Fact Check | ನಾಗ್ಪುರದ ಬಳಿ ಭಜನೆ ಮಾಡಿದ್ದಕ್ಕಾಗಿ ವಾರಕರಿಗಳ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

“ಜುಲೈ 4, ಮಧ್ಯಾಹ್ನ 2 ಗಂಟೆಯ ಘಟನೆ, ಪಂಢರಪುರದ ವಾರಿಗೆ ಹೋಗುತ್ತಿದ್ದ ವಾರಕರಿಗಳು, ನಾಗಪುರ ರಸ್ತೆ ಬದಿಯಲ್ಲಿ ಊಟ ಮಾಡುತ್ತಾ ವಿಠ್ಚಲನ ಅಭಂಗ್ ಹಾಡುತ್ತಿದ್ದಾಗ ಸ್ಥಳೀಯ ಮುಸ್ಲಿಮರು ಅಭಂಗ್ ಹಾಡಬಾರದು, ಸುಮ್ಮನಿರಿ ಎಂದು ಅಮಾಯಕ ವಾರಕರಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಪಾಪವನ್ನು ಹೇಗೆ ತೊಳೆಯುತ್ತಿರಿ ನಿಮ್ಮ ಪ್ರಾಣ ತೆಗೆಯಲು ಶುರು ಮಾಡಿದ್ದಾರೆ, ಚುನಾವಣೆಯಲ್ಲಿ  ಸಿಕ್ಕ ಒಂದು ಗೆಲುವು… ಈಗ ಅವರ ಕಾನೂನನ್ನು ಜಾರಿಗೆ ತರಲು ಹೊರಟಿದ್ದಾರೆ,” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ವಾಟ್ಸ್‌ಆಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಹಲವು ಮಂದಿ ಇದು ನಿಜವಾಗಿಯೂ ನಡೆದ ಘಟನೆ ಎಂದು  ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಮತ್ತು ಹೇಳಿಕೆಯ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಮೊದಲು ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿರುವ ವಾಕರಿಗಳು ಯಾರು ಎಂದು ಹುಡುಕಾಟವನ್ನು ನಡೆಸಿದೆವು. ಇಲ್ಲಿ  ವಾರಿ ಎಂದರೆ ತೀರ್ಥಯಾತ್ರೆ ಎಂದರ್ಥ. ವಾರಕರಿ ಸಂಪ್ರದಾಯ ಅಥವಾ ಯಾತ್ರಿ ಪಂಥವು ಮಹಾರಾಷ್ಟ್ರದ ಪ್ರಮುಖ ವೈಷ್ಣವ ಪಂಥವಾಗಿದೆ. ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಕೈಗೊಳ್ಳುವುದೇ ವಾರಕರಿ ಸಂಪ್ರದಾಯ. ಈ ಯಾತ್ರಿಕರನ್ನು ವಾರಕರಿಗಳು ಎಂದು ಕರೆಯಲಾಗುತ್ತದೆ. ಇವರ ಮೇಲೆಯೇ ಈಗ ನಾಗ್ಪುರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಇನ್ನು ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಯಾವುದಾದರೂ ವರದಿಗಳು ಪ್ರಕಟಗೊಂಡಿವೆಯೇ ಎಂದು ತಿಳಿದುಕೊಳ್ಳಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ಘಟನೆಗೆ ಸಂಬಂಧ ಪಟ್ಟಂತೆ ಯಾವುದೇ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಈ ರೀತಿಯ ಕೋಮು ಸೂಕ್ಷ್ಮತೆಯುಳ್ಳ ವಿಚಾರಕ್ಕೆ ಸಂಬಂಧ ಪಟ್ಟಂತ ಗಲಾಟೆ ನಡೆದಿದ್ದು ನಿಜವೇ ಆಗಿದ್ದರೆ, ಮಹಾರಾಷ್ಟ್ರದ ಹಲವು ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಬೇಕಿತ್ತು. ಆದರೆ ಅಂತಹ ಯಾವ ವರದಿಗಳನ್ನು ಮಹಾರಾಷ್ಟ್ರದ ಯಾವುದೇ ಮಾಧ್ಯಮಗಳು ಮಾಡಲಿಲ್ಲ.

ಹೀಗಾಗಿ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ 15 ನವೆಂಬರ್ 2023 ರಂದು @prabhakarugale13 ಎಂಬ ಎಕ್ಸ್‌ (ಟ್ವಿಟರ್‌) ಬಳಕೆದಾರರಿಂದ YouTube ನಲ್ಲಿ ಇದೇ ವೈರಲ್‌ ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವುದನ್ನು ಕಂಡು ಕೊಂಡಿದ್ದೇವೆ. ಅಲ್ಲಿಗೆ ಈ ವಿಡಿಯೋ ಇತ್ತೀಚಿನದ್ದಲ್ಲ 2023ರದ್ದು ಎಂಬುದು ನಮಗೆ ಸ್ಪಷ್ಟವಾಗಿದೆ. ಈ ವಿಡಿಯೋವಿನ ಡಿಸ್ಕ್ರಪ್ಷನ್‌ನಲ್ಲಿ “ಹಿಂದೂಗಲೇ  ಎದ್ದೇಳಿ! ಇಲ್ಲದಿದ್ದರೆ, ಪರಿಣಾಮಗಳಿಗೆ ಸಿದ್ಧರಾಗಿರಿ! ಈ ವಿಡಿಯೋ ನೋಡಿ! ಈ ವೈರಲ್ ವಿಡಿಯೋ ಮಹಾರಾಷ್ಟ್ರದ ರಾಹುರಿ ತಾಲೂಕಿನ ಗುಹಾ ಗ್ರಾಮದಿಂದ ಬಂದಿದೆ” ಎಂದು ಬರೆದಿರುವುದನ್ನು ನಾವು ಕಂಡುಕೊಂಡಿದ್ದೇವೆ.

ಇದರ ಆಧಾರದ ಮೇಲೆ ಇನ್ನಷ್ಟು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ 13 ನವೆಂಬರ್ 2023 ರಂದು Zee 24 Taas ಸುದ್ದಿ ಚಾನೆಲ್‌ನ ವಿಡಿಯೋ ವರದಿಯೊಂದು ಕಂಡು ಬಂದಿದೆ. ಅದರಲ್ಲಿ “ ಮಹಾರಾಷ್ಟ್ರದ ಅಹ್ಮದ್‌ನಗರದ ಗುಹಾ ಗ್ರಾಮದಲ್ಲಿ ಎರಡು ಸಮುದಾಯಗಳು ಘರ್ಷಣೆ ನಡೆಸಿವೆ. ಅರ್ಚಕರು ಮತ್ತು ಭಕ್ತರನ್ನು ಇತರ ಸಮುದಾಯದವರು ಥಳಿಸಿದ್ದಾರೆ.” ಎಂಬ ಮಾಹಿತಿ ನಮಗೆ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇನ್ನಷ್ಟು ಹುಡುಕಾಟ ನಡೆಸಿದಾಗ @NagarPolice X ಎಂಬ ಎಕ್ಸ್‌ ಖಾತೆಯಲ್ಲಿ ಈ ಘಟನೆಯ ಕುರಿತು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಗುಹಾ ಗ್ರಾಮದಲ್ಲಿರುವ ಕಾನಿಫತ್‌ ದೇವಾಲಯದ ಭೂ ವಿವಾದ ಎರಡೂ ಸಮುದಾಯಗಳ ನಡುವೆ ಇದ್ದು, ಈ ಘಟನೆಗೆ ಸಂಬಂಧ ಪಟ್ಟಂತೆ ಹಲವರು ಭಜನೆ ಮಾಡಲು ಮುಂದಾಗಿದ್ದು, ಇದರಿಂದ ಅನ್ಯಕೋಮಿನವರು ಈ ಬಗ್ಗೆ ಆಕ್ಷೇಪವನ್ನು ಎತ್ತಿದ್ದಾರೆ. ಈ ವೇಳೆ ಎರಡೂ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹೊಡೆದಾಟ ನಡೆದಿದೆ ಎಂಬುದನ್ನು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆಪಂಢರಪುರದ ವಾರಿಗೆ ಹೋಗುತ್ತಿದ್ದ, ವಾರಕರಿಗಳು ಭಜನೆ ಮಾಡಿದರು ಎಂಬ ಕಾರಣಕ್ಕೆ ಮುಸ್ಲಿಂ ಸಮುದಾಯದವರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನೆ ಒಮ್ಮೆ ಪರಿಶೀಲನೆ ನಡೆಸುವುದು ಉತ್ತಮ.


ಇದನ್ನೂ ಓದಿ : Fact Check: ಜೆ.ಡಿ ವ್ಯಾನ್ಸ್ ಮತ್ತು ಪತ್ನಿ ಉಷಾ ಅವರನ್ನು ಅಭಿನಂದಿಸಿ ಭಾರತ ಪರ ಘೋಷಣೆ ಕೂಗಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *