ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಈ ಬಾರಿಯ ಅಧ್ಯಕ್ಷೀಯ ಸ್ಥಾನದ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಂತೆ ಕಮಲಾ ಹ್ಯಾರಿಸ್ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಕಮಲಾ ಹ್ಯಾರಿಸ್ ಅವರಿಗೆ ಎಷ್ಟರ ಮಟ್ಟಿಗೆ ಬೆಂಬಲ ವ್ಯಕ್ತವಾಗುತ್ತಿದೆಯೋ ಅಷ್ಟರ ಮಟ್ಟಿಗೆ ಅವರಿಗೆ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆ ಅವರ ವಿರುದ್ಧ ಹಲವು ರೀತಿಯ ಸುಳ್ಳು ಸುದ್ದಿಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ.
ಈಗ ಅದೇ ರೀತಿಯಲ್ಲಿ ಲೈಂಗಿಕ ಕಿರುಕುಳ, ಮಾನವ ಕಳ್ಳಸಗಾಟದಂತಹ ಅಪರಾಧಿಯಾಗಿದ್ದ ಜೆಫ್ರಿ ಎಪ್ಸ್ಟೀನ್ ಜೊತೆ ಕಮಲಾ ಹ್ಯಾರಿಸ್ ಇರುವ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಕಮಲಾ ಹ್ಯಾರಿಸ್ ಅವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡುವಂತೆ ನೋಡಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ಕೂಡ ಹಲವರು ಹಂಚಿಕೊಂಡಿದ್ದು, ಈ ಫೋಟೋವನ್ನು ವೈರಲ್ ಮಾಡಿ, ಲಕ್ಷಾಂತರ ಜನ ಅಮೆರಿಕದ ಮತದಾರರಿಗೆ ತಲುಪಲಿ ಎಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪಗಳನ್ನು ಹೊತ್ತಿದ್ದ ವ್ಯಕ್ತಿಯೊಬ್ಬನೊಂದಿಗೆ ಕಮಲಾ ಹ್ಯಾರಿಸ್ ಎಂಬ ಫೋಟೋ ಹಲವು ಗೊಂದಲಗಳನ್ನು ಉಂಟು ಮಾಡುತ್ತಿರುವುದರಿಂದ ಈ ಬಗ್ಗೆ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆಯನ್ನು ನಡೆಸಿದೆ. ಈ ಪರಿಶೀಲನೆಗಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆ. ಈ ವೇಳೆ ನಮಗೆ ಈ ಗಂಭೀರ ಆರೋಪವನ್ನು ಹೊತ್ತಿದ್ದ ಜೆಫ್ರಿ ಎಪ್ಸ್ಟೀನ್ 10 ಆಗಸ್ಟ್ 2019ರಂದು ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ತಿಳಿದು ಬಂದಿದೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಗೆಟ್ಟಿ ಇಮೇಜಸ್‌ನ ವೆಬ್‌ಸೈಟ್‌ನಲ್ಲಿ ವೈರಲ್ ಫೋಟೋದಲ್ಲಿನ ಉಡುಪು ಹಾಗೂ ಹಿನ್ನೆಲೆ ಸ್ಥಳಕ್ಕೆ ಹೋಲಿಕೆಯಾಗುವ ಫೋಟೋವೊಂದು ಕಂಡು ಬಂದಿದೆ. ಗೆಟ್ಟಿ ಇಮೇಜ್‌ನಲ್ಲಿ ಪತ್ತೆಯಾದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಫೋಟೋವನ್ನು ತೆಗೆದುಕೊಂಡು ವೈರಲ್ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ.
ಇನ್ನು ಗೆಟ್ಟಿ ಇಮೇಜ್‌ನಲ್ಲಿ ಕಂಡು ಬಂದ ವ್ಯಕ್ತಿ ಯಾರು ಎಂದು ವೆಬ್‌ಸೈಟ್‌ನಲ್ಲೇ ಮಾಹಿತಿಯನ್ನ ನೀಡಲಾಗಿದ್ದು, ಈ ಮಾಹಿತಿಯ ಪ್ರಕಾರ ಈ ಫೋಟೋವನ್ನು 17 ಸೆಪ್ಟಂಬರ್ 2015ರಲ್ಲಿ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ. ಈ ಫೋಟೋದಲ್ಲಿ ಇರುವವರು ಕಮಲಾ ಹ್ಯಾರಿಸ್ ಅವರ ಪತಿ ಡೌಗ್ಲಾಸ್ ಎಂಹಾಫ್ . ಎಂಹಾಫ್ ಮತ್ತು ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ದಿ ಬ್ರಾಡ್ ಮ್ಯೂಸಿಯಂ ಬ್ಲ್ಯಾಕ್ ಟೈ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋದಾಗ ಈ ಫೋಟೋವನ್ನು ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಕಮಲಾ ಹ್ಯಾರಿಸ್ ಅವರು ಲೈಂಗಿಕ ಕಿರುಕುಳದ ಅಪರಾಧಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದು ಸುಳ್ಳು. ಕಮಲಾ ಹ್ಯಾರಿಸ್ ಅವರು ಅವರ ಪತಿಯೊಂದಿಗೆ ತೆಗೆದ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ವಿವಿಧ ಪರಿಶೀಲನೆಗಳಿಂದ ಸಾಬಿತಾಗಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check: ನರೇಂದ್ರ ಮೋದಿ ಅಮೆರಿಕ ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.