“ಈ ವಿಡಿಯೋ ನೋಡಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಜಮೀಯತ್ ಉಲಾನಾ-ಐ-ಹಿಂದ್ ಅಧ್ಯಕ್ಷ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಈ ದೇಶ ನಮ್ಮದು ಮತ್ತು ನಾವು ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಮ್ಮ ಧರ್ಮ ಉಡುಗೆ-ತೊಡುಗೆ, ಆಚಾರ-ವಿಚಾರ, ಆಹಾರ ಪದ್ಧತಿ ಬೇರೆ ಬೇರೆ ಮತ್ತು ನೀವು ನಮ್ಮ ಧರ್ಮವನ್ನು ಸಹಿಸದಿದ್ದರೆ ಬೇರೆಡೆಗೆ ಹೋಗಿ ಎಂದು ಹೇಳಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವೈರಲ್ ಆಗಿದೆ
BJP left by 32 seats in majority & they started threatening Hindus and asking Hindus to leave the India. They are feeling that they are in the right direction to achieve PFI's 𝐆𝐚𝐣𝐰𝐚-𝐄-𝐇𝐢𝐧𝐝-𝟐𝟎𝟒𝟕 target.
Hey Divided Hindus, find a new place for yourselves or convert. pic.twitter.com/NGEVSPHr6L
— Baba Banaras™ (@RealBababanaras) July 16, 2024
ಈ ವಿಡಿಯೋ ಜೊತೆಗೆ ಹಲವು ಬರಹಗಳು ಕಂಡುಬಂದಿದ್ದು, ಅದರಲ್ಲಿ ಕೆಲವೊಂದು ಬರಹಗಳು ಈ ವಿಡಿಯೋ ಇತ್ತೀಚಿನ ಲೋಕಸಭೆ ಚುನಾವಣೆಯ ನಂತರದ ಭಾಷಣದ್ದಾಗಿದೆ ಎಂದು ಹಲವರು ಹಂಚಿಕೊಂಡಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಇದು ಇತ್ತೀಚಿನ ಭಾಷಣದ ವಿಡಿಯೋ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ವಿಡಿಯೋದ ಮೂಲ ಆವೃತ್ತಿ ಪತ್ತೆಯಾಗಿದ್ದು, ಈ ವಿಡಿಯೋದಲ್ಲಿ TV9 ಉತ್ತರಪ್ರದೇಶ ಉತ್ತರಖಂಡದ ಲೋಗೊ ಕಂಡು ಬಂದಿದ್ದು ಮೂಲ ವಿಡಿಯೋ ಈ ಸುದ್ದಿ ವಾಹಿನಿಯ ಯುಟ್ಯುಬ್‌ನಲ್ಲಿ ಪತ್ತೆಯಾಗಿದೆ.
ಆದರೆ ವಿಡಿಯೋದ ವಿಸ್ತೃತ ಆವೃತಿ ಈ ವಿಡಿಯೋದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ವಿಸ್ತೃತ ಆವೃತಿಯ ವಿಡಿಯೋಗಾಗಿ ಹುಡುಕಾಟವನ್ನು ನಡೆಸಿದಾಗ 29 ಮೇ 2022 ರಲ್ಲಿ ಮಿಲ್ಲತ್ ಟೈಮ್ಸ್ ಎಂಬ ಸುದ್ದಿ ಸಂಸ್ಥೆ “ನಮ್ಮ ಧರ್ಮವನ್ನು ಸಹಿಸದವರು ದೇಶ ಬಿಟ್ಟು ಬೇರೆಡೆಗೆ ಹೋಗಬೇಕು” ಎಂಬ ಶೀರ್ಷಿಕೆಯ ಅಡಿಯಲ್ಲಿ ಮದನಿ ಅವರು ಮಾತನಾಡಿದ ಪೂರ್ಣ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಈ ವಿಡಿಯೋದಲ್ಲಿ ವೈರಲ್ ಕ್ಲಿಪ್‌ನಲ್ಲಿನ ಅಂಶವು 2:16 ನಿಮಿಷದ ಟೈಮ್ ಸ್ಟ್ಯಾಂಪ್‌ನಲ್ಲಿ ಕಂಡು ಬಂದಿದೆ.
ಇಲ್ಲಿ ಮದನಿ ಅವರು ” ನಾನು ಬೆದರಿಕೆ ಹಾಕುತ್ತಿಲ್ಲ. ಈ ದೇಶವು ನಮ್ಮದೇ ಎಂದು ತಿಳಿಸುತ್ತಿದ್ದೇನೆ, ನಮಗೆ ಅವಕಾಶವಿತ್ತು ಆದರೆ ನಾವು ಪಾಕಿಸ್ತಾನವನ್ನು ತಿರಸ್ಕರಿಸಿದ್ದೇವೆ. ನಾವು ಈ ದೇಶದ ಪ್ರಜೆಗಳು, ವಿದೇಶಿಯರಲ್ಲ. ನಮ್ಮನ್ನು ಇಷ್ಟ ಪಡದವರು ದೇಶ ಬಿಟ್ಟು ಹೋಗಲಿ” ಎಂದು ಹೇಳಿಕೆ ನೀಡಿರುವುದು ಕಂಡು ಬಂದಿದೆ. ಇನ್ನು ಮದನಿ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಕುರಿತು ಹಿಂದೂಸ್ತಾನ್ ಮತ್ತು ಜಾಗರನ್ ಮಾಧ್ಯಮಗಳ ವರದಿಗಳು ಕೂಡ ಕಂಡು ಬಂದಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಇತ್ತೀಚಿನ ಲೋಕಸಭೆ ಚುನಾವಣೆಯ ನಂತರ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಹಿಂದೂಗಳನ್ನು ದೇಶ ಬಿಟ್ಟು ಹೋಗಲು ಹೇಳಿದ್ದಾರೆ ಎಂಬುದು ಸುಳ್ಳು. ಈ ವಿಡಿಯೋ 2022ರದ್ದಾಗಿದ್ದು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೆಯಾಗುತ್ತಿದೆ. ಹಾಗಾಗಿ ಈ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಅನಂತ್ ಅಂಬಾನಿ ಮದುವೆಯಲ್ಲಿ ಪ್ರಧಾನಿ ಮೋದಿ ಸ್ವಾಮಿ ಅವಿಮುಕ್ತೇಶ್ವರಾನಂದರ ಆಶೀರ್ವಾದ ಪಡೆದಿಲ್ಲ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.