Fact Check | ಶಾಹಿದ್ ಮಲಿಕ್ ಇಂಗ್ಲೆಂಡ್‌ನ ಹೊಸ ನ್ಯಾಯ ಮಂತ್ರಿ ಎಂಬುದು ಸುಳ್ಳು!

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಪ್ರಚಂಡ ಜಯವನ್ನು ದಾಖಲಿಸುವುದರೊಂದಿಗೆ ಕೀರ್ ಸ್ಟಾರ್ಮರ್ ಹೊಸ ಯುಕೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇದೀಗ, ಒಬ್ಬ ವ್ಯಕ್ತಿ ತನ್ನನ್ನು ತಾನು ‘ನ್ಯಾಯಾಂಗ ಮಂತ್ರಿ’ ಎಂದು ಗುರುತಿಸಿಕೊಳ್ಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇವರು ತಮ್ಮ ವಿಡಿಯೋದಲ್ಲಿ ” ನಾನು ಈಗ ನ್ಯಾಯಾಂಗ ಸಚಿವನಾಗಿದ್ದರೂ.. ಮೂರು ವಾರಗಳ ಹಿಂದೆ ನಾನು ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವನಾಗಿದ್ದೆ.. ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವನಾಗಿ ನನ್ನ ಕೆಲಸವು ಮುಂದಿನ ಮೂರು ವರ್ಷಗಳಲ್ಲಿ ಯುಕೆ, ಬಾಂಗ್ಲಾದೇಶಕ್ಕೆ ಸಹಾಯ ಮಾಡುತ್ತದೆ. 370 ಮಿಲಿಯನ್ ಪೌಂಡ್ಸ್, ಪಾಕಿಸ್ತಾನ್ 480 ಮಿಲಿಯನ್ ಪೌಂಡ್ಸ್, ಪ್ಯಾಲೆಸ್ಟೈನ್ 243 ಮಿಲಿಯನ್ ಪೌಂಡ್ಸ್‌ ನೀಡಲಿದೆ” ಎಂದು ಈತ ಹೇಳಿರುವ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಮುಂದುವರೆದು ಈತ “1997 ರಿಂದ ಈ ದೇಶದಲ್ಲಿ ಮುಸ್ಲಿಮರ ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ. 1997 ರಲ್ಲಿ ನಾವು ನಮ್ಮ ಮೊದಲ ಮುಸ್ಲಿಂ ಸಂಸದರನ್ನು ಹೊಂದಿದ್ದೇವೆ, 2001 ರಲ್ಲಿ ನಾವು ಇಬ್ಬರು ಮುಸ್ಲಿಂ ಸಂಸದರನ್ನು ಹೊಂದಿದ್ದೇವೆ…  2014 ರಲ್ಲಿ ನಾವು 16 ಮುಸ್ಲಿಂ ಸಂಸದರನ್ನು ಹೊಂದಿದ್ದೇವೆ. ಈ ದರದಲ್ಲಿ ಇಡೀ ಸಂಸತ್ತು ಮುಸ್ಲಿಮರದ್ದಾಗಲಿದೆ. ಆದರೆ ನಾವು ನಾಲ್ಕು ಮುಸ್ಲಿಂ ಸಂಸದರನ್ನು ಹೊಂದಿದ್ದೇವೆ ಎಂದು ನಿಮಗೆ ತಿಳಿದಿದೆ. ಸಂಸತ್ತಿನಲ್ಲಿ 20 ಮುಸ್ಲಿಂ ಸಂಸದರು ಇರಬೇಕು ಮತ್ತು ಇನ್ಶಾ ಅಲ್ಲಾಹ್ ಶೀಘ್ರದಲ್ಲೇ ನಾವು ಅದನ್ನು ನೋಡುತ್ತೇವೆ .. ”ಎಂದು ಹೇಳಿಕೆಯನ್ನು ನೀಡಿದ್ದಾನೆ ಇದನ್ನೇ ಬಳಸಿಕೊಂಡು ಹಲವರು ಈ ಹೊಸ ನ್ಯಾಯ ಸಚಿವನಿಂದ ಇಂಗ್ಲೆಂಡ್‌ ಅಪಾಯವನ್ನು ಎದುರಿಸಲಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. 

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವಂತೆ ಈತ ಇಂಗ್ಲೆಂಡ್‌ನ ನೂತನ ನ್ಯಾಯ ಮಂತ್ರಿಯೇ? ಹಾಗೂ ಈತನ ಹಿನ್ನೆಲೆ ಏನು? ಎಂಬುದನ್ನು ಪತ್ತೆ ಹಚ್ಚಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆ. ಈ ವೇಳೆ ನಮಗೆ UK ಸಂಸತ್ತಿನ ವೆಬ್‌ಸೈಟ್‌ನಲ್ಲಿನ ಶಾಹಿದ್‌ ಅವರ ಪ್ರೋಫೈಲ್‌ ಕಂಡು ಬಂದಿದ್ದು, ಅದರಲ್ಲಿ ಶಾಹಿದ್‌ ಮಲಿಕ್‌ ಅವರು ಲೇಬರ್ ಪಕ್ಷದ  ಮಾಜಿ ನಾಯಕ ಎಂದು ಉಲ್ಲೇಖವಾಗಿರುವುದು ಕಂಡು ಬಂದಿದೆ. 

ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದಾಗ ಶಾಹಿದ್‌ ಮಲಿಕ್‌ ಜುಲೈ 2, 2007 ರಿಂದ ಅಕ್ಟೋಬರ್ 5, 2008 ರವರೆಗೆ ಅಂತರರಾಷ್ಟ್ರೀಯ ಅಭಿವೃದ್ಧಿ ಇಲಾಖೆಯಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿ (ಕಿರಿಯ ಸಚಿವರು) ಆಗಿ ಸೇವೆ ಸಲ್ಲಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಅಕ್ಟೋಬರ್ 5, 2008 ರಿಂದ ಮೇ 15, 2009 ಮತ್ತು ಜೂನ್ 9, 2009 ರಿಂದ ಮೇ 6, 2010 ರವರೆಗೆ ಕ್ರಮವಾಗಿ ನ್ಯಾಯ ಸಚಿವಾಲಯ ಮತ್ತು ಸಮುದಾಯಗಳು ಮತ್ತು ಸ್ಥಳೀಯ ಸರ್ಕಾರ (ಯೋಜನೆ) ಇಲಾಖೆಯಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿದ್ದರು ಎಂಬ ಮಾಹಿತಿ ಲಭ್ಯಾವಾಗಿದೆ.

ಇನ್ನು, ಬ್ರಿಟನ್‌ನ ಮಂತ್ರಿ ಸಂಹಿತೆಯನ್ನು ಉಲ್ಲಂಘಿಸಿ ಅವರು ಮನೆಗಾಗಿ ಮಾರುಕಟ್ಟೆಗಿಂತ ಕಡಿಮೆ ಬಾಡಿಗೆಯನ್ನು ಪಾವತಿಸಿದ್ದಾರೆ ಎಂಬ ಆರೋಪಗಳ ವಿಚಾರಣೆ ಬಾಕಿಯಿದ್ದ ಕಾರಣ, ಮೇ 2009 ರಲ್ಲಿ ಕಿರಿಯ ನ್ಯಾಯ ಸಚಿವ ಸ್ಥಾನದಿಂದ ಕೆಳಗಿಳಿದಿದ್ದರು,  ವಿಚಾರಣೆ ತೆರವುಗೊಂಡ ನಂತರ ಜೂನ್ 2009 ರಲ್ಲಿ ಮಲಿಕ್ ಯುಕೆ ಸರ್ಕಾರದಲ್ಲಿ ಕಿರಿಯ ಸಮುದಾಯಗಳ ಸಚಿವರಾಗಿ ಪುನಃ ಸೇರಿಕೊಂಡರು. ಆದಾಗ್ಯೂ, ಅವರು 2010 ರ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಅಭ್ಯರ್ಥಿ ವಿರುದ್ಧ ಡ್ಯೂಸ್‌ಬರಿಯಲ್ಲಿ ಸೋತರು.

ಇನ್ನು ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಿದಾಗ, ವೈರಲ್ ವಿಡಿಯೋ ಜೊತೆಗಿರುವ ಪಠ್ಯದಲ್ಲಿ ಹೇಳಿಕೊಂಡಂತೆ ಅವರು ಯುಕೆ ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವರಾಗಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ. ಇದಲ್ಲದೆ, ವೈರಲ್ ವೀಡಿಯೊವು ವಾಸ್ತವವಾಗಿ 2008 ರ ಗ್ಲೋಬಲ್ ಪೀಸ್ ಅಂಡ್ ಯೂನಿಟಿ ಈವೆಂಟ್‌ನಲ್ಲಿ ಮಲಿಕ್ ಅವರು ಮಾತನಾಡಿದ ವಿಡಿಯೋದ ಆಯ್ದ ಭಾಗಗಳಾಗಿವೆ. ಹೀಗಾಗಿ ವೈರಲ್‌ ವಿಡಿಯೋ ಸುಳ್ಳು ಪ್ರತಿಪಾದನೆಯಿಂದ ಕೂಡಿದೆ ಎಂಬುದು ಸಾಭೀತಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ 2008ರ ಆಯ್ದ ಭಾಗಗಳಾಗಿವೆ. ಇದನ್ನೆ ಬಳಸಿಕೊಂಡು ಸುಳ್ಳು ಹರಡಲಾಗುತ್ತಿದೆ. ಈ ಎಲ್ಲಾ ಅಂಶಗಳಿಂದ ಶಾಹಿದ್‌ ಮಲಿಕ್‌ ಅವರು ಯುಕೆ ಹೊಸ ಸರ್ಕಾರದ ಮಂತ್ರಿ ಅಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ದೆಹಲಿಯಲ್ಲಿ ‘ರಾಮ್ ಕಚೋರಿ’ ಎಂಬ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಅಂಗಡಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *