Fact Check | ಮ್ಯಾನ್ಮಾರ್‌ನಲ್ಲಿ ಅಮೆರಿಕದ ಸೈನಿಕರಿಂದ ಮಣಿಪುರದ ಕುಕಿಗಳು ತರಬೇತಿ ಪಡೆದಿದ್ದಾರೆ ಎಂಬುದು ಸುಳ್ಳು

ಮಣಿಪುರದಲ್ಲಿ ಗಲಭೆ ಆರಂಭವಾಗಿ ಅಲ್ಲಿನ ಜನರ ಬದುಕು ನರಕವಾಗಿ ಹೋಗಿದೆ. ಇದರ ನಡುವೆ ಮಣಿಪುರದ ಸಮುದಾಯಗಳ ನಡುವೆ ಮತ್ತೆ ಬೆಂಕಿ ಹಚ್ಚುವ ಕೆಲಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಇದೀಗ ಅಮೆರಿಕದ ಮಾಜಿ ಸೈನಿಕರಿಂದ ಮಣಿಪುರದ ಕುಕಿಗಳು ತರಬೇತಿಯನ್ನು ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕುಕಿಗಳ ವಿರುದ್ಧ ಸಾಕಷ್ಟು ಮಂದಿ ಆರೋಪವನ್ನು ಕೂಡ ಮಾಡುತ್ತಿದ್ದಾರೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿನ ಫೋಟೋಗಳನ್ನು ಗಮನಿಸಿದಾಗ, ಪೋಟೋದಲ್ಲಿ ಕಂಡು ಬಂದ ಹಲವು ಮಂದಿ ಸೈನಿಕರ ಸಮವಸ್ತ್ರಕ್ಕೆ ಹೋಲಿಕೆಯಾಗುವ ಉಡುಪುಗಳನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಸಾಕಷ್ಟು ಮಂದಿ ವೈರಲ್‌ ಪೋಸ್ಟ್‌ ಅನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಫೋಟೋ ಕುರಿತು ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆಯನ್ನು ನಡೆಸಿತು. ಈ ವೇಳೆ ನಮಗೆ ಫೇಸ್‌ಬುಕ್‌ನಲ್ಲಿ ಮೂಲತಃ ಹಂಚಿಕೊಂಡ ವಿಡಿಯೋವೊಂದು ಪತ್ತೆಯಾಗಿದೆ. ಈ ವಿಡಿಯೋವನ್ನು ಮ್ಯಾನ್ಮಾರ್‌ನ ಜನಾಂಗೀಯ ಗುಂಪು ವಾಸಿಸುವ ಕರೆನ್ ರಾಜ್ಯವಾದ ಕೌಥೂಲಿಯಿಂದ ಕಂಟೆಂಟ್ ರಚನೆಕಾರರಾದ ವಾ ಫಿಶ್ ಪೇಸ್ಟ್ ಹಂಚಿಕೊಂಡಿರುವುದರಿಂದ ಇದು ಅಧಿಕೃತ ವಿಡಿಯೋ ಎಂಬುದು ನಮಗೆ ಖಚಿತವಾಗಿದೆ.

ಮ್ಯಾನ್ಮಾರ್‌ನ ಕರೆನ್ ನ್ಯಾಷನಲ್ ಯೂನಿಯನ್ (ಕೆಎನ್‌ಯು) ನ ಸಶಸ್ತ್ರ ವಿಭಾಗವಾದ ಕರೆನ್ ನ್ಯಾಷನಲ್ ಲಿಬರೇಶನ್ ಆರ್ಮಿ (ಕೆಎನ್‌ಎಲ್‌ಎ) ಗೆ ಲಿಂಕ್ ಮಾಡಲಾದ ಅವರ ಫೇಸ್‌ಬುಕ್ ಪುಟದಲ್ಲಿ ನಾವು ಹಲವಾರು ವೀಡಿಯೊಗಳನ್ನು ಕಂಡುಕೊಂಡಿದ್ದೇವೆ.ಪೋಸ್ಟ್‌ನಲ್ಲಿ ಮಣಿಪುರದ ಕುಕಿ ಸಮುದಾಯದ ಬಗ್ಗೆ ಏನನ್ನೂ ಉಲ್ಲೇಖಿಸಲಾಗಿಲ್ಲ ಬದಲಿಗೆ ಅದು ಅವರನ್ನು KNLA ಮತ್ತು ಇತರ ಸಾಮಾಜಿಕ ಕಾರ್ಯಕರ್ತರೊಂದಿಗೆ ಇದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಈ ವಿಡಿಯೋದಲ್ಲಿ ಕಂಡು ಬರುವವರು ಮಣಿಪುರದವರಲ್ಲಿ ಬದಲಿಗೆ ಅವರು ಮ್ಯಾನ್ಮಾರ್‌ನ ಕರೆನ್ ನ್ಯಾಷನಲ್ ಲಿಬರೇಶನ್ ಆರ್ಮಿಯ ಸದಸ್ಯರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್‌ ವಿಡಿಯೋವನ್ನು ಬಳಸಿಕೊಂಡು ಸಾಕಷ್ಟು ಮಂದಿ ಮಣಿಪುರದ ಸೈನಿಕರು ಅಮೆರಿಕದ ಸೈನಿಕರಿಂದ ತರಬೇತಿ ಪಡೆದುಕೊಂಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಆದರೆ ವಿಡಿಯೋ ಮತ್ತು ಫೋಟೋಗಳಲ್ಲಿ ಕಂಡು ಬಂದ ವ್ಯಕ್ತಿಗಳಲ್ಲಿ ಯಾರೂ ಮಣಿಪುರಕ್ಕೆ ಸೇರಿದವರಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ  ಮುನ್ನ ಎಚ್ಚರವಹಿಸಿ.


ಇದನ್ನೂ ಓದಿ : Fact Check: 2015 ರಲ್ಲಿ ಮುಂಬೈನ ಸ್ಥಳೀಯ ರೈಲು ಪ್ಲಾಟ್ಫಾರ್ಮ್‌ಗೆ ಡಿಕ್ಕಿ ಹೊಡೆದ ವೀಡಿಯೊವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *