Fact Check | ಕಳೆದ 7 ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲವೆಂದು ಸುಳ್ಳು ಹೇಳಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಳೆದ ಏಳು ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದು ಲೋಕಸಭೆಯ ಕಲಾಪಗಳನ್ನು ವೀಕ್ಷಿಸಿದವರಿಗೆ ಆಘಾತವನ್ನು ಉಂಟುಮಾಡಿದೆ. ಜೊತೆಗೆ ಸಾರ್ವಜನಿಕ ವಲಯದಲ್ಲಿ ಕೂಡ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಅದರಲ್ಲೂ ಕೇಂದ್ರ ಶಿಕ್ಷಣ ಸಚಿವರೇ ಈ ರೀತಿಯಾಗಿ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದರೆ ಹೇಗೆ ಎಂಬ ಪ್ರಶ್ನೆಗಳು ಕೂಡ ಕಾಡೋದಕ್ಕೆ ಆರಂಭವಾಗಿದೆ.

ಶಿಕ್ಷಣ ಸಚಿವರು ಹೇಳಿದ್ದು ಏನು?

ಸಂಸತ್ತಿನಲ್ಲಿ ತಮಿಳುನಾಡಿನ ವಿರುದುನಗರದ ಸಂಸದರಾದ ಬಿ.ಮನಕಮ್‌ ಟಾಗೋರ್‌ ಅವರು ಕಳೆದ 7 ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಂಸತ್ತಿನಲ್ಲಿ ಹೇಳಿ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಹಿತಿಯನ್ನು ಶಿಕ್ಷಣ ಸಚಿವರ ಬಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ” ಮಾನ್ಯ ಸಭಾಪತಿಗಳೆ ಅವರು 7 ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದಿದ್ದಾರೆ. ನಾನು ಈ ಸದನದ ಮುಂದೆ, ನಿಮ್ಮ( ಸಭಾಪತಿ) ಮುಂದೆ ಮಾಹಿತಿಯನ್ನು ಸಲ್ಲಿಸುತ್ತಿದ್ದೇನೆ. ಕಳೆದ 7 ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಜೊತೆಗೆ ಘನ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಇದೆ” ಎಂದು ಹೇಳಿಕೆ ನೀಡಿದ್ದಾರೆ.

ಫ್ಯಾಕ್ಟ್‌ಚೆಕ್‌

ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರು ಸಂಸತ್ತಿಗೆ ನೀಡಿದ ಹೇಳಿಕೆಯನ್ನು ಕೇಳಿದ ಸಂಸತ್ತಿನಲ್ಲಿದ್ದ ಇನ್ನೀತರೆ ಸಂಸದರು ಖಂಡನೆಯನ್ನು ವ್ಯಕ್ತ ಪಡಿಸಿದ್ದನ್ನು ನಾವು ಪೂರ್ಣ ಆವೃತ್ತಿಯ ವಿಡಿಯೋದಲ್ಲೇ ನೋಡಬಹುದಾಗಿದೆ. ಇಲ್ಲಿ ಧರ್ಮೇಂದ್ರ ಪ್ರಧಾನ್‌ ಅವರು ಸಂಸತ್ತಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದಾಗಿದೆ.  ಜೂನ್ 2024 UGC-NET (ವಿಶ್ವವಿದ್ಯಾಲಯ ಧನಸಹಾಯ ಆಯೋಗ – ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಗಳನ್ನು ನಡೆಸಿದ ಒಂದು ದಿನದ ನಂತರ ರದ್ದುಗೊಳಿಸಲಾಗಿದೆ. ಇದಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣವೆಂದು ಸ್ವತಃ ಸಚಿವರೇ ಹೇಳಿದ್ದರು.

ಈ ಕುರಿತು ಜೂನ್‌ 20 ರಂದು ಸುದ್ದಿಗೋಷ್ಟಿ ನಡೆಸಿದ್ದ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಡಾರ್ಕ್‌ನೆಟ್‌ನಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ.  ಟೆಲಿಗ್ರಾಮ್‌ನಲ್ಲಿ ಕೂಡ ಕೆಲವೊಂದು ಪ್ರಶ್ನೆಗಳು ಬಂದಿವೆ. ಹೀಗೆ ಬಂದ ಪ್ರಶ್ನೆಗಳು  ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಿದ್ಧ ಪಡಿಸಿದ ಮೂಲ ಪ್ರಶ್ನೆಗಳಿಗೆ ಹೋಲಿಕೆಯಾಗಿದೆ. ಈ ಎರಡೂ ಪ್ರಶ್ನೆಗಳು ಒಂದೇ ಎಂದು ಖಚಿತವಾದ ನಂತರ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮತ್ತು ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗಿದೆ ಎಂದು ಹೇಳಿಕೆಯನ್ನು ನೀಡಿದ್ದರು.

ಕೇವಲ ಇಷ್ಟು ಮಾತ್ರವಲ್ಲ 2021ರಲ್ಲಿ ನಡೆದ UGC-NET ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು 2021ರ ಡಿಸೆಂಬರ್‌ 21 ರಂದು ಸೋರಿಕೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹರಿಯಾಣ ಪೊಲೀಸರ ತಂಡವು   CRPF ಕಾನ್‌ಸ್ಟೆಬಲ್  ಒಬ್ಬರನ್ನು ಬಂಧಿಸಿತ್ತು. ಈ ಕುರಿತು ಇಂಡಿಯಾ ಟುಡೆ ಕೂಡ ವರದಿಯನ್ನು ಮಾಡಿದೆ. ಈ ವರದಿಯ ಪ್ರಕಾರ ಆರೋಪಿಗಳಲ್ಲಿ ಒಬ್ಬನಾದ ವಿಕಾಸ್ ಪರೀಕ್ಷೆ ನಡೆಯುವ ಸುಮಾರು ಆರು ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದ ಎಂದು ಉಲ್ಲೇಖಿಸಲಾಗಿದೆ.

2021ರಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗಿದ್ದ ಕುರಿತು ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದ್ದು, ಆ ವರದಿಯಲ್ಲಿ “ಜೈಪುರದಲ್ಲಿ 35 ಲಕ್ಷ ರೂಪಾಯಿಗೆ NEET ಪ್ರಶ್ನೆಪತ್ರಿಕೆ ಸೋರಿಕೆ, 8 ಮಂದಿ ಬಂಧನ” ಎಂಬ ಶೀರ್ಷಿಕೆಯಡಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಈ ವರದಿಯಲ್ಲಿ ಜೈಪುರ ಪೊಲೀಸರು ರಾಜಸ್ಥಾನದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿರುವ ಪರೀಕ್ಷಾ ಕೇಂದ್ರದಿಂದ ಬಾಲಕಿ ಸೇರಿದಂತೆ ಸುಮಾರು ಎಂಟು ಜನರನ್ನು ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಂಸತ್ತಿನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಹೇಳಿರುವ ಹಾಗೆ 7 ವರ್ಷಗಳಲ್ಲಿ  ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬುದು ಸುಳ್ಳು. ಜೊತೆಗೆ ಸಂಸತ್ತಿಗೆ ಕೂಡ ಅವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂಬುದು ಈ ಮೇಲಿನ ಎಲ್ಲಾ ಅಂಶಗಳಿಂದ ಸಾಬೀತಾಗಿದೆ.


ಇದನ್ನೂ ಓದಿ : Fact Check | ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *