Fact Check | ಖುರಾನ್ ಆಧರಿಸಿ ಸೂರ್ಯ ಮತ್ತು ಭೂಮಿ ಸುತ್ತುವಿಕೆಯ ಊಹೆಯನ್ನು ಅಮೆರಿಕಾದ ನಾಸಾ ಒಪ್ಪಿಕೊಂಡಿದೆ ಎಂಬುದು ಸುಳ್ಳು

“ಖುರಾನ್ ಆಧರಿಸಿ 100 ವರ್ಷಗಳ ಹಿಂದೆ “ಜಮೀನ್ ಸಕಿನ್ ಹೈ” ಎಂಬ ಪುಸ್ತಕವನ್ನು ಬರೆದ ಅಹ್ಲೆ ಸುನ್ನತ್ ಅಲಾ ಹಜರತ್ ಅವರ ಇಮಾಮ್ ಅವರ ಕಲ್ಪನೆಯನ್ನು NASA ನಿಜವೆಂದು ಒಪ್ಪಿಕೊಂಡಿದೆ , ಅದರಲ್ಲಿ ಅವರು “ಭೂಮಿಯು ಸ್ಥಿರವಾಗಿದೆ ಮತ್ತು ಸೂರ್ಯ ಭೂಮಿಯ ಸುತ್ತ ತಿರುಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಮುಂದೆ ಜಗತ್ತಿನಾದ್ಯಂತ ಎಲ್ಲರೂ ಇದನ್ನೇ ಒಪ್ಪಿಕೊಳ್ಳಲಿದ್ದಾರೆ ” ಎಂದು ಬರಹಗಳು ಮತ್ತು ವಿವಿಧ ರೀತಿಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡಿದ್ದು, ಮುಸ್ಲಿಂ ಸಮುದಾಯ ಇದನ್ನು ನಂಬುವಂತೆ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಕೆಲವರು ಇಲ್ಲ ಇದೊಂದು ಸುಳ್ಳು ಸುದ್ದಿ, ಈ ರೀತಿಯಾಗಿ ನಾಸಾ ಒಪ್ಪಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು ಹುಟ್ಟು ಹಾಕಿರುವ ಈ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಪೋಸ್ಟ್‌ಗಳ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಅಮರ್ ಉಜಾಲಾ ಸುದ್ದಿತಾಣ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿಲ್ಲ; ನಾಸಾದ ಈ ಬಹಿರಂಗಪಡಿಸುವಿಕೆಯಿಂದ ಜಗತ್ತು ಆಶ್ಚರ್ಯಗೊಂಡಿದೆ” ಎಂದು ಹಿಂದಿಯಲ್ಲಿ ಶೀರ್ಷಿಕೆಯನ್ನು ನೀಡಿ ಲೇಖನವೊಂದನ್ನು ಪ್ರಕಟಿಸಿದೆ.

ಈ ಲೇಖನದಲ್ಲಿ ಭೂಮಿಯು ಬ್ಯಾರಿಸೆಂಟರ್ ಸುತ್ತಲೂ ಸುತ್ತುತ್ತದೆ ಮತ್ತು ಸೂರ್ಯನ ಸುತ್ತ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದಾದರು ವರದಿಗಳು ಕಂಡು ಬಂದಿವೆ ಎಂದು ಹುಡುಕಾಟವನ್ನು ನಡೆಸಲಾಯಿತು. ಆದರೆ ಈ ಕುರಿತು ಯಾವುದೇ ಅಧಿಕೃತ ಅಂತರಾಷ್ಟ್ರೀಯ ಮಾಧ್ಯಮಗಳಾಗಲಿ, ಅಥವಾ ವೈಜ್ಙಾನಿಕ ಅಂಕಣಗಳನ್ನು ಪ್ರಕಟಿಸುವ ಅಧಿಕೃತ ನಿಯತಕಾಲಿಕಗಳಾಗಲಿ ವರದಿ ಮತ್ತು ಅಂಕಣಗಳನ್ನು ಪ್ರಕಟಿಸಿರುವುದು ಕಂಡು ಬಂದಿಲ್ಲ. ಒಂದು ವೇಳೆ ನಿಜಕ್ಕೂ ನಾಸಾ ಕುರಾನ್‌ ಆಧಾರಿತ ಎನ್ನಲಾದ ಪುಸ್ತಕವಾದ “ಜಮೀನ್ ಸಕಿನ್ ಹೈ” ನಲ್ಲಿನ ಅಂಶಗಳನ್ನು ಒಪ್ಪಿದ್ದೇ ಆದಲ್ಲಿ ಈ ಕುರಿತು ವರದಿಯಾಗಬೇಕಿತ್ತು. ಇಂತಹ ಯಾವುದೇ ವರದಿಗಳು ಕಂಡು ಬಂದಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ನಾಸಾದ Space Place Explore The Earth and Space ವೆಬ್‌ಸೈಟ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು ಇದರಲ್ಲಿ ನಾಸಾ ” ಭೂಮಿಯು ಸೂರ್ಯನ ಸುತ್ತ ಸುತ್ತುವುದಿಲ್ಲ.ಸೂರ್ಯನು ನಮ್ಮ ಸೌರವ್ಯೂಹದ ಅತ್ಯಂತ ಬೃಹತ್ ಕಾಯವಾಗಿದೆ ಮತ್ತು ನಮ್ಮ ಸೌರವ್ಯೂಹದ ಕೇಂದ್ರವಾಗಿದೆ. ಹೊಸ ಒಳನೋಟದ ಪ್ರಕಾರ, ಭೂಮಿಯು ಸೂರ್ಯನ ಸುತ್ತ ಸುತ್ತದಿರಲು ಬ್ಯಾರಿಸೆಂಟರ್ ಕಾರಣ ಎಂದು ತಿಳಿದುಬಂದಿದೆ. ಬ್ಯಾರಿಸೆಂಟರ್ ಎಂದರೆ ಗ್ರಹಗಳು ಅಥವಾ ನಕ್ಷತ್ರಗಳಂತಹ ಎರಡು ಅಥವಾ ಹೆಚ್ಚು ಆಕಾಶಕಾಯಗಳ ದ್ರವ್ಯರಾಶಿಯ ಕೇಂದ್ರವನ್ನು ಸೂಚಿಸುತ್ತದೆ, ಅವು ಅವುಗಳ ಗುರುತ್ವಾಕರ್ಷಣೆಯ ಪರಸ್ಪರ ಕ್ರಿಯೆಯಿಂದಾಗಿ ಪರಸ್ಪರ ಸುತ್ತುತ್ತವೆ. ಈ ಕಾಯಗಳು ಪರಸ್ಪರ ಸುತ್ತುವ ಬಿಂದು ಇದು.” ಎಂಬ ಮಾಹಿತಿಯನ್ನು ನೀಡಿದೆ

ಒಟ್ಟಾರೆಯಾಗಿ ಹೇಳುವುದಾದರೆ ನಾನಾ ಖುರಾನ್ ಆಧರಿಸಿ 100 ವರ್ಷಗಳ ಹಿಂದೆ ಜಮೀನ್ ಸಕಿನ್ ಹೈ ಎಂಬ ಪುಸ್ತಕವನ್ನು ಬರೆದ ಅಹ್ಲೆ ಸುನ್ನತ್ ಅಲಾ ಹಜರತ್ ಅವರ ಇಮಾಮ್ ಅವರ ಕಲ್ಪನೆಯ ಪ್ರಕಾರ ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ ಎಂದು ನಾಸಾ ಒಪ್ಪಿಕೊಂಡಿದೆ ಎಂಬುದು ಸುಳ್ಳು. ನಾಸಾದ ಹೊಸ ಅಧ್ಯಾಯನವನ್ನು ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳು ಒಂದಕ್ಕೊಂದು ಸಂಬಂಧವೇ ಇಲ್ಲದ ಮಾಹಿತಿಯನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ಮಥುರಾದಲ್ಲಿ ರೋಹಿಂಗ್ಯಾ ಮುಸ್ಲಿಮರು ಪೋಲೀಸರಿಗೆ ಹಲ್ಲೆ ನಡೆಸಿದ್ದಾರೆ ಎಂದು ಅಸ್ಸಾಮಿನ ವೀಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *