Fact Check | ಬ್ರಿಟನ್‌ನ ಚುನಾವಣಾ ಫಲಿತಾಂಶದ ನಂತರ ಅಲ್ಲಿನ ಮುಸ್ಲಿಮರು ಟ್ರಾಫಿಕ್‌ ವಾರ್ಡನ್‌ಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಯುಕೆಯಲ್ಲಿ 2024 ರ ಚುನಾವಣೆಯಲ್ಲಿ ಲೇಬರ್ ಪಕ್ಷವು ಗೆದ್ದ ನಂತರ ಟ್ರಾಫಿಕ್ ವಾರ್ಡನ್ ಅನ್ನು ಮುಸ್ಲಿಂ ಪುರುಷರ ಗುಂಪು ಟಿಕೇಟ್‌ ನೀಡುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಅಲ್ಲಿನ ಕನ್ಸರ್ವೇಟಿವ್ ಪಕ್ಷದ ಸೋಲು ಮುಸ್ಲಿಮರಿಗೆ ಬಹಳ ಆನಂದವನ್ನು ಉಂಟು ಮಾಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಟ್ರಾಫಿಕ್‌ ವಾರ್ಡನ್‌ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ.

ವೈರಲ್‌ ವಿಡಿಯೋವನ್ನು ಮುಸ್ಲಿಮರ ವಿರುದ್ಧ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ವಿಡಿಯೋ ಮತ್ತು ಘಟನೆಯ ಸತ್ಯಾಸತ್ಯತೆಯನ್ನು ಅರಿಯದೇ ಸಾಕಷ್ಟು ಮಂದಿ ಇದು ನಿಜವಾದ ಘಟನೆ ಇರಬಹುದು ಎಂದು ಭಾವಿಸಿ ವ್ಯಾಪಕವಾಗಿ ಈ ವೈರಲ್‌ ವಿಡಿಯೋವನ್ನು ತಪ್ಪು ಸಂದೇಶಗಳಿಂದ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದರ ಹಿಂದಿನ ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ ನಮಗೆ 15 ಸೆಪ್ಟಂಬರ್‌ 2018ರಂದು ಮಿರರ್‌ ಸುದ್ದಿ ತಾಣ “Gang of masked thugs kick stricken traffic warden in the head and rob him of his moped in shocking footage” ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದ ಅಂಕಣವೊಂದು ಪತ್ತೆಯಾಗಿದೆ.

ಇನ್ನಷ್ಟು ಹುಡುಕಿದಾಗ ಇದೇ ರೀತಿಯ ಹಲವು ವರದಿಗಳು ಪತ್ತೆಯಾಗಿವೆ. ಆ ವರದಿಗಳ ಪ್ರಕಾರ ದನ್ಯಾಲ್ ಬಶೀರ್ ಮತ್ತು ಇತರ ಪುರುಷರ ಗುಂಪು ಟ್ರಾಫಿಕ್ ವಾರ್ಡನ್ ಚಾರ್ಲಿ ವೆಸ್ಟನ್‌ ರವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. 14 ಸೆಪ್ಟೆಂಬರ್ 2018 ರಂದು ಬರ್ಮಿಂಗ್ಹ್ಯಾಮ್‌ನ ಆಲಂ ರಾಕ್‌ನ ಹಾರ್ಟೋಪ್ ರಸ್ತೆಲ್ಲಿ ಈ ಘಟನೆ ನಡೆದಿದ್ದು. ಈ ಘಟನೆಯಲ್ಲಿ ಪದೇ ಪದೇ ಚಾರ್ಲಿ ವೆಸ್ಟನ್ ಅವರ ಹೆಲ್ಮೆಟ್ ಅನ್ನು ಕಿತ್ತುಹಾಕಲು ಬಶೀರ್ ಮತ್ತು ಗುಂಪು ಪ್ರಯತ್ನಿಸುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ರೆಕಾರ್ಡ್‌ ಮಾಡಿದ್ದರು. ಘಟನೆಯ ನಂತರ ಪ್ರಕರಣ ದಾಖಲಿಸಿದ ಪೊಲೀಸರು ಬರ್ಮಿಂಗ್ಹ್ಯಾಮ್ ಕ್ರೌನ್ ಕೋರ್ಟ್‌ನಲ್ಲಿ ಬಶೀರ್‌ ಹಾಗೂ ಇನ್ನೀತರ ಅಪರಾಧಿಗಳಿಗೆ ಒಂಭತ್ತು ತಿಂಗಳ ಶಿಕ್ಷೆಯನ್ನು ವಿಧಿಸಲಾಯಿತು ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇತ್ತೀಚೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಲೇಬರ್‌ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ಮುಸಲ್ಮಾನರು ಪುಂಡಾಟ ತೋರಿದ್ದಾರೆ ಎಂಬುದು ಸುಳ್ಳು. ಟ್ರಾಫಿಕ್‌ ವಾರ್ಡನ್‌ ಮೇಲೆ ಮುಸ್ಲಿಂ ಪುರುಷರ ಗುಂಪು ಹಲ್ಲೆ ನಡೆಸಿದೆ ಎನ್ನಲಾದ ವಿಡಿಯೋ 2018ಕ್ಕೆ ಸಂಬಂಧ ಪಟ್ಟಿದೆ. ಹಾಗಾಗಿ ಸುಳ್ಳು ಆಪಾದನೆಯೊಂದಿಗೆ ವೈರಲ್‌ ಆಗುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಎಡಿಟ್ ಪೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *