Fact Check | ಸಚಿನ್‌ ತೆಂಡೂಲ್ಕರ್‌ ಅವರ ಬಂಧನವಾಗಿದೆ ಎಂದು AI ಫೋಟೋ ಹಂಚಿಕೆ

“ಈ ಫೋಟೋ ನೋಡಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಪ್ರಕರಣವೊಂದರ ಆರೋಪಿಯಾಗಿರುವ ಅವರನ್ನು ಬಂಧಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.” ಎಂದು ಹಿಂದೂ ಪತ್ರಿಕೆಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಬಂಧನವಾಗಿದೆ ಎಂಬಂತ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ನೋಡಿದ ಹಲವರು ಇದು ನಿಜವಾದ ಫೋಟೋ ಎಂದು ಭಾವಿಸಿದ್ದಾರೆ. 

ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದು, ಹಲವು ಕತೆಗಳನ್ನು ಕೂಡ ಈ ಫೋಟೋ ಶೇರ್‌ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್‌ ಮಾಡಲಾಗುತ್ತಿರುವ ಫೋಟೋ ಹಲವು ದೋಷಗಳಿಂದ ಕೂಡಿದ್ದು, ಅನುಮಾನವನ್ನು ಹುಟ್ಟಿಸುವಂತಿದೆ. ಹಾಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋದ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. 

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ  ಈ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಆಗುತ್ತಿರುವ ಫೋಟೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು.  ಆದರೆ ವೈರಲ್‌ ಫೋಟೋಗೆ ಸಂಬಂಧ ಪಟ್ಟಂತೆ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ. ಇನ್ನು ವೈರಲ್‌ ಪೋಸ್ಟ್‌ನಲ್ಲಿ ದಿ ಹಿಂದೂ ಈ ವರದಿ ಪ್ರಕಟಿಸಿದೆ ಎಂಬ ಅಂಶ ಉಲ್ಲೇಖವಾಗಿದ್ದರಿಂದ ದಿ ಹಿಂದೂ ವೆಬ್‌ಸೈಟ್‌ ಅನ್ನು ಪರಿಶೀಲನೆ ನಡೆಸಿದೆವು. ಆದರೆ ದಿ ಹಿಂದೂವಿನಲ್ಲೂ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.

ಹೀಗಾಗಿ ವೈರಲ್‌ ಫೋಟೋವನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ, ನಾವು ಹಲವಾರು ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಅದರಲ್ಲೂ ಪ್ರಮುಖವಾಗಿ ಪೊಲೀಸ್ ಅಧಿಕಾರಿಯ ಗನ್ ಹೋಲ್ಸ್ಟರ್ ಅನ್ನು ಮುಚ್ಚಲಾಗಿದೆ ಮತ್ತು ಕಳಪೆಯಾಗಿ ವಿನ್ಯಾಸಗೊಳಿಸಲಾಗಿದೆ, ಇವರ ಬಳಿ ಗನ್ ಇಲ್ಲ. ಪೋಲೀಸ್ ಸಮವಸ್ತ್ರದಲ್ಲಿ ಸ್ಟಾರ್‌ಗಳ ಕೊರತೆ ಕೂಡ ಇದೆ. ಹೀಗೆ ಹಲವು ವ್ಯತ್ಯಾಸಗಳ ಜೊತೆ, ಈ ಫೋಟೋ AI ನಿಂದ ವಿನ್ಯಾಸಗೊಳಿಸಲಾಗಿದೆ ಎಂಬ ಅನುಮಾನವನ್ನು ಹುಟ್ಟು ಹಾಕಿತ್ತು.

ಹೀಗಾಗಿ ಚಿತ್ರವನ್ನು ಮತ್ತಷ್ಟು ಪರಿಶೀಲಿಸಲು, ನಾವು ಇದನ್ನು ಹಲವಾರು AI ಇಮೇಜ್ ಡಿಟೆಕ್ಷನ್ ಟೂಲ್‌ಗಳ ಮೂಲಕ ಪರಿಶೀಲನೆ ನಡೆಸಿದೆವು. ಇದಕ್ಕಾಗಿ Is It AI? ವೆಬ್‌ತಾಣದಲ್ಲಿ ವೈರಲ್‌ ಇಮೇಜ್‌ ಅನ್ನು ಪರಿಶೀಲನೆ ನಡೆಸಿದಾಗ ಈ ಫೋಟೋ ಶೇ.96.29 ಪ್ರತಿಶತದಷ್ಟು AI ನಿಂದ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರನ್ನು ಬಂದಿಸಲಾಗಿದೆ ಎಂಬ ಫೋಟೋ AI ನಿಂದ ನಿರ್ಮಾಣ ಮಾಡಲಾಗಿದೆ. ಈ ಫೋಟೋ ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಟಿಪ್ಪಣಿ ಕೂಡ ಸುಳ್ಳಿನಿಂದ ಕೂಡಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಯನ್ನು ನಂಬುವ ಮುನ್ನ ಒಮ್ಮೆ ಪರಿಶೀಲನೆ ನಡೆಸುವುದು ಉತ್ತಮ.


ಇದನ್ನೂ ಓದಿ : Fact Check: ಆಂಧ್ರಪ್ರದೇಶದ ಸ್ಪೀಕರ್ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಟೀಕಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *