Fact Check | ಅನಂತ್ ಅಂಬಾನಿ ಮದುವೆಯಲ್ಲಿ ಪ್ರಧಾನಿ ಮೋದಿ ಸ್ವಾಮಿ ಅವಿಮುಕ್ತೇಶ್ವರಾನಂದರ ಆಶೀರ್ವಾದ ಪಡೆದಿಲ್ಲ ಎಂಬುದು ಸುಳ್ಳು

“ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಯನ್ನು ವಿರೋಧಿಸಿದ ಕಾರಣಕ್ಕಾಗಿ ಪ್ರಧಾನಿ ಮೋದಿ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯರ ಆಶೀರ್ವಾದವನ್ನು ಪಡೆಯಲಿಲ್ಲ.”  ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಜೊತೆಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ದ್ವಾರಕಾ ಪೀಠದ ಶಂಕರಾಚಾರ್ಯ, ಸ್ವಾಮಿ ಸದಾನಂದ ಸರಸ್ವತಿ ಅವರ ಆಶೀರ್ವಾದ ಪಡೆಯಲು ಮೋದಿ ಕಾಣಿಸಿಕೊಂಡಿರುವ ವೀಡಿಯೊವನ್ನು ಪೋಸ್ಟ್ ಒಳಗೊಂಡಿದ್ದು, ಆದರೆ ಸ್ವಾಮಿ ಅವಿಮುಕ್ತೇಶ್ವರರ ಆಶೀರ್ವಾದವನ್ನೇ ಪ್ರಧಾನಿ ಮೋದಿ ಅವರು ಪಡೆಯಲಿಲ್ಲ ಎನ್ನಲಾಗಿದೆ.

ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ನೋಡಿದ ಹಲವು ಮಂದಿ, ನಿಜಕ್ಕೂ ಪ್ರಧಾನಿ ಮೋದಿ ಅವರು ಸ್ವಾಮಿ ಅವಿಮುಕ್ತೇಶ್ವರರ ಆಶಿರ್ವಾದವನ್ನು ಪಡೆಯಲಿಲ್ಲ ಎಂದು ಭಾವಿಸಿದ್ದಾರೆ. ಈ ಮೂಲಕ ಸಾಕಷ್ಟು ಮಂದಿ ಪ್ರಧಾನಿ ಮೋದಿ ಅವರನ್ನು ರಾಜಕೀಯವಾಗಿ ಕೂಡ ಟೀಕೆ ಮಾಡುತ್ತಿದ್ದಾರೆ. ಜೊತೆಗೆ ಅವರು ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಟೀಕೆಗಳ ಮಧ್ಯೆ ನಿಜಕ್ಕೂ ಪ್ರಧಾನಿಗಳು ಸ್ವಾಮಿ ಅವಿಮುಕ್ತೇಶ್ವರರ  ಆಶೀರ್ವಾದವನ್ನು ಪಡೆಯಲಿಲ್ಲವೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆ. ಈ ವೇಳೆ 13 ಜುಲೈ 2024 ರಂದು ದಿ ಎಕನಾಮಿಕ್ಸ್‌ ಟೈಮ್ಸ್‌ ತನ್ನ ಯುಟ್ಯುಬ್‌ ಚಾನಲ್‌ನಲ್ಲಿ “PM Modi arrives at the Ambani wedding, gives blessing to newly-wed Anant Ambani-Radhika Merchant” ಎಂಬ ಶೀರ್ಷಿಕೆಯ ಅಡಿಯಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಕಂಡು ಬಂದಿದೆ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಧಾನಿ ಮೋದಿಯವರು ಮೊದಲು ಸ್ವಾಮಿ ಅವಿಮುಕ್ತೇಶ್ವರರು ಮತ್ತು ನಂತರ ದ್ವಾರಕಾ ಪೀಠದ ಶಂಕರಾಚಾರ್ಯರ ಆಶೀರ್ವಾದವನ್ನು ತೆಗೆದುಕೊಳ್ಳುವುದನ್ನು ಕಾಣಬಹುದಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮೋದಿ ದ್ವಾರಕಾ ಪೀಠದ ಶಂಕರಾಚಾರ್ಯರಿಂದ ಆಶೀರ್ವಾದ ಪಡೆದು ಹೊರನಡೆಯುತ್ತಿರುವುದನ್ನು ಮಾತ್ರ ತೋರಿಸಲಾಗಿದೆ. ಹಾಗಾಗಿ ವೈರಲ್‌ ವಿಡಿಯೋ ಪೂರ್ಣ ಆವೃತ್ತಿಯಿಂದ ಕೂಡಿದ ವಿಡಿಯೋ ಅಲ್ಲ ಎಂಬುದು ಕೂಡ  ಇಲ್ಲಿ ತಿಳಿದು ಬಂದಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಪ್ರಧಾನಿ ಮೋದಿ ಅವರಿಗೆ ಸ್ವಾಮಿ ಅವಿಮುಕ್ತೇಶ್ವರರು ಪವಿತ್ರ ಸರವನ್ನು ನೀಡಿರುವುದು ಕಂಡು ಬಂದಿದೆ, ಇದಾದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಪ್ರಧಾನಿ ಮೋದಿ ನಮ್ಮ ಶತ್ರು ಅಲ್ಲ ಮತ್ತು ನಮ್ಮನ್ನು ಸ್ವೀಕರಿಸಲು ಸಿದ್ಧರಿರುವ ಯಾರಿಗಾದರೂ ನಾವು ಆಶೀರ್ವಾದವನ್ನು ನೀಡುತ್ತೇವೆ” ಎಂದು ಮಿಡ್‌ಡೆ ಇಂಡಿಯಾ ತನ್ನ ಯುಟ್ಯುಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋದಲ್ಲಿ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಪ್ರಧಾನಿ ಮೋದಿ ಅವರು ಜ್ಯೋತಿರ್ಮಠ ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯರಿಂದ ಆಶೀರ್ವಾದ ಪಡೆದಿದ್ದಾರೆ. ಹಾಗೆಯೇ  ಈ ವಿವಾಹ ಕಾರ್ಯಕ್ರಮದಲ್ಲಿ  ಪ್ರಧಾನಿ ಮೋದಿ ಸ್ವಾಮಿ ಅವಿಮುಕ್ತೇಶ್ವರಾನಂದರ ಆಶೀರ್ವಾದ ಪಡೆದಿಲ್ಲ ಎಂಬುದು ಕೂಡ ಸಂಪೂರ್ಣವಾಗಿ ಸುಳ್ಳಾಗಿದೆ. ಹಾಗಾಗಿ ವೈರಲ್‌ ವಿಡಿಯೋವನ್ನು ಶೇರ್‌ ಮಾಡುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಖುರಾನ್ ಆಧರಿಸಿ ಸೂರ್ಯ ಮತ್ತು ಭೂಮಿ ಸುತ್ತುವಿಕೆಯ ಊಹೆಯನ್ನು ಅಮೆರಿಕಾದ ನಾಸಾ ಒಪ್ಪಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *