ಸಿಖ್ ವ್ಯಕ್ತಿಯ ಚಿತ್ರವನ್ನು ಒಳಗೊಂಡ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅವರು ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ INA ( ಇಂಡಿಯನ್ ನ್ಯಾಷನಲ್ ಆರ್ಮಿ)ಯಲ್ಲಿ ಸೇವೆ ಸಲ್ಲಿಸಿದ್ದರು ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದೊಂದಿಗೆ ಟಿಪ್ಪಣಿಯನ್ನು ನೋಡಿದ ಹಲವರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
आओ कोफीरो, में तुमको बताऊ, आज़ादी कैसे आई थी 😱😭 pic.twitter.com/HD4GJ3CwJr
— THE PUNCHAR MAN 😎 (@panchar_men) July 11, 2024
ಇನ್ನೂ ಕೆಲವರು ಈ ಫೋಟೋದೊಂದಿಗೆ ವರ್ಣ ರಂಜಿತವಾಗಿ ಟಿಪ್ಪಣಿಯನ್ನು ಬರೆಯುತ್ತಿದ್ದಾರೆ. ಆ ಟಿಪ್ಪಣಿಯಲ್ಲಿ “ಇವರು ಸರ್ದಾರ್ ಮೋಹನ್ ಸಿಂಗ್.. ಎರಡನೇ ಮಹಾಯುದ್ಧದಲ್ಲಿ ಜರ್ಮನಿಗಾಗಿ ಹೋರಾಡಿದ್ದರು, ಯುದ್ಧದ ನಂತರ ಹಿಟ್ಲರ್ ತನಗೆ ಬಹುಮಾನ ನೀಡಲು ಬಯಸಿದಾಗ, ಭಾರತವನ್ನು ವಿಮೋಚನೆಗೊಳಿಸಲು ಅವರು ಶಸ್ತ್ರಾಸ್ತ್ರಗಳನ್ನು ಕೇಳಿದ್ದರು, ನಂತರ ಆ ಶಸ್ತ್ರಾಸ್ತ್ರಗಳನ್ನು ಆಜಾದ್ ಹಿಂದ್ ಫೌಜ್‌ಗಾಗಿ ಬಳಸಿದರು. ಸರ್ದಾರ್ ಮೋಹನ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಜನ ಅಂತಿಮವಾಗಿ ಮರೆತುಬಿಡುತ್ತಾರೆ” ಎಂದು ಕತೆಯೊಂದನ್ನು ವೈರಲ್ ಪೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಪಂಜಾಬ್‌ನ ಶಾಲೆಯೊಂದರ ಬ್ಲಾಗ್‌ನಲ್ಲಿ ಇದೇ ವೈರಲ್ ಫೋಟೋ ಪತ್ತೆಯಾಯಿತು. ಆ ಬ್ಲಾಗ್ ಪ್ರಕಾರ ಈ ಚಿತ್ರ ಪಟಿಯಾಲಾದ ಮಾಡರ್ನ್ ಸೀನಿಯರ್ ಸೆಕೆಂಡರಿ ಶಾಲೆಯ ಸಂಸ್ಥಾಪಕ ಸರ್ದಾರ್ ಮೋಹನ್ ಸಿಂಗ್ ಅವರ ಚಿತ್ರವಾಗಿದೆ.
ಸರ್ದಾರ್ ಮೋಹನ್ ಸಿಂಗ್ ಅವರು, ಬ್ಯಾಂಕಿಂಗ್ ಉದ್ಯಮದಲ್ಲಿ ಹಲವು ವರ್ಷಗಳ ಕಾಲ ಕಾರ್ಯವನ್ನು ನಿರ್ವಹಿಸಿದ್ದರು, ಅದೇ ರೀತಿಯಲ್ಲಿ ವಿವಿಧ ಬ್ಯಾಂಕುಗಳೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ತಿಳಿದುಬಂದಿದ್ದು, ಇದಾದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಶಾಲೆಯನ್ನು ಸ್ಥಾಪಿಸಿದರು ಎಂದು ಅವರ ಬ್ಲಾಗ್‌ನಲ್ಲಿ ಅವರ ಜೀವನಚರಿತ್ರೆ ಕುರಿತು ಉಲ್ಲೇಖಿಸಿರುವುದನ್ನುನ ಕಂಡುಕೊಂಡಿದ್ದೇವೆ. ಇನ್ನು ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಕುರಿತು ಯಾವುದೇ ವರದಿಗಳು ಕೂಡ ನಮಗೆ ಕಂಡು ಬಂದಿಲ್ಲ.
ಇನ್ನು ಕೆಲವೊಂದು ವೈರಲ್ ಪೋಸ್ಟ್‌ಗಳಲ್ಲಿ ಮೋಹನ್ ಸಿಂಗ್ ಐಎನ್‌ಎ ಅಲ್ಲಿ ಕಾರ್ಯ ನಿರ್ವಹಿಸಿದರು ಎಂಬ ಉಲ್ಲೇಖವಿದೆ. ಹೀಗಾಗಿ ಈ ಕುರಿತು ಪರಿಶೀಲನೆ ನಡೆಸಿದಾಗ ಭಾರತೀಯ ರಾಷ್ಟ್ರೀಯ ಸೇನೆ (INA) ಮತ್ತು ಸುಭಾಷ್ ಚಂದ್ರ ಬೋಸ್ ಜೊತೆ ಕೆಲಸ ಮಾಡಿದ ಇನ್ನೊಬ್ಬ ಜನರಲ್ ಮೋಹನ್ ಸಿಂಗ್ ಇದ್ದರು ಎಂಬುದು ತಿಳಿದು ಬಂದಿದೆ. ಜನರಲ್ ಮೋಹನ್ ಸಿಂಗ್ ಅವರು ಪ್ರಮುಖ INA ನಾಯಕರಾಗಿದ್ದರು, ಅದರ ಮೊದಲ ಜನರಲ್ ಆಗಿ ಸೇವೆ ಸಲ್ಲಿಸಿದರು ಮತ್ತು ಯುದ್ಧದ ಕ್ಷೇತ್ರದಲ್ಲಿ ಸಂಘಟನೆಯನ್ನು ಮುನ್ನಡೆಸಿದರು.
ಪಂಜಾಬ್‌ನ ಸಿಯಾಲ್‌ಕೋಟ್‌ನಲ್ಲಿ ಜನಿಸಿದ ಸಿಂಗ್, ಬ್ರಿಟಿಷ್ ಇಂಡಿಯನ್ ಆರ್ಮಿಯ 14 ನೇ ಪಂಜಾಬ್ ರೆಜಿಮೆಂಟ್‌ಗೆ ಸೇರ್ಪಡೆಗೊಂಡರು ಮತ್ತು ಬ್ರಿಟನ್‌ಗಾಗಿ ಮಲಯಾಕ್ಕೆ ನಿಯೋಜಿಸಲಾದ ಸೈನಿಕರಲ್ಲಿ ಒಬ್ಬರಾಗಿದ್ದರು, ನಂತರ ಜಪಾನ್ ಸೇನೆಯಿಂದ ಬಂಧನಕ್ಕೆ ಒಳಪಟ್ಟು ಸುಭಾಷ್‌ಚಂದ್ರ ಬೋಸ್ ಅವರ ಮಾತುಕತೆಯ ನಂತರ ಜಪಾನ್ ಸೇನೆಯಿಂದ ಬಿಡುಗಡೆಗೊಂಡ ಹಲವು ಸೈನಿಕರಲ್ಲಿ ಮೋಹನ್ ಸಿಂಗ್ ಕೂಡ ಇದ್ದರು ಹಾಗೂ ನಂತರ ಐಎನ್‌ಎ ಅಲ್ಲಿ ಇವರು ಸೇವೆಯನ್ನು ಕೂಡ ಸಲ್ಲಿಸಿದರು ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿನ ಸರ್ದಾರ್ ಮೋಹನ್ ಸಿಂಗ್ ಯಾವುದೇ ಮಿಲಿಟರಿ ಸಂಬಂಧವನ್ನು ಹೊಂದಿಲ್ಲ ಮತ್ತು ಯಾವುದೇ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿಲ್ಲ. ಹಾಗೂ ಫೋಟೋದಲ್ಲಿರುವ ವ್ಯಕ್ತಿ ಬ್ಯಾಂಕಿಂಗ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲೂ ಕೂಡ ಸೇವೆ ಸಲ್ಲಿಸಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ಫೋಟೋ ಸುಳ್ಳು ಮಾಹಿತಿಯಿಂದ ಕೂಡಿದೆ. ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿ.
ಇದನ್ನೂ ಓದಿ : Fact Check: ಜರ್ಮನ್‌ನ ಪ್ರಖ್ಯಾತ ಮಾಜಿ ಟೆನಿಸ್ ಆಟಗಾರ್ತಿ ಸ್ಟೆಫಾನಿ ಮಾರಿಯಾ ಗ್ರಾಫ್ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.