಆದ್ದರಿಂದ ಸಧ್ಯ ಪುನೀತ್ ಕೆರೆಹಳ್ಳಿ ಮತ್ತು ಕೆಲವು ಹಿಂದುಪರ ಸಂಘಟನೆಗಳ ಆರೋಪ ನಿಜವೆಂದು ಸಾಭೀತಾಗಿಲ್ಲ ಮತ್ತು ಇದು ದ್ವೇಷಪೂರಿತ ಸುಳ್ಳು ಆರೋಪವಾಗಿದೆ ಎಂದು ತಿಳಿದು ಬಂದಿದೆ.


ಇದನ್ನು ಓದಿ: ಭಾರತದಲ್ಲಿ ಗೋಮಾಂಸ ರಪ್ತು ಮಾಡುವ ಪ್ರಮುಖ ಕಂಪನಿಗಳಲ್ಲಿ 4 ಹಿಂದುಗಳ ಒಡೆತನದವುಗಳಾಗಿವೆ


ವೀಡಿಯೋ ನೋಡಿ: ಮುಸ್ಲಿಂ ವ್ಯಕ್ತಿ ಕಲ್ಲಂಗಡಿಗೆ ರಾಸಾಯನಿಕ ಹಾಕಿ ಸಿಕ್ಕಿಬಿದ್ದಿದ್ದಾನೆ ಎಂದು ಹಂಚಿಕೊಳ್ಳುತ್ತಿರುವುದು ಜಾಗೃತಿ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *