Fact Check | ಯುವಕ ಪಾನೀಯದ ಬಾಟೆಲ್‌ನಲ್ಲಿ ಉಗುಳಿದ ಹಳೆಯ ವಿಡಿಯೋ ಟೆಕ್ಸಾಸ್‌ದು

“ಮುಸ್ಲಿಮರ ಆಹಾರದ ಜಿಹಾದ್ ಎಲ್ಲಾ ದೇಶಗಳಲ್ಲೂ ಹೆಚ್ಚಾಗುತ್ತಲೇ ಇದೆ. ಈ ವಿಡಿಯೋ ನೋಡಿ ಇಲ್ಲಿ ಯುವಕ ಜ್ಯೂಸ್‌ನ ಬಾಟಲ್ ಗೆ ಉಗುಳಿದ್ದಾನೆ. ಆ ಮೂಲಕ ಯಾರೋ ಕುಡಿಯುವ, ತಿನ್ನುವ ಆಹಾರಕ್ಕೆ ಮುಸಲ್ಮಾನರು ಹೇಗೆ ವಿಕೃತಿಯನ್ನು ಮೆರೆಯುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಮುಸಲ್ಮಾನರ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ತಿನ್ನುವ ಹಿಂದುಗಳಿಗೆ ಇದು ಅರ್ಥವಾಗುವುದಿಲ್ಲ.” ಎಂದು ವಿಡಿಯೋವೊಂದನ್ನು ಹಲವು ಟಿಪ್ಪಣಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತದೆ.

ಈ ಬಗ್ಗೆ ಸುದರ್ಶನ್‌ ಟಿವಿ ವರದಿ ಮಾಡಿದ್ದರಿಂದ ಹಾಗೂ ಪ್ರಮುಖವಾಗಿ ವಿವಿಧ ಟಿಪ್ಪಣಿಗಳಲ್ಲಿ ಮುಸಲ್ಮಾನರಿಂದ ಈ ಕೃತ್ಯ ಎಂಬುದು ಉಲ್ಲೇಖವಾದ್ದರಿಂದ, ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಂಡು ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಕೆಲವರು ಮುಸಲ್ಮಾನರ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸುವ ಕುರಿತು ಮಾತನಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋದ ಅಸಲಿಯತ್ತನ್ನು ಈ ಪ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌  ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ  ನಮಗೆ “Texas teen charged with felony for spitting in Arizona tea bottle then returning it to supermarket shelf” ಎಂಬ ಶೀರ್ಷಿಕೆಯಲ್ಲಿ  18 ಜುಲೈ 2019 ರಂದು ಎಬಿಸಿ ಸುದ್ದಿ ತಾಣ ಪ್ರಕಟಿಸಿದ ವರದಿಯೊಂದು ಪತ್ತೆಯಾಗಿತ್ತು.

ABC ಪ್ರಕಟಿಸಿದ ವರದಿ
                                                                                 ABC ಪ್ರಕಟಿಸಿದ ವರದಿ

ಈ ವರದಿಯ ಪ್ರಕಾರ ಈ ಘಟನೆ ಅಮೆರಿಕದ ಟೆಕ್ಸಾಸ್‌ ಬಳಿ ಇರುವ ಒಡೆಸ್ಸಾದಲ್ಲಿ ನಡೆದಿದ್ದು, 15 ವರ್ಷದ ಬಾಲಕ ಸೂಪರ್‌ ಮಾರ್ಕೇಟ್‌ವೊಂದರಲ್ಲಿ ಇರಿಸಲಾಗಿದ್ದ ಪಾನೀಯದ ಬಾಟಲಿಗೆ ಉಗಿದು, ಬಳಿಕ ಅದನ್ನು ತೆಗೆದ ಜಾಗದಲ್ಲೇ ಇರಿಸಿದ್ದ, ಈ ಘಟನೆಯ ನಂತರ ಪೊಲೀಸರು ಕೂಡ ಅದೇ ಸೂಪರ್‌ ಮಾರ್ಕೇಟ್‌ಗೆ ತೆರಳಿ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲನೆ ನಡೆಸಿದ್ದು, ಅದೇ ಬಾಲಕ ಉಗುಳಿರುವುದು ಪತ್ತೆಯಾಗಿದೆ. ಇದಾದ ನಂತರ ಬಾಲಕನಿಂದ ವಿವರಣೆ ಪಡೆದ ಪೊಲೀಸರು ಆತನನ್ನು ಎಕ್ಟರ್ ಕೌಂಟಿ ಯೂತ್ ಸೆಂಟರ್‌ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಭಾರತದ ಸುದ್ದಿ ವಾಹಿನಿಗಳು ಕೂಡ ವರದಿ ಮಾಡಿದ್ದು, ಅವುಗಳು ಕೂಡ ಇದೇ ಅಂಶವನ್ನು ಉಲ್ಲೇಖಿಸಿವೆ.

ಇಂಡಿಯಾ ಟುಡೆ ವರದಿ
                                                                              ಇಂಡಿಯಾ ಟುಡೆ ವರದಿ

ಒಟ್ಟರೆಯಾಗಿ ಹೇಳುವುದಾದರೆ ಕಳೆದ ಕೆಲವು ದಿನಗಳಿಂದ ಮುಸಲ್ಮಾನರು ಆಹಾರದ ಜಿಹಾದ್ ಅನ್ನು ಆರಂಭಿಸಿದ್ದಾರೆ ಮತ್ತು ಆಹಾರಗಳಿಗೆ ಉಗುಳುತ್ತಿದ್ದಾರೆ ಎಂಬ ಸಾಲು ಸಾಲು ವಿಡಿಯೋಗಳು ಸುಳ್ಳು ನಿರೂಪಣೆಯೊಂದಿಗೆ ಬರುತ್ತಿವೆ. ಅದರಂತೆಯೇ ಈ ವಿಡಿಯೋ ಕೂಡ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದ್ದು ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ  ಮುನ್ನ ಎಚ್ಚರವನ್ನು ವಹಿಸಿ


ಇದನ್ನೂ ಓದಿ : Fact Check: ರಸ್ತೆಯಲ್ಲಿ ನಮಾಜ್‌ ಸಲ್ಲಿಸಿದ ಮುಸ್ಲಿಂ ಇಮಾಮ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *